ಮಡಿಕೇರಿ, ಜೂ. 18: ಮಾತೃಭೂಮಿ ಹಾಗೂ ಮಾತೃಭಾಷೆಗೆ ಆದ್ಯತೆ ನೀಡುವದರೊಂದಿಗೆ ಕನ್ನಡ ಭಾಷೆಗೆ ಚಿರಋಣಿಯಾಗಿರಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅಭಿಪ್ರಾಯಪಟ್ಟರು.

ಮಡಿಕೇರಿ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಸಾಹಿತ್ಯಿಕ ಪುಸ್ತಕ ಓದುವದರೊಂದಿಗೆ ಕನ್ನಡದ ಪತ್ರಿಕೆಗಳನ್ನು ಹಣಕೊಟ್ಟುಕೊಂಡು ಓದುವ ಹವ್ಯಾಸವನ್ನು ಪ್ರತಿಯೊಬ್ಬರು ಬೆಳೆಸಿಕೊಳ್ಳಬೇಕೆಂದರು.

ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಕರಿಕೆ ಹಾಗೂ ಕುಟ್ಟ ಸೇರಿದಂತೆ ಕೇರಳದ ಗಡಿಭಾಗಗಳಲ್ಲಿ ಕನ್ನಡ ಸಮ್ಮೇಳನವನ್ನು ಆಯೋಜಿಸುವದರೊಂದಿಗೆ ಭಾಷೆಯ ಬೆಳವಣಿಗೆಗೆ ಅಗತ್ಯ ಕ್ರಮ ಕೈಗೊಳ್ಳಬೇಕಾಗಿದೆ. ಭಾಷೆಯ ಬೆಳವಣಿಗೆಗೆ ಕೊಡವ ಹಾಗೂ ಗೌಡ ಅಕಾಡೆಮಿಗಳು ಸದಾ ಕಸಾಪದೊಂದಿಗೆ ಇದ್ದೇವೆ ಎಂದು ಹೇಳಿದರು.

ನಿಕಟಪೂರ್ವ ಅಧ್ಯಕ್ಷ ಎಸ್. ಐ. ಮುನೀರ್, ಕನ್ನಡ ಭಾಷೆಯ ಬಗ್ಗೆ ತುಡಿತ ಇರುವ ಏಕೈಕ ಸಂಸ್ಥೆ ಅಂದರೆ ಕಸಾಪ ಮಾತ್ರ. ಸಾಹಿತ್ಯ ಪರ ಚಟುವಟಿಕೆಗಳನ್ನು ನಡೆಸಿ ಭಾಷೆಯ ಬಗ್ಗೆ ಒಲವು ಮೂಡಿಸುವ ಕೆಲಸ ಮಾಡುತ್ತಿದೆ. ಶಿಕ್ಷಕರು ಅಧ್ಯಯನದೊಂದಿಗೆ ಅಧ್ಯಾಪನಾ ಮಾಡಿದರೆ ಮಕ್ಕಳಿಗೆ ಅಭಿರುಚಿ ಮೂಡಿಸಲು ಸಾಧ್ಯ. ಪೋಷಕರು ಮಕ್ಕಳನ್ನು ಸಾಹಿತ್ಯ ಪರ ಅಭಿರುಚಿ ಬೆಳೆಸುವ ನಿಟ್ಟಿನಲ್ಲಿ ಪ್ರೋತ್ಸಾಹ ನೀಡಬೇಕೆಂದರು.

ಸಮ್ಮೇಳನಾಧ್ಯಕ್ಷ ಬಿ.ಎ. ಷಂಶುದ್ದೀನ್ ಆಶಯ ನುಡುಗಳಾಡಿ ಕನ್ನಡ ಮನಸ್ಸುಗಳು ಒಂದೆಡೆ ಸೇರಲು ಮತ್ತು ಯುವ ಜನತೆಗೆ ಕನ್ನಡ ಸಂಸ್ಕøತಿಯನ್ನು ಅರಿಯಲು ಸಾಹಿತ್ಯ ಸಮ್ಮೇಳನಗಳಿಂದ ಸಾಧ್ಯವಾಗುತ್ತದೆ. ಹಿಂದೆ ಸಾಹಿತ್ಯಾಸಕ್ತರು ಮಾತ್ರ ಸೇರುತ್ತಿದ್ದರು. ಆದರೆ ಇಂದು ಕನ್ನಡ ಮನಸ್ಸುಳ್ಳವರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ. ಬರೆಯುವಾಗ ಸಿಗುವ ತೃಪ್ತಿ ಮೊಬೈಲ್, ಕಂಪ್ಯೂಟರ್‍ನಂತಹ ಯಂತ್ರಗಳ ಬಳಕೆಯಿಂದ ಸಿಗಲು ಸಾಧ್ಯವಿಲ್ಲ. ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ಓದುವರಿಂದ ಕನ್ನಡಕ್ಕೆ ದುಸ್ಥಿತಿ ಬಂದಿದೆ. ಮಕ್ಕಳಲ್ಲಿರುವ ಆಸಕ್ತಿಯನ್ನು ಪ್ರೋತ್ಸಾಹಿಸಿ ಶಿಕ್ಷಕರು ಹಾಗೂ ಪೋಷಕರು ಬೆಳೆಸಬೇಕು. ಸಂಸ್ಕøತಿ ಹಾಗೂ ಭಾಷೆಯ ಬಗ್ಗೆ ಅಭಿಮಾನ ಇರಬೇಕು ಎಂದರು.

ಜಿಲ್ಲಾ ಕಸಾಪ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ ಕನ್ನಡಕ್ಕೆ ಅವಮಾನ ಆದರೆ ಎಲ್ಲಾವನ್ನೂ ತ್ಯಾಗ ಮಾಡಿ ಕನ್ನಡವನ್ನು ಉಳಿಸಲು ಎಲ್ಲರೂ ಸದಾಸಿದ್ಧರಾಗಬೇಕು. ಕಸಾಪ ಸದಾ ಸಿದ್ಧವಿದೆ ಎಂದು ಹೇಳಿದರು. ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷ ಬಿ.ಎ. ಷಂಶುದ್ದೀನ್, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್, ನಿಕಟಪೂರ್ವ ಜಿಲ್ಲಾಧ್ಯಕ್ಷ, ಟಿ.ಪಿ. ರಮೇಶ್, ಮಡಿಕೇರಿ ತಾಲೂಕು ನಿಕಟಪೂರ್ವ ಅಧ್ಯಕ್ಷ ಎಸ್.ಐ. ಮುನೀರ್ ಅಹಮದ್, ಹಾಲಿ ಅಧ್ಯಕ್ಷ ಕುಡೆಕಲ್ ಸಂತೋಷ್, 7ನೇ ತಾಲೂಕು ಸಮ್ಮೇಳನ ಅಧ್ಯಕ್ಷ ಶ್ರೀಧರ್ ಹೆಗ್ಡೆ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಕಸಾಪ ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಸಾಪ ಗೌರವ ಕೋಶಾಧಿಕಾರಿ ಮುರಳೀಧರ್, ಗೌರವ ಕಾರ್ಯದರ್ಶಿ ಕೆ.ಎಸ್. ರಮೇಶ್ ಉಪಸ್ಥಿತರಿದ್ದರು. ಕಸಾಪ ಮಡಿಕೇರಿ ತಾಲೂಕು ಗೌರವ ಕಾರ್ಯದರ್ಶಿ ಕೂಡಕಂಡಿ ದಯಾನಂದ ಸ್ವಾಗತಿಸಿದರು.