ಮಡಿಕೇರಿ, ಜೂ. 18: ವಿದೇಶಗಳಲ್ಲಿ ಉದ್ಯೋಗ ಕೊಡಿಸುವದಾಗಿ ನಂಬಿಸಿ, ಲಕ್ಷಗಟ್ಟಲೆ ಹಣ ಲಪಟಾಯಿಸುವ ಮೂಲಕ ನಿರುದ್ಯೋಗಿ ಅಮಾಯಕ ಮಂದಿಗೆ ವಂಚಿಸುತ್ತಿರುವ ಭಾರೀ ಮೋಸದ ಜಾಲವೊಂದು ಕಾರ್ಯಾಚರಿಸುತ್ತಿರುವ ಸಂಗತಿ ಬಹಿರಂಗಗೊಂಡಿದೆ. ಜಿಲ್ಲೆಯ ಭಾಗಮಂಡಲ, ಚೇರಂಬಾಣೆ, ಕುಶಾಲನಗರದ ಮೂವರು ಈ ರೀತಿ ಮೋಸದ ಜಾಲಕ್ಕೆ ಸಿಲುಕಿರುವದು ತಡವಾಗಿ ಬೆಳಕಿಗೆ ಬಂದಿದೆ.

ಭಾಗಮಂಡಲ ನಿವಾಸಿ ದಿವಂಗತ ಎಂ. ರಮೇಶ್ ಎಂಬವರ ಪುತ್ರ ಪುರುಷೋತ್ತಮ (33) ಎಂಬವರು ಬಡತನದಿಂದ ಪಾರಾಗುವ ಕನಸು ಹೊತ್ತು ವಿದೇಶದಲ್ಲಿ ಉದ್ಯೋಗಕ್ಕಾಗಿ ಹಂಬಲಿಸುತ್ತಿದ್ದಾಗ, ಕೆಲವರ ಮಧ್ಯಸ್ಥಿಕೆಯಲ್ಲಿ ಸುಳ್ಯ ನಿವಾಸಿ ಜಾಕಿರ್ ಹುಸೇನ್ ಎಂಬಾತ ಪರಿಚಯವಾಗುತ್ತಾನೆ.

ಈತ ಪುರುಷೋತ್ತಮನಿಗೆ ಮಲೇಷಿಯಾಕ್ಕೆ ತೆರಳಿದರೆ, ಅಲ್ಲಿನ ಕೌಲಲಾಂಪುರದಲ್ಲಿ ಉದ್ಯೋಗವಿದ್ದು, ಚೆನ್ನೈ ಮೂಲಕ ವಿಮಾನದಲ್ಲಿ ಹೋಗಿ ಇಳಿಯುವಷ್ಟರಲ್ಲಿ ತನ್ನ ಸ್ನೇಹಿತರು ಜತೆಯಾಗಿ ಕೆಲಸ ಮಾಡಬೇಕಾದ ಜಾಗಕ್ಕೆ ಕರೆದೊಯ್ಯಲಿರುವದಾಗಿ ನಂಬಿಸುತ್ತಾನೆ. ಅಲ್ಲದೆ ಮಲೇಷಿಯಾಕ್ಕೆ ತೆರಳಲು ಬೇಕಾಗುವ ‘ವೀಸಾ’ ಇತ್ಯಾದಿಗಾಗಿ ಮತ್ತು ಉದ್ಯೋಗ ಕೊಡಿಸಲು ಹಣದ ಆಮಿಷವೊಡ್ಡಿ ರೂ. ಎರಡು ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಕಂತುಗಳಲ್ಲಿ ಬೇರೆ ಬೇರೆ ಸಂದರ್ಭ ಪಡೆದುಕೊಳ್ಳುತ್ತಾನೆ.

ತಾನು ಮೋಸದ ಜಾಲಕ್ಕೆ ಸಿಲುಕುತ್ತಿರುವ ಅರಿವಿಲ್ಲದ ಪುರುಷೋತ್ತಮ, ದೂರದ ಮಲೇಷಿಯಾದಲ್ಲಿ ಒಬ್ಬನೇ ಹೋಗಿ ಕೆಲಸ ಮಾಡುವ ಬದಲಿಗೆ ತನ್ನ ಸಂಬಂಧಿಯೊಬ್ಬರನ್ನು ಜೋಡಿಸಿಕೊಳ್ಳುವ ಆಶಯದಿಂದ, ಕುಶಾಲನಗರದಲ್ಲಿ ಬಡತನದ ನಡುವೆ ಆಟೋ ಚಾಲಕರಾಗಿದ್ದ ಚೆಲುವರಾಜು ಎಂಬವರನ್ನು ಜತೆ ಸೇರಿಸಿಕೊಳ್ಳುತ್ತಾರೆ.

ಆ ವೇಳೆಗೆ ಸುಳ್ಯದ ಜಾಕೀರ್ ಹುಸೇನ್ ಎಂಬ ವ್ಯಕ್ತಿ, ಚೆಲುವರಾಜು ಮೂಲಕ ರೂ. 1.50 ಲಕ್ಷದಷ್ಟು ಹಣ ಹೊಂದಿಕೊಂಡು, ಇಬ್ಬರಿಗೂ ವೀಸಾ ಸಹಿತ ತಾ. 6 ರಂದು ಚೆನ್ನೈನಿಂದ ಮಲೇಷಿಯಾಕ್ಕೆ ತೆರಳಲು ವಿಮಾನ ಟಿಕೆಟ್ ಸಿದ್ಧವೆಂದು ತಿಳಿಸಿದ್ದಾನೆ. ಈತನ ಮಾತು ನಂಬಿಕೊಂಡ ಪರುಷೋತ್ತಮ ಹಾಗೂ ಚೆಲುವರಾಜು ಜತೆಗೂಡಿ, ಕೊಡಗಿನಿಂದ ಚೆನ್ನೈಗೆ ಲಗ್ಗೇಜು ಸಹಿತ ಪ್ರಯಾಣಿಸುತ್ತಾರೆ. ಅಲ್ಲಿ ಹಗಲು 11.45ರ ಸುಮಾರಿಗೆ ‘ಮಲೇಷಿಯಾ ಏರ್‍ಲೇನ್’ ವಿಮಾನವೊಂದು ಹೊರಡಲು ಸಿದ್ಧವಾಗುತ್ತಿದ್ದಾಗ, ಹರೀಶ್ ಎಂದು ಪರಿಚಯಿಸಿಕೊಳ್ಳುವ ಅನಾಮಿಕನೊಬ್ಬ ಇವರಿಬ್ಬರಿಗೆ ವಿಮಾನ ಹತ್ತಿಸಿ ಕೈಗೆ ಟಿಕೆಟ್ ಕೊಟ್ಟು ಕಣ್ಮರೆಯಾಗಿ ಬಿಡುತ್ತಾನೆ! ಅಲ್ಲದೆ ಚೆಲುವರಾಜು ಹಾಗೂ ಪುರುಷೋತ್ತಮ ಇಬ್ಬರು ವಿಮಾನದಲ್ಲಿ ಹೊರಡುವ ಮುನ್ನ ಅನಾಮಿಕ ವ್ಯಕ್ತಿ ಹರೀಶ್ ತನ್ನ ಮೊಬೈಲ್‍ನಲ್ಲಿ ‘ಸೆಲ್ಫಿ’ ಕ್ಲಿಕ್ಕಿಸಿಕೊಳ್ಳುತ್ತಾನೆ.

ಚೆನ್ನೈನಿಂದ ಮಲೇಷಿಯಾ ಏರ್‍ಲೇನ್‍ನಲ್ಲಿ ಕೌಲಲಾಂಪುರ ವಿಮಾನ ನಿಲ್ದಾಣಕ್ಕೆ ಪ್ರಯಾಣ ಮುಂದುವರೆಸಿದ ಬೆನ್ನಲ್ಲೇ ಪುರುಷೋತ್ತಮ ಹಾಗೂ ಚೆಲುವರಾಜ್

(ಮೊದಲ ಪುಟದಿಂದ) ಕುಟುಂಬಕ್ಕೆ ‘ವಾಟ್ಸ್‍ಆಪ್’ ನಲ್ಲಿ ಅನಾಮಿಕನಿಂದ ಫೋಟೋ ರವಾನೆಯಾಗುತ್ತದೆ. ಇತ್ತ ಮನೆ ಮಂದಿಗೆ ಇವರಿಬ್ಬರ ದೂರವಾಣಿ ಸಂಪರ್ಕ ಕಡಿತಗೊಂಡಿದೆ.

ತಾ. 6 ರಿಂದ 9ರ ತನಕ ಯಾವದೇ ಮೊಬೈಲ್ ಸಂಪರ್ಕ ಸಿಗದಿದ್ದ ಮೇರೆಗೆ, ಪುರುಷೋತ್ತಮ ಹಾಗೂ ಚೆಲುವರಾಜ್ ಇವರಿಬ್ಬರ ಮನೆ ಮಂದಿ ಗಾಬರಿಗೊಳ್ಳುತ್ತಾರೆ. ಅಲ್ಲದೆ, ವಾಟ್ಸ್‍ಆಪ್‍ನಲ್ಲಿ ಫೋಟೋ ರವಾನಿಸಿದ್ದ ಚೆನ್ನೈನ ಸಂಖ್ಯೆಗೆ ಕರೆ ಮಾಡಿ ವಿಚಾರಿಸುತ್ತಾರೆ. ಈ ಸಂದರ್ಭ ಮಲೇಷಿಯಾದಲ್ಲಿ ಕೆಲಸಕ್ಕೆ ಸೇರಿರುವ ಕೊಡಗಿನ ಇವರಿಬ್ಬರಿಗೆ ಭಾಷೆಯ ಸಮಸ್ಯೆಯಿಂದ ಮನೆಗೆ ಸಂಪರ್ಕಿಸಲು ಅಡಚಣೆ ಇರಬಹುದು, ಸ್ವಲ್ಪ ಕಾಯಿರಿ ಎಂಬ ಉತ್ತರ ಆ ವ್ಯಕ್ತಿಯಿಂದ ಬಂದಿದೆ. ದಿನಗಳುರುಳಿದಂತೆ ಆತಂಕ ಹೆಚ್ಚಾಗಿ ಮತ್ತೆ ಮತ್ತೆ ಸಂಪರ್ಕಿಸಲು ಪ್ರಯತ್ನಿಸಿದಾಗ ಚೆನ್ನೈನ ವ್ಯಕ್ತಿಯ ಮೊಬೈಲ್ ಸಂಖ್ಯೆ ಸ್ವಿಚ್‍ಆಫ್ ಎಂದು ಪ್ರತಿಕ್ರಿಯಿಸುತ್ತದೆ

ಕಂಗಾಲಾದ ಕುಟುಂಬ

ತಾಯಿಗೆ ಆಘಾತ: ಮಗ ಪುರುಷೋತ್ತಮ ಉದ್ಯೋಗಕ್ಕೆ ಹೋದವ ಮಲೇಷಿಯಾ ವಿಮಾನವೇರಿದ ಬಳಿಕ ಸಂಪರ್ಕಕ್ಕೆ ಸಿಗದ ಬಗ್ಗೆ, ವಿಟ್ಲದಲ್ಲಿರುವ ಈತನ ತಂಗಿ ಸೌಮ್ಯ ಪ್ರಕಾಶ್, ತಾಯಿ ಜಯಮ್ಮ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಈ ಬಗ್ಗೆ ತೀವ್ರ ಆಘಾತ ಹಾಗೂ ಗಾಬರಿಗೊಂಡ ತಾಯಿ ಜಯಮ್ಮ ತನ್ನ ಸಹೋದರ ವಿಜಯ ಎಂಬವರೊಡಗೂಡಿ ಭಾಗಮಂಡಲ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಅಲ್ಲಿ ಪೊಲೀಸರು ದೂರು ದಾಖಲಿಸಿಕೊಳ್ಳದೆ ಮಗನನ್ನು ಹುಡುಕುವಂತೆ ಸಲಹೆ ನೀಡುತ್ತಾರೆ.

ಹಣಲಪಟಾಯಿಸಿ ಜಾರಿ ಕೊಂಡರು: ಅತ್ತ ಪುರುಷೋತ್ತಮ ಹಾಗೂ ಚೆಲುವರಾಜ್ ಇಬ್ಬರಿಗೆ ಉದ್ಯೋಗದ ಆಮಿಷವೊಡ್ಡಿ ಹಣ ಲಪಟಾಯಿಸಿದ ಮಂದಿ, ಕುಟುಂಬದವರ ಸಂಪರ್ಕದಿಂದ ಜಾರಿಕೊಂಡಾಗ, ಅನ್ಯ ಮಾರ್ಗವಿಲ್ಲದೆ ಪುರುಷೋತ್ತಮನ ತಂಗಿ ಸೌಮ್ಯ ಹಾಗೂ ಬಾವ ಪ್ರಕಾಶ್, ಮಂಗಳೂರು ಸಂಸದ ನಳಿನ್‍ಕುಮಾರ್ ಕಟೀಲ್ ಅವರನ್ನು ಸಂಪರ್ಕಿಸಿ ವಿಷಯ ಮುಟ್ಟಿಸುತ್ತಾರೆ.

ಸುಷ್ಮಾ ಆಸರೆ: ಸಂಸದರು ವಿದೇಶಾಂಗ ಸಚಿವಾಲಯಕ್ಕೆ ಸಂಪರ್ಕಿಸಿ ವಿಷಯದ ಬಗ್ಗೆ ಸಚಿವೆ ಸುಷ್ಮಾ ಸ್ವರಾಜ್ ಅವರ ಗಮನ ಸೆಳೆಯುತ್ತಾರೆ. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಕೂಡಲೇ ಮಲೇಷಿಯಾದ ಭಾರತ ರಾಯಭಾರಿ ಕಚೇರಿ ಮೂಲಕ ಕೌಲಲಾಂಪುರ ವಿಮಾನ ನಿಲ್ದಾಣ ಅಧಿಕಾರಿಗಳ ಸಂಪರ್ಕ ಸಾಧಿಸಿ ಪುರುಷೋತ್ತಮ ಹಾಗೂ ಚೆಲುವರಾಜ್ ಇಬ್ಬರ ಇರುವಿಕೆಯನ್ನು ಖಾತರಿ ಪಡಿಸಿಕೊಳ್ಳಲು ಮುಂದಾಗುತ್ತಾರೆ.

ಶ್ರೀ ಸುತ

ಈ ಇಬ್ಬರು ಪತ್ತೆಯಾದದ್ದು ಎಲ್ಲಿ ?

(ನಾಳಿನ ಸಂಚಿಕೆ ನೋಡಿ)