ವೀರಾಜಪೇಟೆ, ಜೂ. 18: ದಕ್ಷಿಣ ಕೊಡಗಿನ ವೀರಾಜಪೇಟೆ, ಬಿಟ್ಟಂಗಾಲ, ಅಂಬಟ್ಟಿ, ನಾಂಗಾಲ, ಬಾಳುಗೋಡು ಆರ್ಜಿ, ಕದನೂರು, ಬೆಳ್ಳರಿಮಾಡು ಸೇರಿದಂತೆ ವಿವಿಧೆಡೆಗಳಲ್ಲಿ ಸರದಿ ಪ್ರಕಾರ 300ಕ್ಕೂ ಅಧಿಕ ಗೋವುಗಳನ್ನು ಕಳವು ಮಾಡಿ ಕೇರಳದ ಕಸಾಯಿಖಾನೆಗೆ ಸಾಗಿಸಿರುವ ಆರೋಪ ಮೇರೆಗೆ ಎಂಟು ಮಂದಿ ಗೋ ಹಂತಕರ ತಂಡವನ್ನು ಇಲ್ಲಿನ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಅಂತರ್ ರಾಜ್ಯ ಸರಣಿ ಗೋವು ಕಳವು ಹಾಗೂ ಅಕ್ರಮ ಮಾರಾಟ ಜಾಲದ ಪ್ರಮುಖ ಆರೋಪಿ ಚನ್ನಯ್ಯನಕೋಟೆಯ ಉಬೈದ್ (28) ಎಂಬ ಯುವಕನನ್ನು ಪೊಲೀಸರ ತನಿಖಾ ತಂಡ ನಿನ್ನೆ ದಿನ ಗುಡ್ಡೆಹೊಸೂರಿನಲ್ಲಿ ವಿಚಾರಣೆಗೆ ಒಳಪಡಿಸಿದಾಗ ಉಳಿದ 7 ಮಂದಿಯನ್ನು ಆತ ನೀಡಿದ ಸುಳಿವಿನ ಮೇರೆ ಇಂದು ಬೆಳಗ್ಗಿನ ಜಾವ ಬಂಧಿಸಿದ್ದಾರೆ.

ವೀರಾಜಪೇಟೆ ವಿಭಾಗದ ವಿವಿಧೆಡೆಗಳಲ್ಲಿ ನಿರಂತರ ಗೋವುಗಳು, ಜರ್ಸಿ ಗೋವುಗಳು, ಎಮ್ಮೆ, ಎತ್ತುಗಳು, ಕರುಗಳು ಕಳವು ಆಗುತ್ತಿರುವ ಕುರಿತು ಗ್ರಾಮಸ್ಥರು ಆಗಿಂದಾಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಮೇಯಲು ಬಿಟ್ಟ ಗೋವುಗಳು ಕೊಟ್ಟಿಗೆಯಲ್ಲಿದ್ದ ಗೋವುಗಳನ್ನು ಕಳವು ಮಾಡಿ ಮಾನಂದವಾಡಿ ಮಾರ್ಗವಾಗಿ ಕೇರಳದ ಕಸಾಯಿ ಖಾನೆಗೆ ಸಾಗಿಸ ಲಾಗುತ್ತಿತ್ತು ಎಂದು ಬಂಧನದಲ್ಲಿರುವ ಆರೋಪಿಗಳ ವಿಚಾರಣೆಯಿಂದ ಗೊತ್ತಾಗಿದೆ.

ತಂಡದ ನಾಯಕ ಉಬೈದ್‍ನನ್ನು ಪೊಲೀಸರು ವಿಚಾರಣೆಗೊಳಪಡಿಸಿ ದಾಗ ವೀರಾಜಪೇಟೆ ಸುತ್ತಮುತ್ತಲ ಪ್ರದೇಶದಲ್ಲಿ ಕೊಟ್ಟಿಗೆ ಹಾಗೂ ಮೇಯಲು ಬಿಟ್ಟಿದ್ದ ಗೋವುಗಳನ್ನು ಕಳವು ಮಾಡಿ ಕುಟ್ಟದ ಗಡಿ ಚೆಕ್ ಪೋಸ್ಟ್ ದಾಟಿದ ತರುವಾಯ ಗೂಡ್ಸ್ ವಾಹನದಲ್ಲಿ ಸಾಗಿಸಿದ ಗೋವುಗಳನ್ನು ನಡೆಸಿಕೊಂಡು ಹೋಗಿ ಮಾನಂದ ವಾಡಿಯ ದನಗಳ ಮಾರುಕಟ್ಟೆ ವಿಭಾಗಕ್ಕೆ ತಲುಪಿಸುತ್ತಿದ್ದರು. ಅಲ್ಲಿಂದ ಈ ಗೋವುಗಳು ನಿಗದಿತ ಬೆಲೆಗೆ ಕಸಾಯಿ ಖಾನೆ ಸೇರುತ್ತಿದ್ದವು. ಈ ಮಾರುಕಟ್ಟೆಯಲ್ಲಿ ಗೋವುಗಳು, ಜರ್ಸಿ ಹಸುಗಳು, ಜಾತಿ ಎತ್ತುಗಳು ರೂ 35000 ದಿಂದ 45000 ದವರೆಗೆ ಮಾರಾಟವಾಗುತ್ತ್ತಿದ್ದವು. ಉಬೈದು ತಂಡ ಪ್ರತಿ ವಾರದಲ್ಲಿ ಕಳವು ಮಾಡಿದ ಇಂತಹ ಎರಡು ಮೂರು ಗೋವುಗಳನ್ನು ಈ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಹಣ ಸಂಪಾದಿಸುತ್ತಿತ್ತು. ಉಬೈದು ತಂಡದ ಮುಖಂಡನಾದರೆ ಉಳಿದವರು ಕೊಟ್ಟಿಗೆಯಲ್ಲಿದ್ದ, ಮೇಯಲು ಬಿಟ್ಟಿದ್ದ ಗೋವುಗಳನ್ನು ಕಳವು ಮಾಡಿ ಗೂಡ್ಸ್ ವಾಹನಕ್ಕೆ ತುಂಬುವ ಕೆಲಸ ಮಾಡುತ್ತಿದ್ದರು. ಇವರುಗಳಿಗೂ ಉಬೈದು ಗೋವುಗಳನ್ನು ಮಾರಾಟ ಮಾಡಿದ ಹಣದಲ್ಲಿ ಶೇಕಡವಾರು ಹಣವನ್ನು ಇತರರಿಗೆ ಹಂಚುತ್ತಿದ್ದನೆಂದು ಆರೋಪಿ ಪೊಲೀಸರ ಮುಂದೆ ತಿಳಿಸಿದ್ದಾನೆ.

ಈಗ ನಗರ ಠಾಣೆ ಪೊಲೀಸರು ಈ ತಂಡದ ಮೇಲೆ ಆರ್ಜಿ ಗ್ರಾಮದಲ್ಲಿ 10 ಗೋವುಗಳನ್ನು ಕಳವು ಮಾಡಿದ ಆರೋಪ, ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳರಿಮಾಡುವಿನಲ್ಲಿ ಎರಡು ಗೋವುಗಳು, ಕದನೂರು ಗ್ರಾಮದಲ್ಲಿ ಒಂದು ಗೋವು, 3ಕರುಗಳು, ಅಂಬಟ್ಟಿ ಗ್ರಾಮದಲ್ಲಿ ಒಂದು ಎತ್ತು ಕಳವು ಮಾಡಿರುವ ಆರೋಪದ ಮೇರೆ ಒಟ್ಟು 4 ಪ್ರಕರಣಗಳನ್ನು ದಾಖಲಿಸಿದ್ದಾರೆ.

ಅಂಬಟ್ಟಿ ಗ್ರಾಮದ ಎತ್ತೊಂದನ್ನು ಕೇರಳದ ಮುಸ್ತಾಫ ಎಂಬಾತನಿಗೆ ಮಾರಾಟ ಮಾಡಿದನ್ನು ಪೊಲೀಸರು ಪತ್ತೆ ಹಚ್ಚಿ ಕರುವೊಂದರ ಸಹಿತ ವಶಪಡಿಸಿಕೊಂಡಿದ್ದಾರೆ.

ಈಗ ಪೊಲೀಸರು ಪೊನ್ನಂಪೇಟೆಯ ನಿವಾಸಿ ಹಾಗೂ ಉಬೈದು ತಂಡದ ಸದಸ್ಯ ಕರೀಂ ಎಂಬಾತ ಗೋವುಗಳ ಅಕ್ರಮ ಸಾಗಾಣಿಕೆಗೆ

(ಮೊದಲ ಪುಟದಿಂದ) ಬಳಸುತ್ತಿದ್ದ ಗೂಡ್ಸ್ ವಾಹನ (ಕೆ.ಎ. 12 ಎ ಎ.7170)ವನ್ನು ಹಾಗೂ ಉಬೈದುಗೆ ಸೇರಿದ ಸ್ವಿಫ್ಟ್ ಕಾರನ್ನು ವಶ ಪಡಿಸಿಕೊಂಡಿದ್ದಾರೆ.

ಪ್ರಕರಣವನ್ನು ತನಿಖೆ ನಡೆಸುತ್ತಿರುವ ಪೊಲೀಸರು ಪ್ರಮುಖ ಆರೋಪಿ ಚನ್ನಯ್ಯನಕೋಟೆಯ ಉಬೈದು, ಪೊನ್ನಂಪೇಟೆಯ ಎಂ. ಕರೀಂ, ಚಾಮಿಯಾಲ್‍ನ ನಿಜಾಮುದ್ದೀನ್, ಕೊಂಡಗೇರಿಯ ಶೀಯಾಬುದ್ಧೀನ್, ಚನ್ನಯ್ಯನ ಕೋಟೆಯ ಟಿ.ಎಚ್. ಹಬೀದ್, ಪಾಲಿಬೆಟ್ಟದ ಜಾನ್ಸನ್ ಅಲಿಯಾಸ್ ಜಾನ್, ಚನ್ನಯ್ಯನಕೋಟೆಯ ಸತೀಶ್, ಚನ್ನಯ್ಯನಕೋಟೆಯ ಕೆ.ಎಂ. ಅಶ್ರಫ್ ಎಂಬ ಎಂಟು ಮಂದಿಯನ್ನು ಬಂಧಿಸಿದರು.

ತಾಲೂಕಿನ ಸರಣಿ ಕಳವಿನ ಆರೋಪಿಗಳ ಬಂಧನದ ಸುದ್ದಿ ಕೇಳುತ್ತಿದ್ದಂತೆ ಗೋವುಗಳನ್ನು ಕಳೆದುಕೊಂಡ ವಿವಿಧ ಗ್ರಾಮಸ್ಥರುಗಳು ಇಲ್ಲಿನ ಸಮುಚ್ಚಯ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದರು. ಗ್ರಾಮಸ್ಥರ ಪ್ರಕಾರ ಬಿಟ್ಟಂಗಾಲ, ನಾಂಗಾಲ, ಅಂಬಟ್ಟಿ ಗ್ರಾಮದವರು ಈತನಕ ಒಟ್ಟು 43 ಗೋವುಗಳನ್ನು ಕಳೆದುಕೊಂಡಿದ್ದಾರೆ. ವೀರಾಜಪೇಟೆಯ ನೆಹರೂ ನಗರದ ಐಮದೆ ಎಂಬವರು ಮೂರು ತಿಂಗಳ ಅವಧಿಯಲ್ಲಿ ಒಟ್ಟು 24 ಗೋವುಗಳನ್ನು ಹಾಗೂ ಪದುಕೋಟೆಯ ವಿ.ಎಲ್. ಸುರೇಶ್, ಇತರ ಗ್ರಾಮಸ್ಥರು ಸೇರಿ ಬೆಲೆ ಬಾಳುವ ಗೋವುಗಳನ್ನು ಕಳೆದುಕೊಂಡಿದ್ದಾರೆ. ಗ್ರಾಮಸ್ಥರ ಅಂದಾಜಿನ ಪ್ರಕಾರ ತಾಲೂಕಿನಾದ್ಯಂತ ಈವರಗೆ ಒಟ್ಟು ಮುನ್ನೂರಕ್ಕು ಮೇಲ್ಪಟ್ಟು ಗೋವುಗಳು ಕಳವಾಗಿ ಕೇರಳದ ಕಸಾಯಿಖಾನೆಗೆ ಸಾಗಿಸಲ್ಪಟ್ಟಿವೆ ಎಂದು ತಿಳಿದು ಬಂದಿದೆ.

ಅಂಬಟ್ಟಿ ಗ್ರಾಮಸ್ಥರಾದ ಪಿ.ಎ. ದಾಮೋದರ್ ಅವರ ಪ್ರಕಾರ ಈ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಕೂಲಂಕಶ ತನಿಖೆಗೊಳಪಡಿಸಿದರೆ ಇದೇ ರೀತಿಯ ಇನ್ನೊಂದು ತಂಡವನ್ನು ಪತ್ತೆ ಹಚ್ಚಬಹುದು. ತಾಲೂಕಿನಲ್ಲಿ ಕಳವಾದ ಸುಮಾರು 300ಕ್ಕೂ ಅಧಿಕವಾಗಿ ಗೋವುಗಳನ್ನು ಪತ್ತೆ ಹಚ್ಚಬಹುದು. ಪೊಲೀಸರು ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತಾಳಬಾರದು ಎಂದು ಮನವಿ ಮಾಡಿದ್ದಾರೆ.

ಇದೇ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಬೆಳಿಗ್ಗೆ ಡಿ.ವೈ.ಎಸ್.ಪಿ. ನಾಗಪ್ಪ ಅವರನ್ನು ಭೇಟಿ ಮಾಡಿ ಕಳವು ಆಗಿರುವ ಗೋವುಗಳನ್ನು ಪತ್ತೆ ಹಚ್ಚಿಕೊಡುವಂತೆ ಮನವಿ ಸಲ್ಲಿಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ನಾಗಪ್ಪ ಅವರು ಗೋವುಗಳ ಕಳವಿನ ಆರೋಪಿಗಳನ್ನು ಪತ್ತೆ ಹಚ್ಚಲು ಇನ್ನೊಂದು ತಂಡವನ್ನು ರಚಿಸುವದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದರು.

ಡಿ.ವೈಎಸ್ಪಿ ನಾಗಪ್ಪ ಅವರ ನಿರ್ದೇಶನದಲ್ಲಿ ಸರ್ಕಲ್ ಇನ್ಸ್‍ಪೆಕ್ಟರ್ ಎನ್. ಕುಮಾರ್ ಆರಾಧ್ಯ ನೇತೃತ್ವದಲ್ಲಿ ಗ್ರಾಮಾಂತರ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಎಂ. ನಂಜುಂಡಸ್ವಾಮಿ ಹಾಗೂ ಸಿಬ್ಬಂದಿಯ ತಂಡವನ್ನು ರಚಿಸಿ, ಈ ಅಂತರರಾಜ್ಯ ಗೋವು ಕಳ್ಳರನ್ನು ಪತ್ತೆಹಚ್ಚಿದ್ದಾರೆ. ತಂಡದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಎಂ.ಸಿ. ನಂಜಪ್ಪ, ಪಿ. ಬೆಳ್ಳಿಯಪ್ಪ,

ಶ್ರೀನಿವಾಸ್, ಧರ್ಮ, ಪ್ರವೀಣ್ ರಂಗಸ್ವಾಮಿ, ಪ್ರದೀಪ್, ಶ್ರೀಧರ್, ಮಹಿಳಾ ಸಿಬ್ಬಂದಿ ಗೀತಾ, ನೇಹಾನ್ ಕುಮಾರ್, ಚಂದ್ರಶೇಖರ್, ಗೋಪಿ ಸಹಕರಿಸಿದರು.

-ಡಿ.ಎಂ.ಆರ್.