ಮಡಿಕೇರಿ, ಜೂ. 19: ಕೊಡಗಿನ ಭಾಗಮಂಡಲ ನಿವಾಸಿ ಪುರುಷೋತ್ತಮ ಹಾಗೂ ಕುಶಾಲನಗರ ಬಳಿ ಕೂಡಿಗೆಯ ಆಟೋ ಚಾಲಕ ಚೆಲುವರಾಜ್ ಇಬ್ಬರು ಉದ್ಯೋಗದ ಆಸೆಯಿಂದ ಚೆನ್ನೈ ವಿಮಾನ ನಿಲ್ದಾಣದಿಂದ ಮಲೇಷಿಯಾ ಏರ್‍ಲೈನ್ಸ್‍ನಲ್ಲಿ, ಅಲ್ಲಿನ ಕೌಲಲಾಂಪುರ ವಿಮಾನ ನಿಲ್ದಾಣದಲ್ಲಿ ಹೋಗಿ ಇಳಿಯುತ್ತಾರೆ.ಆ ವೇಳೆಗೆ ಭಾರತೀಯ ದೂರವಾಣಿ ಸಂಪರ್ಕ ಜಾಲದ ಮೊಬೈಲ್ ‘ಸಿಮ್’ಗಳನ್ನು ಇಬ್ಬರು ಬದಲಾಯಿಸಿಕೊಂಡು, ಮಲೇಷಿಯಾ ಸಿಮ್‍ಗಳನ್ನು ಸಂಪರ್ಕ ವ್ಯವಸ್ಥೆಗೆ ಜೋಡಿಸಿಕೊಳ್ಳುತ್ತಾರೆ. ಅಲ್ಲಿ ಇವರಿಬ್ಬರಿಗೆ ಉದ್ಯೋಗ ಕಲ್ಪಿಸಲು ಕರೆದುಕೊಂಡು ಹೋಗಬೇಕಿದ್ದ ವ್ಯಕ್ತಿಗೆ ಪುರುಷೋತ್ತಮ ಕರೆಮಾಡಿ ಸಂಪರ್ಕಿಸುತ್ತಾರೆ.
ದೂರವಾಣಿಗೆ ಸಿಕ್ಕ ವ್ಯಕ್ತಿ ಆ ಕಡೆಯಿಂದ ತಿಳಿಸಿದ ಸಲಹೆಯಂತೆ ಇವರಿಬ್ಬರು, ಕೌಲಲಾಂಪುರ ನಿಲ್ದಾಣದ ‘ಇಮಿಗ್ರೇಶನ್ ಸೆಂಟರ್'ಗೆ ತೆರಳುತ್ತಾರೆ. ಅಷ್ಟರಲ್ಲಿ ವಿಮಾನ ನಿಲ್ದಾಣ ಅಧಿಕಾರಿಗಳು ಇವರಿಬ್ಬರ ಪೂರ್ವಾಪರ ವಿಚಾರಿಸುತ್ತಾರೆ.
ಅಪಾಯದ ಮುನ್ಸೂಚನೆ ತಿಳಿಯದ
(ಮೊದಲ ಪುಟದಿಂದ) ಇವರಿಬ್ಬರು ತಮಗೆ ತಿಳಿದ ಹಿಂದಿ ಭಾಷೆಯಲ್ಲಿ ತಾವು ಉದ್ಯೋಗದ ಸಲುವಾಗಿ ಭಾರತದಿಂದ ಬಂದಿದ್ದಾಗಿ ಉತ್ತರಿಸಲಾಗಿ, ದಾಖಲೆಗಳನ್ನು ತೋರಿಸುವಂತೆ ಸೂಚಿಸಿದ್ದಾರೆ. ಅಧಿಕಾರಿಗಳು ದಾಖಲಾತಿಗಳ ಪರಿಶೀಲನೆ ನಡೆಸಲಾಗಿ, ಚೆಲುವರಾಜ್ ಹಾಗೂ ಪುರುಷೋತ್ತಮ ಕೇವಲ ಪ್ರವಾಸಿ ‘ವೀಸಾ' ಹಾಗೂ ಏಕಮುಖ ವಿಮಾನ ಟಿಕೆಟ್ ಮಾತ್ರ ಹೊಂದಿದ್ದು, ಮಲೇಷಿಯಾದಿಂದ ಹಿಂತಿರುಗುವ ಟಿಕೆಟ್ ಹೊಂದಿರುವದಿಲ್ಲ.
ದಾಖಲೆಗಳು ನೀಡಿದ ಸುಳಿವಿನ ಮೇರೆಗೆ ಅಲ್ಲಿನ ವಿಮಾನ ನಿಲ್ದಾಣದÀ ಸುರಕ್ಷಾ ಅಧಿಕಾರಿಗಳು ತಕ್ಷಣ ಇಬ್ಬರನ್ನು ವಶಕ್ಕೆ ಪಡೆದು ಕೊಠಡಿಯೊಂದರಲ್ಲಿ ಬೇರೆ ಬೇರೆ ದೇಶಗಳಿಂದ ಬಂದು ನಿಯಮ ಉಲ್ಲಂಘನೆಯಡಿ ಬಂಧಿಯಾಗಿದ್ದ ನೂರಾರು ಮಂದಿಯ ನಡುವೆ ತಳ್ಳಿಬಿಡುತ್ತಾರೆ. ಅಲ್ಲದೆ ಮೊಬೈಲ್, ಪಾಸ್‍ಪೋರ್ಟ್ ಇತ್ಯಾದಿ ಮುಟ್ಟುಗೋಲು ಹಾಕಿಕೊಳ್ಳುತ್ತಾರೆ.
ಬಾಂಗ್ಲಾಬಂದಿ ಆಸರೆ
ಈ ನಡುವೆ ದಿಕ್ಕು ತೋಚದ ಇವರಿಬ್ಬರು ಮೂರು ದಿನಗಳ ಸೆರೆವಾಸದಿಂದ ಹೊರಬರಲು ಪರದಾಡುತ್ತಿರುವಾಗ, ಇವರಿದ್ದ ವಿಮಾನ ನಿಲ್ದಾಣ ಕೊಠಡಿಯಲ್ಲಿಯೇ ಬಾಂಗ್ಲಾದೇಶದ ಬಂದಿಯೊಬ್ಬ ಬಿಡುಗಡೆಗೊಂಡು ಹೊರ ಹೋಗಲು ಸಿದ್ಧನಾಗುತ್ತಾನೆ. ಇದನ್ನು ಗಮನಿಸಿದ ಪುರುಷೋತ್ತಮ ಕೈಗೆ ಸಿಕ್ಕ ಕಾಗದದ ಚೂರೊಂದರಲ್ಲಿ ವಿಟ್ಲದಲ್ಲಿರುವ ತನ್ನ ತಂಗಿ ಹಾಗೂ ಚೆಲುವರಾಜ್ ಪತ್ನಿಯ ವಾಟ್ಸ್‍ಆ್ಯಪ್‍ಗೆ, ಬಾಂಗ್ಲಾ ವ್ಯಕ್ತಿಯ ಮೊಬೈಲ್‍ನಿಂದ ಸಂದೇಶ ರವಾನಿಸಲು ಕೋರುತ್ತಾನೆ.
ಅಲ್ಲಿಂದ ಹೊರಬಂದ ಬಾಂಗ್ಲಾ ಮೂಲದ ಆತ ಇವರುಗಳು ನೀಡಿದ್ದ ವಾಟ್ಸ್‍ಆ್ಯಪ್‍ಗೆ ಕೌಲಲಾಂಪುರದಲ್ಲಿ ಸೆರೆಯಾಗಿರುವ ವಿಷಯದೊಂದಿಗೆ ಭಾರತಕ್ಕೆ ಹಿಂತಿರುಗಲು ವಿಮಾನ ಟಿಕೆಟ್ ಕಳುಹಿಸಿಕೊಡುವಂತೆ ಬರೆದುಕೊಟ್ಟಿದ್ದ ಚೀಟಿ ಸಂದೇಶ ರವಾನಿಸಿದ್ದಾನೆ.
ಆ ಮೂಲಕ ವಿಷಯ ತಿಳಿದು ಇತ್ತ ಮೂರ್ನಾಲ್ಕು ದಿನಗಳಿಂದ ಸಂಪರ್ಕವಿಲ್ಲದೆ ಆತಂಕಗೊಂಡಿದ್ದ ಕುಟುಂಬವರ್ಗ ವಾಟ್ಸ್‍ಆ್ಯಪ್ ಸಂದೇಶದಂತೆ ತಕ್ಷಣ ಕಾರ್ಯಪ್ರವೃತ್ತರಾಗಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಅವರನ್ನು ಭೇಟಿ ಮಾಡಿದ್ದಾರೆ. ಆ ಮೂಲಕ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ರವಾನಿಸಿದ ಮೇರೆಗೆ, ಸಚಿವೆ ಸುಷ್ಮಾ ಸ್ವರಾಜ್ ಅವರು ಕೌಲಲಾಂಪುರ ವಿಮಾನ ನಿಲ್ದಾಣ ಅಧಿಕಾರಿಗಳ ಸಂಪರ್ಕ ಸಾಧಿಸಿ, ಇವರಿಬ್ಬರನ್ನು ಮರಳಿ ಭಾರತಕ್ಕೆ ಕರೆತರಲು ಸಹಾಯ ಹಸ್ತ ನೀಡುತ್ತಾರೆ.
ಆ ಮೂಲಕ ತಾ. 6ರಿಂದ ತಾ. 14ರ ತನಕ ಮಲೇಷಿಯಾದಲ್ಲಿ ಸಿಲುಕಿಕೊಂಡಿದ್ದ ಪುರುಷೋತ್ತಮ ಹಾಗೂ ಚೆಲುವರಾಜ್ ಹಲವು ಕಷ್ಟಕೋಟಲೆಗಳ ನಡುವೆ ಸ್ವದೇಶಕ್ಕೆ ಹಿಂತಿರುಗಿ ಬರುತ್ತಾರೆ.
-ಶ್ರೀಸುತ.