ನಾಪೋಕ್ಲು, ಜೂ. 19 : ಎಮ್ಮೆಮಾಡು ಗ್ರಾಮದಲ್ಲಿ ರಸ್ತೆಗಳೆಲ್ಲಾ ಕೆಸರುಮಯವಾಗಿದೆ. ಬಲ್ಲಮಾವಟಿ ಯಿಂದ ಪಡಿಯಾಣಿ ಗ್ರಾಮದ ಮೂಲಕ ಎಮ್ಮೆಮಾಡು ಗ್ರಾಮಕ್ಕೆ ಸಂಪರ್ಕಿಸುವ ರಸ್ತೆ ಉತ್ತಮ ವಾಗಿದ್ದರೂ ಮುಖ್ಯರಸ್ತೆ ದುಸ್ಥಿತಿ ಗೊಳಗಾಗಿದೆ. ಇನ್ನು ನಾಪೋಕ್ಲುವಿ ನಿಂದ ಕೂರುಳಿ ಗ್ರಾಮಕ್ಕಾಗಿ ಸಾಗಿ ಬರುವ ರಸ್ತೆಯ ಪರಿಸ್ಥಿತಿಯಂತೂ ಇನ್ನೂ ಶೋಚನೀಯ. ಹದಗೆಟ್ಟ ರಸ್ತೆಗಳಿಂದಾಗಿ ಈ ಗ್ರಾಮಕ್ಕೆ ಸಂಚಾರ ದುಸ್ತರವಾಗಿದೆ.ಬಾಡಿಗೆ ವಾಹನಗಳ ಚಾಲಕರು ಬರಲು ಹಿಂದೇಟು ಹಾಕುತ್ತಿದ್ದಾರೆ. ಸುಮಾರು 5ಸಾವಿರ ಜನಸಂಖ್ಯೆಯುಳ್ಳ ಗ್ರಾಮಕ್ಕೆ ಹಲವು ಬಸ್ ಸೌಲಭ್ಯ ಕಲ್ಪಿಸಲಾಗಿದೆ.ಆದರೆ ಕೆಸರಿನಿಂದಾವೃತವಾದ ರಸ್ತೆಗಳಲ್ಲಿ ವಾಹನಗಳ ಸಂಚಾರ ದುಸ್ತರವಾಗಿದೆ. ಜೊತೆಗೆ ಸಂಚಾರಕ್ಕೆ ನೌಕರರು, ಗ್ರಾಮಸ್ಥರು, ಸಾರ್ವಜನಿಕರು ಆಟೋವನ್ನು ಅವಲಂಬಿಸುತ್ತಿದ್ದು ಅಧಿಕ ಬಾಡಿಗೆ ನೀಡುವಂತಾಗಿದೆ. ಈ ಧಾರ್ಮಿಕ ಕೇಂದ್ರಕ್ಕೆ ಬೇರೆ ಬೇರೆ ಊರುಗಳಿಂದ ಹಲವು ಭಕ್ತರು ವಾಹನ ಗಳಲ್ಲಿ ಆಗಮಿಸುತ್ತಾರೆ. ಮಳೆಗಾಲ ದಲ್ಲಂತೂ ಈ ಹೊಂಡ ಬಿದ್ದ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದು ದುಸ್ತರವಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ರಸ್ತೆಯನ್ನು ವಿಸ್ತರಣೆ ಮಾಡಲಾಗಿದೆ. ರಸ್ತೆ ಸಂಪೂರ್ಣ ಮಣ್ಣಿನಿಂದ ಕೂಡಿದ್ದು ಹತ್ತಾರು ವಾಹನಗಳು ಸಾಗುವದರಿಂದಾಗಿ ರಸ್ತೆ ಪೂರ್ತಿ ಕೆಸರುಮಯ. ಎಮ್ಮೆಮಾಡು ಕೂರುಳಿ ಸಂಪರ್ಕ ರಸ್ತೆ ಹದಗೆಟ್ಟಿದೆ, ಎಮ್ಮೆಮಾಡು ಗ್ರಾಮಕ್ಕೆ ಬೇರೆ ಬೇರೆ ಗ್ರಾಮಗಳಿಂದ ಬರುತ್ತಿದ್ದ ಸರ್ಕಾರಿ ಬಸ್‍ಗಳು ಬರುತ್ತಿದ್ದರೂ ರಸ್ತೆ ದುಸ್ಥಿತಿ ಯಿಂದ ಜನ ಪರದಾಡುವಂತಾಗಿದೆ. ವಿವಿಧ ಶಾಲೆಗಳ ವಾಹನಗಳೂ ಈ ರಸ್ತೆಯಲ್ಲಿ ಸಂಚರಿಸುತ್ತಿವೆ.ಶಾಲಾ ಮಕ್ಕಳಿಗೆ ನಡೆದಾಡಲು ಕಷ್ಟಕರವಾಗಿದೆ. ‘ಮುಖ್ಯರಸ್ತೆಯಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸಬಹುದು.ಆದರೆ ಕೂರುಳಿ–ಎಮ್ಮೆಮಾಡು ರಸ್ತೆಯಲ್ಲಿ ಮಾತ್ರ ವಾಹನ ಚಾಲನೆ ಸಾಧ್ಯವಿಲ್ಲ. ರಸ್ತೆ ಹಲವು ಭಾಗಗಳಲ್ಲಿ ಹದಗೆಟ್ಟಿದ್ದು ತುರ್ತಾಗಿ ದುರಸ್ಥಿಪಡಿಸಬೇಕಿದೆ.’ ಎನ್ನುತ್ತಾರೆ ಆಟೋ ಚಾಲಕ ಅಬೂಬಕರ್. ದ್ವಿಚಕ್ರ ವಾಹನ ಚಾಲಕರಿಗಂತೂ ಕೂರುಳಿ–ಎಮ್ಮೆಮಾಡು ರಸ್ತೆ ಸವಾಲಿನ ರಸ್ತೆಯಾಗಿದೆ.

-ದುಗ್ಗಳ ಸದಾನಂದ