ಶ್ರೀಮಂಗಲ, ಜೂ.19 : ಕೊಡಗಿನ ತಲಕಾವೇರಿ, ಬ್ರಹ್ಮಗಿರಿ ಅಭಯಾರಣ್ಯವನ್ನು ಸೂಕ್ಷ್ಮ ಪರಿಸರ ತಾಣವೆಂದು ಘೋಷಿಸಿದ್ದು, ಈ ಯೋಜನೆಗೆ ಆಕ್ಷೇಪಣೆ ಸಲ್ಲಿಸಲು ಕರಡು ಅಧಿಸೂಚನೆ ಪ್ರಕಟಿಸಿದ ನಿಗದಿತ ದಿನಾಂಕದೊಳಗೆ ಸಲ್ಲಿಸಲಿಲ್ಲ; ನಂತರ ಅಂತಿಮ ಅಧಿಸೂಚನೆ ಜಾರಿಯಾಗುವ ಮೂಲಕ ಈ ಯೋಜನೆ ಘೋಷಣೆಯಾಗಿದೆ. ಈ ಯೋಜನೆಯನ್ನು ಖಾಸಗಿ ಜಾಗಕ್ಕೆ ಅನ್ವಯಿಸದಂತೆ ಇದರ ಮಿತಿಯನ್ನು ಅರಣ್ಯ ಸರಹದ್ದಿಗೆ ಸೀಮಿತಗೊಳಿಸಲು ಪ್ರಯತ್ನಿಸಬೇಕಾಗಿದೆ ಎಂದು ಕಾಫಿ ಮಂಡಳಿ ಸದಸ್ಯ ಬೊಟ್ಟಂಗಡ ಎಂ.ರಾಜು ಅಭಿಪ್ರಾಯಪಟ್ಟರು.
ಶ್ರೀಮಂಗಲದಲ್ಲಿ ಸೂಕ್ಷ್ಮ ಪರಿಸರ ತಾಣ ಯೋಜನೆ ಜಾರಿಯಾಗಿರುವ ಬಗ್ಗೆ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿದರು. ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ ಅವರು, ವಿಧಾನಸಭಾಧ್ಯಕ್ಷರಾಗಿದ್ದ ಕಳೆದ ಅವಧಿಯಲ್ಲಿ ಈ ಯೋಜನೆಯನ್ನು ಜಾರಿಗೊಳಿಸುವಂತೆ ಕೇಂದ್ರ ಸರ್ಕಾರ ರಾಜ್ಯ ಸರಕಾರಗಳಿಗೆ ಸೂಚಿಸಿತ್ತು. ಈ ಸಂದರ್ಭ ಬೋಪಯ್ಯ ಅವರ ಒತ್ತಾಯದ ಮೇರೆ ತಲಕಾವೇರಿ ಹಾಗೂ ಬ್ರಹ್ಮಗಿರಿಯನ್ನು ಕೈ ಬಿಟ್ಟು ದೇವಮಚ್ಚಿ ಅರಣ್ಯವನ್ನು ಮಾತ್ರ ವ್ಯಾಪ್ತಿಗೆ ಸರಕಾರ ತಂದಿತ್ತು ಎಂದರು.
ಈ ಯೋಜನೆ ಜಾರಿಗೊಳಿಸಲು ಸುಪ್ರೀಂಕೋರ್ಟ್ನ ನಿರ್ದೇಶನ ಇರುವದರಿಂದ ದೇಶದ ವಿವಿಧ ರಾಜ್ಯಗಳು ಅನಿವಾರ್ಯವಾಗಿ ಯೋಜನೆಯನ್ನು ಜಾರಿಗೊಳಿಸ ಬೇಕಾಗಿದೆ. ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯ ಕೇಸು ಎದುರಿಸಬೇಕಾಗುತ್ತದೆ ಎಂದು ಹೇಳಿದರು.
ಸೂಕ್ಷ್ಮ ಪರಿಸರ ತಾಣ ಹಾಗೂ ಕಸ್ತೂರಿ ರಂಗನ್ ವರದಿಗಳಿಂದ ಜಿಲ್ಲೆಯ ಜನರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಜನರು ಎಚ್ಚರದಿಂದ ಇರಬೇಕು. ಜನರ ಹೋರಾಟವನ್ನು ನಿರ್ಲಕ್ಷಿಸಿದರೆ ನ್ಯಾಯಾಲಯದ ಮೂಲಕ ಹೋರಾಟ ನಡೆಸಬೇಕಾಗಬಹುದು ಎಂದು ಎಚ್ಚರಿಸಿದರು.
ಜಿಲ್ಲಾ ಬೆಳೆಗಾರರ ಒಕ್ಕೂಟದ ಗೌರವ ಅಧ್ಯಕ್ಷ ಅಜ್ಜಮಾಡ ಶಂಕರು ನಾಚಪ್ಪ ಮಾತನಾಡಿ, ಸೂಕ್ಷ್ಮ ಪರಿಸರ ತಾಣ ಯೋಜನೆ
(ಮೊದಲ ಪುಟದಿಂದ) ಸಮಸ್ಯೆಯನ್ನು ತನ್ನ ಹೆಗಲಿಗೆ ಬಿಡಿ ಎಂದು ಹೇಳಿದ ಸಂಸದ ಪ್ರತಾಪ್ ಸಿಂಹ ಅವರು ಈಗ ಮೌನವಾಗಿರುವದೇಕೆ.? ಈ ಯೋಜನೆ ಜಾರಿಯಾಗುವವರೆಗೂ ಈ ಯೋಜನೆ ಜಿಲ್ಲೆಯ ಜನತೆಗೆ ಮಾರಕ. ಯಾವದೇ ಕಾರಣಕ್ಕೆ ಈ ಯೋಜನೆಯನ್ನು ಜಾರಿಯಾಗಲು ಬಿಡುವದಿಲ್ಲ. ಇದು ಕೊಡಗಿನ ಜನರ ಅಸ್ತಿತ್ವದ ಪ್ರಶ್ನೆ ಎಂದು ಹೇಳುತ್ತಾ ಬಂದ ಶಾಸಕ ಕೆ.ಜಿ. ಬೋಪಯ್ಯ ಅವರು ಇದೀಗ ಯೋಜನೆ ಜಾರಿಯಾದ ನಂತರ ಈ ಯೋಜನೆಯಿಂದ ಜನತೆ ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ತಮ್ಮ ಅನುಮಾನಾಸ್ಪದ ನಡೆ ಬಗ್ಗೆ ಜನರನ್ನು ಗೊಂದಲಕ್ಕೆ ಸಿಲುಕಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾ ಹಿತರಕ್ಷಣಾ ಸಮಿತಿ ಅಧ್ಯಕ್ಷ ಅಜ್ಜಮಾಡ ಕಟ್ಟಿಮಂದಯ್ಯ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯ ಜನತೆಗೆ ಮಾರಕವಾಗುವ ಸೂಕ್ಷ್ಮ ಪರಿಸರ ತಾಣ ಯೋಜನೆ ವಿರುದ್ದ ನ್ಯಾಯಾಲಯದ ಮೊರೆ ಹೋಗುವ ಮೂಲಕ ಇದರ ಅನುಷ್ಠಾನ ಖಾಸಗಿ ಜಾಗಕ್ಕೆ ಅನ್ವಯಿಸುವದನ್ನು ತಡೆಗಟ್ಟಬೇಕಾಗಿದೆ ಎಂದು ಹೇಳಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಕಳ್ಳಂಗಡ ರಜಿತ್ ಪೂವಣ್ಣ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾಣೀರ ಮುತ್ತಪ್ಪ, ಶ್ರೀಮಂಗಲ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಕಾಳಿಮಾಡ ಮುತ್ತಣ,್ಣ ಸಭೆಯ ಗ್ರಾ.ಪಂ. ಸದಸ್ಯ ಚೋನೀರ ಕಾಳಯ್ಯ ಹಾಗೂ ಪ್ರಮುಖರು ಹಾಜರಿದ್ದರು.