ಮಡಿಕೇರಿ, ಜೂ. 19: ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಹಕಾರಿ ಸಂಸ್ಥೆಯಾದ ಹಾಪ್ ಕಾಮ್ಸ್‍ನಲ್ಲಿ ಮಾವಿನ ಕಾಯಿಗಳನ್ನು ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡನ್ನು ಬಳಸುತ್ತಿರುವ ಬಗ್ಗೆ ದೃಢಪಡಿಸ ಲಾಗಿದೆ. ಹೀಗೆ ಅಸಿಟಲಿನಿಂದ ಹಣ್ಣಾಗಿಸುವ ಮಾವು ಆರೋಗ್ಯಕ್ಕೆ ಮಾರಕ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಸದನದಲ್ಲಿ ಸರಕಾರದ ಗಮನ ಸೆಳೆದಿದ್ದಾರೆ, ಇದಕ್ಕೆ ಉತ್ತರಿಸಿದ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು, ಕರ್ನಾಟಕ ರಾಜ್ಯದ ಸರ್ಕಾರಿ ಸ್ವಾಮ್ಯಕ್ಕೆ ಒಳಪಡುವ ಸಹಕಾರಿ ಸಂಸ್ಥೆಯಾದ ಹಾಪ್ ಕಾಮ್ಸ್‍ನಲ್ಲಿ ಮಾವಿನ ಕಾಯಿಗಳನ್ನು ಹಣ್ಣು ಮಾಡಲು ಕ್ಯಾಲ್ಸಿಯಂ ಕಾರ್ಬೈಡನ್ನು ಬಳಸಲು ಅವಕಾಶವಿರುವದಿಲ್ಲ. ಉತ್ತಮ ಗುಣಮಟ್ಟದ ಹಣ್ಣುಗಳನ್ನು ಗ್ರಾಹಕರಿಗೆ ನೀಡಲು ಸರ್ಕಾರವು ಕೆಳಕಂಡ ಕ್ರಮಗಳನ್ನು ಕೈಗೊಂಡಿರುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹಾಪ್‍ಕಾಮ್ಸ್ ಸಂಸ್ಥೆಯಲ್ಲಿ ಮಾವು ಹಣ್ಣುಗಳನ್ನು ಮಾಗಿಸಲು ಮೂರು ಉಗ್ರಾಣಗಳಿರುತ್ತವೆ. ಮೂರು ಉಗ್ರಾಣಗಳಲ್ಲಿ ಮಾವು ಮಾಗಿಸುವ 6 ಘಟಕಗಳನ್ನು ಸಂಸ್ಥೆಯು ಹೊಂದಿರುತ್ತದೆ. ಪ್ರತಿ ಘಟಕದಿಂದ 4 ಮೆಟ್ರಿಕ್ ಟನ್ ಮಾವಿನ ಕಾಯಿಯನ್ನು ಮಾಗಿಸುವ ಸಾಮಥ್ರ್ಯವನ್ನು ಹೊಂದಿರುತ್ತದೆ. ಹಾಪ್‍ಕಾಮ್ಸ್ ಸಂಸ್ಥೆಯು ಸದಸ್ಯ ರೈತರಿಂದ ಮಾವಿನ ಕಾಯಿಯನ್ನು ಮಾತ್ರ ನೇರವಾಗಿ ಖರೀದಿಸಿ ವೈಜ್ಞಾನಿಕವಾಗಿ ಹಣ್ಣು ಮಾಡಿ, ನೇರವಾಗಿ ಮಾರಾಟ ಮಳಿಗೆಗಳಿಗೆ ವಿತರಿಸಲಾಗುತ್ತಿದೆ. ಪ್ರತಿ ವರ್ಷವೂ ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ರಾಸಾಯನಿಕ ಮುಕ್ತ ಮಾವು - ಹಲಸು ಮೇಳಗಳನ್ನು ಹಾಪ್‍ಕಾಮ್ಸ್ ಸಂಸ್ಥೆಯು ಮಾವು ಋತು ಮಾನದಲ್ಲಿ ಹಮ್ಮಿಕೊಳ್ಳುತ್ತಿದೆ.

ಮಾವಿನ ಕಾಯಿಯನ್ನು ಹಣ್ಣು ಮಾಡಿ ತರುವ ಸದಸ್ಯ ರೈತರ ಹಣ್ಣುಗಳನ್ನು ಪ್ರತಿನಿತ್ಯ ಪರೀಕ್ಷಿಸಲು 13 ಮಾರ್ಗಗಳಾಗಿ ವಿಂಗಡಿಸಿ ಪ್ರತಿ ಮಾರ್ಗಕ್ಕೆ ಜಾಗೃತದಳದ ಸದಸ್ಯರನ್ನು ನಿಯೋಜಿಸಲಾಗಿರುತ್ತದೆ.

ಹಾಪ್‍ಕಾಮ್ಸ್ ಸಂಸ್ಥೆಯಲ್ಲಿ ಹಣ್ಣು ಮಾಗಿಸುವ ಪದ್ಧತಿಯನ್ನು ಯಾವದೇ ಸಂದರ್ಭದಲ್ಲಿ ಸಾರ್ವಜನಿಕರು, ಮಾಧ್ಯಮ ಮಿತ್ರರು ಹಾಗೂ ಇತರರು ವೀಕ್ಷಿಸಲು ಮುಕ್ತ ಅವಕಾಶವಿರುತ್ತದೆ ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.