ಮಡಿಕೇರಿ, ಜೂ. 18: ಮಡಿಕೇರಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವನಗಳ ಕಲರವ ಕೇಳಿ ಬಂತು.

ಕನ್ನಡ ನಾಡು ನಮ್ಮಯ ಹೆಮ್ಮೆಯ ಬೀಡು, ಯೋಧರ ನಾಡು ಗಂಡುಗಲಿಗಳ ಬೀಡು ಎಂಬ ಸಾಲುಗಳನ್ನೊಳಗೊಂಡಿದ್ದ ‘ಕನ್ನಡದ ನಾಡ ಮಹಿಮೆ’ ಕವನ ಈ ನಾಡಿನ ವೈಭವವನ್ನು ಪರಿಚಯಿಸಿತು. ರಣಹದ್ದುಗಳ ಭಕ್ಷ್ಯಕ್ಕೆ ಬಲಿಯಾದದ್ದು ಗುಬ್ಬಚ್ಚಿ, ಅಯ್ಯೋ ದೇವನಿರುವಂತೆ ಅಲ್ಲಿ ಇಲ್ಲಿ ಎಲ್ಲೊ? ಎಂಬ ಪ್ರಶ್ನೆಯನ್ನು ಬಿಕ್ಕುತ್ತಿದೆ ಮನ’ ಎಂಬ ಕವನ ಹೊರಹಾಕಿತು. ಒಳ್ಳೆಯತನವನ್ನು ಸಾಬೀತು ಪಡಿಸಬೇಕೆಂದೇನಿಲ್ಲ ಮನಸಾಕ್ಷಿಗೆ ಗೊತ್ತಿದೆ. ಈ ರಂಗವಲ್ಲಿಯಾಟ ನಿಗೂಢ ಪ್ರಶ್ನೆಗಳಿಗೆ ಉತ್ತರ ಬೇಕಿದ್ದರೆ, ಕೇಳಿಕೊ. ಕಲ್ಲು ಬಂಡೆಯಂತಿರುವ ಭಗವಂತನಲ್ಲಿ ಎಂಬ ಸಾಲು.

‘ಭಾವಲಹರಿ’ ಎಂಬ ಕವನದಲ್ಲಿ ಕೇಳಿ ಬಂತು. ನೀವು ಭಾರತಾಂಭೆಯ ಪುತ್ರರು ನಾವು ನಿಮ್ಮ ಮಿತ್ರರು. ನೀವು ಭೂದೇವಿಯ ಮಕ್ಕಳು ಹತಾಶರಾಗದಿರಿ. ಆತ್ಮಹತ್ಯೆ ಮಾಡದಿರಿ ಎಂದು ‘ರೈತಗೀತೆ’ ಎಂಬ ಕವನ ಅನ್ನದಾತನಿಗೆ ಧೈರ್ಯ ತುಂಬಿತು. ಅರಿತು ಬಾಳಲು ಮುಂದಾಗು ಓ ಮನವೆ ತಿವಿದು ಕೊಲ್ಲಬೇಡ ನನ್ನ ಪ್ರತಿದಿನವೇ.., ಎಂಬ ಕೋರಿಕೆ ‘ಜೀವನ ಶೈಲಿ’ ಎಂಬ ಕವನದಲ್ಲಿತ್ತು. ಓ ಮೇಘವೆ ನಿನ್ನ ಸಿಹಿ ಮುತ್ತೊಂದ ಸುರಿಸಿ ನನ್ನೊಡಲ ತಣಿಸಲಾರೆಯಾ... ಎಂದು ಮೇಘನಿಗೆ ಕಳುಹಿಸಿದ ‘ಸಂದೇಶ’ ಕವನದ ಮೂಲಕ ಬಹಿರಂಗವಾಯಿತು.

ಕಷ್ಟದಲ್ಲಿ ತಾಳ್ಮೆ ನಷ್ಟದಲ್ಲಿ ಸಹನೆ, ಕಟುಕರ ಕರಿನೆರಳಿನಲ್ಲಿ ಪ್ರಪಂಚನೋಡುತಾ ಗಿಳಿಯು ಹಾಡುತ್ತಿದೆ ಎಂಬ ಗಿಳಿಯ ಸ್ವಾತಂತ್ರ್ಯ ಗೀತೆಯ ‘ಪಂಜರದಗಿಳಿ’ ಎಂಬ ಕವನದ ಮೂಲಕ ಕೇಳಿ ಬಂತು. ದಶಕಗಳೆಷ್ಟೋ ಕಳೆದರೂ ಮುಗಿಯದೆ ಹೋಯ್ತು. ಕಾವೇರಿ ಕಲಹ ಎಂಬ ಸಾಲನ್ನೊಳಗೊಂಡ ‘ಪುಣ್ಯನದಿ ಕಾವೇರಿ’ ಎಂಬ ಕವನ ಮಾತೆ ಕಾವೇರಿ ಹಾಗೂ ಕರುನಾಡಿನ ನೆಲದ ಪರಿಸ್ಥಿತಿಯ ಬಗ್ಗೆ ಮನದಟ್ಟು ಮಾಡಿತು. ಇದರೊಂದಿಗೆ ಎಳೆಯ ಮೊಗ್ಗುಗಳು ನಾವು, ಮಡಿಲ ಶೋಕ, ತಾಯಿ ಭುವನೇಶ್ವರಿ ಎಂಬ ಕವನಗಳು ವಾಚಿಸಲ್ಪಟ್ಟವು.