ಗೋಣಿಕೊಪ್ಪಲು, ಜೂ. 19: ತಾ. 21 ರಂದು ನಡೆಯುವ 3 ನೇ ವರ್ಷದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆರ್ಟ್ ಆಫ್ ಲಿವಿಂಗ್, ಆಯುಷ್ ಇಲಾಖೆ, ಗೋಣಿಕೊಪ್ಪ ಗ್ರಾಮ ಪಂಚಾಯ್ತಿ ಹಾಗೂ ಕಾವೇರಿ ಕಾಲೇಜು ಸಹಯೋಗದಲ್ಲಿ ಗೋಣಿಕೊಪ್ಪ ಕಾವೇರಿ ಕಾಲೇಜು ಮೈದಾನದಲ್ಲಿ ಆಚರಿಸಲಾಗುವದು ಎಂದು ಆರ್ಟ್ ಆಫ್ ಲಿವಿಂಗ್ ಶಿಕ್ಷಕರ ಸಂಯೋಜಕ ಅಳಮೇಂಗಡ ಡಾನ್ ರಾಜಪ್ಪ ತಿಳಿಸಿದ್ದಾರೆ.

ವಿದ್ಯಾಥಿಗಳು ಹಾಗೂ ಸಾರ್ವಜನಿಕರಿಗೆ 1 ಗಂಟೆಗಳಷ್ಟು ಕಾಲ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ತರಬೇತಿ ನೀಡುವ ಮೂಲಕ ಯೋಗದ ಮಹತ್ವ ಸಾರಲಾಗುವದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಅಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಯುಷ್ ಇಲಾಖೆಯ ಡಾ. ಎಂ.ಬಿ. ಶ್ರೀನಿವಾಸ್, ಅತಿಥಿಗಳಾಗಿ ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಆರ್ಟ್ ಲಿವಿಂಗ್ ಅಪೆಕ್ಸ್ ಬೋರ್ಡ್ ಮಹಿಳಾ ವಿಭಾಗದ ಸದಸ್ಯೆ ಗಂಗಾ ಚೆಂಗಪ್ಪ ಪಾಲ್ಗೊಳ್ಳಲಿದ್ದಾರೆ. 15 ನಿಮಿಷಗಳ ಕಾಲ ಸಭಾ ಕಾರ್ಯಕ್ರಮ ನಡೆಯಲಿದ್ದು, 45 ನಿಮಿಷ ಯೋಗ ತರಬೇತಿ ನೀಡಲಾಗುವದು. ಈ ಸಂದರ್ಭ ಸ್ಥಳೀಯ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯೋಗ ತರಬೇತಿ ಪಡೆಯಲಿದ್ದಾರೆ ಎಂದರು.

ಈಗಾಗಲೇ ಗೋಣಿಕೊಪ್ಪ, ಟಿ. ಶೆಟ್ಟಿಗೇರಿ, ಬಾಳೆಲೆ, ಅಮ್ಮತ್ತಿ, ಸೋಮವಾರಪೇಟೆ, ಮಡಿಕೇರಿ, ಪೊನ್ನಂಪೇಟೆ ವ್ಯಾಪ್ತಿಗಳಲ್ಲಿ ಉಚಿತ ತರಬೇತಿ ನೀಡಲಾಗಿದೆ. ಈ ಎಲ್ಲಾ ಕೇಂದ್ರಗಳಲ್ಲಿ ಕೂಡ ಯೋಗ ದಿನಾಚರಣೆ ನಡೆಯಲಿದೆ ಎಂದರು.

ಗೋಷ್ಠಿಯಲ್ಲಿ ಆರ್ಟ್ ಆಫ್ ಲಿವಿಂಗ್ ಜಿಲ್ಲಾ ಅಭಿವೃದ್ಧಿ ಸಮಿತಿ ಸದಸ್ಯೆ ಸವಿತಾ ನಂಜಪ್ಪ, ತರಬೇತುದಾರರುಗಳಾದ ಶಾಂತೇಯಂಡ ಮಧು ಮಾಚಯ್ಯ, ಗಿತಾರ್ ಗಣಪತಿ ಉಪಸ್ಥಿತರಿದ್ದರು.

*ಗೋಣಿಕೊಪ್ಪಲು: ರಾಮಕೃಷ್ಣ ಶಾರದಾಶ್ರಮ ಹಾಗೂ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜು ಆಶ್ರಯದಲ್ಲಿ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ತಾ. 21 ರಂದು ಯೋಗ ದಿನಾಚರಣೆ ನಡೆಯಲಿದೆ.

ಬೆಳಿಗ್ಗೆ 8.45 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಯೋಗ ಪ್ರದರ್ಶನ ನಡೆಯಲಿದೆ. ಸಿಐಟಿ ಕಾಲೇಜು ಹಾಗೂ ಪೊನ್ನಂಪೇಟೆ ಸರ್ಕಾರಿ ಪ್ರೌಡಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳು ಯೋಗ ಪ್ರದರ್ಶನ ನೀಡಲಿದ್ದಾರೆ.

ಈ ಸಂದರ್ಭ ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಗೋವಿಂದರಾಜು, ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಬೋಧ ಸ್ವರೂಪ ನಂದಾಜಿ, ಕ್ಯಾ. ಕುಪ್ಪಂಡ. ಜಿ.ಯುವರಾಜ್, ಡಾ. ಯತಿರಾಜ್ ಪಾಲ್ಗೊಳ್ಳಲಿದ್ದಾರೆ.

ಡಾ. ಅಲ್ಲಮ ಪ್ರಭು ಹಾಗೂ ಡಾ. ಮಾನಸ ಇವರುಗಳು ಯೋಗದ ಮಹತ್ವವನ್ನು ಪ್ರದರ್ಶನದ ಮೂಲಕ ನೀಡಲಿದ್ದಾರೆ.