ಮಡಿಕೇರಿ, ಜೂ. 20: ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕಾವೇರಿ ಸ್ವಚ್ಛತೆಗೆ ಆದ್ಯತೆ, ಸರ್ಕಾರದ ವ್ಯವಹಾರಗಳು ಕನ್ನಡ ಭಾಷೆಯಲ್ಲಿಯೇ ಆಗುವಂತೆ ನಿರ್ಣಯ ಕೈಗೊಂಡಿರುವದು ಸೇರಿದಂತೆ ಮಡಿಕೇರಿ ತಾಲೂಕು ಕ.ಸಾ.ಪ. ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ ಮಂಡಿಸಿದರು. ಸಾಹಿತ್ಯಾಸಕ್ತರು ಚಪ್ಪಾಳೆ ಮೂಲಕ ನಿರ್ಣಯವನ್ನು ಬೆಂಬಲಿಸಿದರು.

*ಸರಕಾರದ ವ್ಯವಹಾರಗಳು ಮಾತೃಭಾಷೆ ಕನ್ನಡದಲ್ಲಿಯೇ ನಡೆಯಬೇಕು ಎಂಬ ಆದೇಶವಿದ್ದರೂ ಇನ್ನೂ ಕೂಡ ಸಮರ್ಪಕವಾಗಿ ಕನ್ನಡದಲ್ಲಿ ವ್ಯವಹಾರಗಳು ನಡೆಯದಿರುವದು ವಿಷಾದನೀಯ. ಹಾಗಾಗಿ ಸರಕಾರ ಎಲ್ಲಾ ಸರಕಾರಿ ಹಾಗೂ ಖಾಸಗಿ ಕಚೇರಿಯಲ್ಲಿ ವ್ಯವಹಾರಗಳು ಕನ್ನಡದಲ್ಲಿಯೇ ನಡೆಯುವಂತೆ ಕ್ರಮ ಕೈಗೊಳ್ಳಬೇಕು.

*ಕಾವೇರಿ ಕರ್ನಾಟಕದ ಜೀವನದಿ. ಕಾವೇರಿ ಜೀವನದಿ ಇಂದು ಶುಚಿತ್ವವನ್ನು ಕಳೆದುಕೊಳ್ಳುತ್ತಿದೆ. ಆದ್ದರಿಂದ ಸರಕಾರ ಕಾವೇರಿ ನದಿ ಸ್ವಚ್ಛತೆಗೆ ಕಾನೂನು ಕಾಯಿದೆಯನ್ನು ರೂಪಿಸಿ ಅನುಷ್ಠಾನಗೊಳಿಸಬೇಕು.

*ಮಂಜಿನ ನಗರಿ ಮಡಿಕೇರಿ ಕರ್ನಾಟಕದ ಕಾಶ್ಮೀರ ಎಂದು ಪ್ರಸಿದ್ಧಿಯಾಗಿರುವ ಕೊಡಗು ಪರಿಸರ ಸ್ನೇಹ ಪ್ರವಾಸಿ ತಾಣ. ಜಗತ್ತಿನ ಮೂಲೆ ಮೂಲೆಗಳಿಂದ ಪ್ರತಿವರ್ಷ ಲಕ್ಷಾನುಗಟ್ಟಲೆ ಪ್ರವಾಸಿಗರನ್ನು ಕೈಬೀಸಿ ಆಹ್ವಾನಿಸುತ್ತಿದೆ. ಪ್ರವಾಸೋದ್ಯಮ ಬಹಳ ವೇಗವಾಗಿ ಬೆಳೆಯುವ ಒಂದು ಸೇವಾ ಕ್ಷೇತ್ರವಾಗಿರುವದರಿಂದ ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಪೂರಕವಾದ ಕ್ರಮಗಳನ್ನು ಸರಕಾರ ರೂಪಿಸಬೇಕು.

*ಕೊಡಗು ಜಿಲ್ಲೆ ಪಕ್ಕದ ರಾಜ್ಯ ಕೇರಳದ ಗಡಿ ಪ್ರದೇಶವನ್ನು ಹೊಂದಿರುವದರಿಂದ ಗಡಿ ಪ್ರದೇಶವಾದ ಕರಿಕೆ ಹಾಗೂ ಮಾಕುಟ್ಟದಲ್ಲಿ ಕನ್ನಡ ಭಾಷೆ ಕಣ್ಮರೆಯಾಗುತ್ತಿರುವದು ಕಾಣುತ್ತಿದ್ದೇವೆ. ಆದ್ದರಿಂದ ಆ ಭಾಗದಲ್ಲಿ ಕನ್ನಡ ಅಭಿವೃದ್ಧಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು.

*ಕೊಡಗಿನಾದ್ಯಂತ ಎಲ್ಲಾ ಕಚೇರಿ, ಅಂಗಡಿ, ರಸ್ತೆ, ಬೀದಿಗಳಿಗೆ ಕನ್ನಡದಲ್ಲಿ ನಾಮಫಲಕವನ್ನು ಅಳವಡಿಸುವಂತೆ ಕ್ರಮವಹಿಸುವದು ಅಗತ್ಯ.

*ಕೊಡಗು ವೀರರ - ಶೂರರ ಬೀಡು. ಆದರೆ ಇಂದು ವಿದ್ಯಾವಂತ ಯುವ ಜನಾಂಗ ಹಳ್ಳಿಯಿಂದ ನಗರಗಳ ಕಡೆ ಮುಖ ಮಾಡಿದೆ. ಸರಕಾರ ಯುವ ಜನಾಂಗಕ್ಕೆ ಉದ್ಯೋಗ, ಆದಾಯ ನೀಡುವಂತಹ ಕಾರ್ಯಕ್ರಮಗಳನ್ನು ರೂಪಿಸಿ ಹಳ್ಳಿಯಿಂದ ನಗರದೆಡೆಗಿನ ಪಲಾಯನಕ್ಕೆ ತಡೆಯೊಡ್ಡಬೇಕು.

ವನ್ಯ ಪ್ರಾಣಿ ಹಾಗೂ ಮಾನವ ಸಂಘರ್ಷ ಇಂದು ಕೊಡಗಿನಲ್ಲಿ ಸರ್ವೆ ಸಾಮಾನ್ಯವಾಗಿದೆ. ಸರಕಾರ ಈ ಸಂಘರ್ಷಕ್ಕೆ ಪರಿಹಾರ ರೂಪಿಸಬೇಕು.

*ಮಂಜಿನನಗರಿ ಮಡಿಕೇರಿ ಪುಟ್ಟ ಪಟ್ಟಣವಾಗಿದ್ದು, ದಿನೇ ದಿನೇ ಬೆಳವಣಿಗೆ ಕಾಣುತ್ತಿದೆ. ಜನಸಂಖ್ಯೆ ಯೊಂದಿಗೆ ವಾಹನಗಳ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ವಾಹನ ದಟ್ಟಣೆ ಕಂಡು ಬರುತ್ತಿದ್ದು, ವಾಹನ ನಿಲುಗಡೆಗೆ ಸ್ಥಳಾವಕಾಶವೇ ಇಲ್ಲವಾಗಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ನಗರಸಭೆ ವಾಹನ ನಿಲುಗಡೆಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂಬ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭ ಸಮ್ಮೇಳನಾಧ್ಯಕ್ಷ ಬಿ.ಎ. ಷಂಶುದ್ದೀನ್, ಕ.ಸಾ.ಪ. ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ಗೌರವ ಕಾರ್ಯದರ್ಶಿ ಬಾಳೆಯಡ ಕಿಶಣ್ ಪೂವಯ್ಯ, ಗೌರವ ಕೋಶಾಧಿಕಾರಿ ಬಾಳೆಕಜೆ ಯೋಗೇಂದ್ರ ಇದ್ದರು.