ಶ್ರೀಮಂಗಲ, ಜೂ. 21: ಪ್ರಸ್ತುತ ಕಾಫಿ ಬೆಳೆಗಾರರಿಗೆ ಅಂತರ್ರಾಷ್ಟ್ರೀಯ ಕಾಫಿ ಮಾರುಕಟ್ಟೆ ದರ ಲಭ್ಯವಾಗದೆ, ಬೆಳೆದ ಕಾಫಿಗೆ ಸ್ಥಳೀಯವಾಗಿ ನಿಗದಿಪಡಿಸಿದ ದರಕ್ಕೆ ಮಾರಾಟ ಮಾಡುವ ಮೂಲಕ ನಷ್ಟ ಅನುಭವಿಸುತ್ತಿದ್ದು, ಇದನ್ನು ತಪ್ಪಿಸಿ, ಉತ್ತಮ ಮಾರುಕಟ್ಟೆ ದರ ದೊರಕಿಸಿಕೊಡುವ ನಿಟ್ಟಿನಲ್ಲಿ ನೂತನ ಕಾಫಿ ಮಂಡಳಿಯು ಕಾಫಿಯನ್ನು ಖರೀದಿಸಿ ವಿವಿಧ ದೇಶಗಳಿಗೆ ರಫ್ತು ಮಾಡುವ ಬೃಹತ್ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿ ಒಪ್ಪಂದ ಏರ್ಪಡಿಸಿಕೊಳ್ಳಲು ಚಿಂತನೆಯಲ್ಲಿದೆ. ಮುಂದಿನ ದಿನಗಳಲ್ಲಿ ಆಯಾಯ ಪ್ರದೇಶದಲ್ಲಿ ಬೆಳೆಯುವ ಕಾಫಿಯನ್ನು ಆಯಾಯ ಪ್ರದೇಶದ ಹೆಸರಿನ ಬ್ರಾಂಡ್ ಮಾಡಿ ಮಾರುಕಟ್ಟೆಯಲ್ಲಿ ದೊರೆಯುವಂತೆ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಈ ಮೂಲಕ ಸ್ಥಳೀಯ ವಿಶೇಷತೆಯ ಕಾಫಿಗೆ ವಿಶೇಷ ಮಾರುಕಟ್ಟೆ ಲಭಿಸಿಕೊಡುವದು ಮಂಡಳಿಯ ಉದ್ದೇಶವಾಗಿದೆ ಎಂದು ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಹೇಳಿದರು.

ಗೋಣಿಕೊಪ್ಪಲು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ನಡೆದ ಬೆಳೆಗಾರರ ಒಕ್ಕೂಟದ ಮಹಾಸಭೆಯಲ್ಲಿ ಸನ್ಮಾನ ಸ್ವೀಕರಿಸಿ ಮತನಾಡಿದ ಅವರು, ಬಹುವರ್ಷಗಳಿಂದ ಬೆಳೆಗಾರರ ಒಕ್ಕೂಟ ಹಾಗೂ ಕಾಫಿ ಮಂಡಳಿಯ ಉಪಾಧ್ಯಕ್ಷರು ಹಾಗೂ ಸದಸ್ಯರು ಬೆಳೆಗಾರರೆ ಕಾಫಿ ಮಂಡಳಿಯ ಅಧ್ಯಕ್ಷರಾಗಬೇಕು ಎನ್ನುವ ಒತ್ತಾಯವನ್ನು ಮಾಡುತ್ತಾ ಬಂದಿರುವ ಹಿನ್ನೆಲೆಯಲ್ಲಿ ಪ್ರಪ್ರಥಮ ಬಾರಿಗೆ ಕಾಫಿ ಬೆಳೆಗಾರರೊಬ್ಬರಿಗೆ ಅಧ್ಯಕ್ಷ ಸ್ಥಾನ ನೀಡಿರುವದು ಶ್ಲಾಘನೀಯ. ಈಗಿನ ಅಧ್ಯಕ್ಷರು ಮತ್ತು ಸದಸ್ಯರಿಗೆ ಕಾಫಿ ಬೆಳೆಗಾರರ ಸಂಕಷ್ಟದ

(ಮೊದಲ ಪುಟದಿಂದ) ಅರಿವಿರುವದರಿಂದ ಬೆಳೆಗಾರರಿಗೆ ಸೂಕ್ತ ನ್ಯಾಯ ದೊರೆಯಲಿದೆ ಎಂದು ಭರವಸೆ ವ್ಯಕ್ತ ಪಡಿಸಿದರು.

ಇನ್ನು ಮುಂದೆ ಕಾಫಿ ಸಬ್ಸಿಡಿಯನ್ನು ದೊಡ್ಡ ಉದ್ಯಮಿಗಳಿಗೆ ನೀಡುವ ಬದಲು ಸಣ್ಣ ಬೆಳೆಗಾರರಿಗೆ ನೇರವಾಗಿ ಕೆರೆ, ಇಂಗು ಗುಂಡಿ, ಸಲಕರಣೆ ಯಂತ್ರೋಪಕರಣಗಳಿಗೆ ನೀಡುವಂತೆ ಚಿಂತಿಸಲಾಗಿದೆ. ಕಾಫಿ ಬೆಳೆಗೆ ಮಾರಕವಾಗಿರುವ ಬೆರಿಬೋರರ್, ಕಾಂಡ ಕೊರಕ ರೋಗವನ್ನು ನಿಯಂತ್ರಿಸಲು ಮಂಡಳಿಯ ಸದಸ್ಯರು ಮತ್ತು ಬೆಳೆಗಾರರು ಇಚ್ಛಿಸಿದ ಸ್ಥಳಕ್ಕೆ ತಜ್ಞರು ಭೇಟಿ ನೀಡಿ ಈ ಸಮಸ್ಯೆಯನ್ನು ಪರಿಹರಿಸಲು ಮುಂದಾಗಲಿದ್ದಾರೆ. ಕಳೆದ ಮೂರು ವರ್ಷಗಳಿಂದ ಬೆಳೆಗಾರರಿಗೆ ನೀಡಬೇಕಾದ ಸಬ್ಸಿಡಿ ಹಣ ಸ್ಥಗಿತವಾಗಿದೆ. ಇದರ ಬಿಡುಗಡೆಗೆ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ಆಗ್ರಹಿಸಲಾಗಿದೆ. ಜಿಲ್ಲೆಯ ಕಾಫಿ ಬೆಳೆಗಾರರ ಸಮಸ್ಯೆಯನ್ನು ಸರಕಾರಕ್ಕೆ ಮುಟ್ಟಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಬೆಳೆಗಾರ ಒಕ್ಕೂಟದ ಸಮೇತ ಒಂದು ನಿಯೋಗವನ್ನು ದೆಹಲಿಗೆ ಕರೆದೊಯ್ಯುವದಾಗಿ ಭರವಸೆ ನೀಡಿದರು.

ಕಾಫಿ ಮಂಡಳಿಯ ಸದಸ್ಯ ಮಚ್ಚಮಾಡ ಡಾಲಿ ಚಂಗಪ್ಪ ಮಾತನಾಡಿ, ವಿಯೇಟ್ನಾಂನಿಂದ ಕರಿಮೆಣಸನ್ನು ಶ್ರೀಲಂಕಾ, ನೇಪಾಳದ ಮೂಲಕ ಭಾರತಕ್ಕೆ ಕಡಿಮೆ ದರದಲ್ಲಿ ಸಾರ್ಕ್ ಒಪ್ಪಂದದದ ಪ್ರಕಾರ ಶೇ. 8 ತೆರಿಗೆ ವಿಧಿಸಿ ಆಮದು ಮಾಡಿಕೊಳ್ಳುತ್ತಿದ್ದಾರೆ. ಭಾರತದ ಆಮದು ಕಾಯ್ದೆ ಪ್ರಕಾರ ಶೇ. 48ರಷ್ಟು ತೆರಿಗೆ ವಿಧಿಸಬೇಕಾಗುತ್ತದೆ. ಇದು ಮಾಡದೆ ಇರುವದರಿಂದ ಹೆಚ್ಚು ಬೇಡಿಕೆಯುಳ್ಳ ಭಾರತದ ಗುಣಮಟ್ಟದ ಕರಿಮೆಣಸಿಗೆ ದರ ಕಡಿತವಾಗಿದೆ. ಈ ಬಗ್ಗೆ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮ್ ಅವರ ಗಮ&divound;ಕ್ಕೆ ತಂದಿದ್ದು, ಸಚಿವೆ ಇದಕ್ಕೆ ಪೂರಕವಾಗಿ ಸ್ಪಂದಿಸಿದರೆ ಭಾರತದ ಕರಿಮೆಣಸಿಗೆ ಉತ್ತಮ ಧಾರಣೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಜಿಲ್ಲೆಯ ಕಾಫಿ ತೋಟಗಳಲ್ಲಿನ ಮಣ್ಣು ಪರೀಕ್ಷೆಗೆ ಸಂಚಾರಿ ಮಣ್ಣು ಪರೀಕ್ಷಾ ಘಟಕವನ್ನು ನಿಯೋಜನೆ ಮಾಡುವಂತೆ ಕಾಫಿ ಮಂಡಳಿಯಿಂದ ನಿರ್ಧರಿಸಲಾಗಿದೆ. ಪ್ರತಿ ಹೋಬಳಿಯಲ್ಲಿ ಈ ಸಂಚಾರಿ ವಾಹನ ಸಂಚರಿಸಲಿದ್ದು, ಇದರ ಸದುಪಯೋಗವನ್ನು ಮುಂದಿನ ದಿನಗಳಲ್ಲಿ ಬೆಳೆಗಾರರು ಪಡೆದುಕೊಳ್ಳುವಂತಾಗಬೇಕು ಎಂದು ಸಲಹೆ ನೀಡಿದರು. ಕಾಫಿ ಮಂಡಳಿಯ ಇತರ ಸದಸ್ಯರಾದ ನಾಗರಾಜು, ಬೊಟ್ಟಂಗಡ ಎಂ. ರಾಜು ಮಾತನಾಡಿದರು.

ವೇದಿಕೆಯಲ್ಲಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಶಂಕರು ನಾಚಪ್ಪ, ಕಾರ್ಯದರ್ಶಿ ಅಣ್ಣೀರ ಹರೀಶ್ ಮಾದಪ್ಪ ಉಪಸ್ಥಿತರಿದ್ದರು. ಈ ಸಂದರ್ಭ ನೂತನವಾಗಿ ಆಯ್ಕೆಯಾದ ಕಾಫಿ ಮಂಡಳಿಯ ಸದಸ್ಯರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಜಿ.ಪಂ. ಅಧ್ಯಕ್ಷೆ ಶರಿನ್ ಸುಬ್ಬಯ್ಯ, ಆರ್.ಎಂ.ಸಿ. ಸದಸ್ಯೆ ಬೊಳ್ಳಜಿರ ಸುಶಿಲಾ ಅಶೋಕ್, ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷರುಗಳಾದ ಡಾ. ಕಾವೇರಪ್ಪ, ತಾರಾ ಅಯ್ಯಮ್ಮ, ಒಕ್ಕೂಟದ ಪದಾಧಿಕಾರಿಗಳಾದ ಚೆಪ್ಪುಡಿರ ಶರಿ ಸುಬ್ಬಯ್ಯ, ಪಾಂಡಂಡ ನರೇಶ್, ಕುಂಡ್ಯೋಳಂಡ ರಮೇಶ್ ಮುದ್ದಯ್ಯ, ಕೈಬುಲಿರ ಹರೀಶ್ ಅಪ್ಪಯ್ಯ ಕೀಪಾಡಂಡ ಮಧು ಬೋಪಣ್ಣ, ಬಿದ್ದಾಟಂಡ ಟಿ. ದಿನೇಶ್, ಉದಯ್‍ಶಂಕರ್, ಅಮ್ಮತ್ತಿ ರೈತ ಸಂಘದ ಅಧ್ಯಕ್ಷ ಕಾವಡಿಚಂಡ ಗಣಪತಿ. ಮಚ್ಚಮಾಡ ಮಾಚಯ್ಯ, ಪೋಡಮಾಡ ಉತ್ತಯ್ಯ, ಅರಮಣಮಾಡ ಸತೀಶ್ ದೇವಯ್ಯ, ಮಾಣೀರ ಮುತ್ತಪ್ಪ, ತಾ.ಪಂ. ಸದಸ್ಯೆ ಅಶಾ ಜೇಮ್ಸ್, ಮೀದೇರಿರ ಕವಿತಾ ರಾಮು, ಚೇಂದಂಡ ಸುಮಿ ಸುಬ್ಬಯ್ಯ, ಕೂತಂಡ ವಾಣಿ ಪೊನ್ನಪ್ಪ , ಅಣ್ಣಳಮಾಡ ಲಾಲ ಅಪ್ಪಣ್ಣ, ಕರ್ತಮಾಡ ಸುನಂದಾ, ಬೊಳ್ಳೇರ ಅಪ್ಪುಟ ಪೊನ್ನಪ್ಪ, ಕಾಳಿಮಾಡ ತಮ್ಮು ಮುತ್ತಣ್ಣ, ಅಜ್ಜಮಾಡ ಚಂಗಪ್ಪ ಮತ್ತಿತರರು ಹಾಜರಿದ್ದರು.