ಮಡಿಕೇರಿ, ಜೂ. 19 : ಕೊಡಗು ಜಿಲ್ಲಾ ಗ್ರಂಥಾಲಯ ಮೇಲ್ವಿಚಾರಕರ ಸಂಘವು ಸಿಐಟಿಯುನೊಂದಿಗೆ ಸಂಯೋಜನೆಗೊಂಡು ನಗರದ ಬಾಲಭವನ ಸಭಾಂಗಣದಲ್ಲಿ ಸಂಘದ ತನ್ನ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಮಟ್ಟದ ಜಿಲ್ಲಾ ಸಮಾವೇಶವನ್ನು ಆಯೋಜಿಸಿತ್ತು. ಗಿಡ ನೆಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಾಹಿತಿ ಭಾರದ್ವಾಜ್ ಅವರು ಅಪಾರ ಜ್ಞಾನ ಭಂಡಾರವನ್ನು ಇರುವ ಗ್ರಂಥಾಲಯಗಳು ಇಂದು ಮಹತ್ವವನ್ನು ಕಳೆದುಕೊಳ್ಳುತ್ತಿವೆ. ಗ್ರಂಥಾಲಯ ಮೇಲ್ವಿಚಾರಕರ ಕೆಲಸದ ಅವಧಿಯನ್ನು ಕಡಿಮೆ ಮಾಡುವ ಮೂಲಕ ಕಾರ್ಮಿಕ ಕನಿಷ್ಠ ವೇತನ ನೀತಿ ಇವರಿಗೆ ಅನ್ವಯವಾಗದಂತೆ ಸರ್ಕಾರ ಮಾಡುತ್ತಿದೆ ಎಂದು ದೂರಿದರು. ಇಂದು ಊರಿಗೊಂದು ಅಂಗನವಾಡಿ ಇದ್ದರೂ ಊರಿಗೊಂದು ಗ್ರಂಥಾಲಯವಿಲ್ಲ. ಗ್ರಂಥಾಲಯ ಮೇಲ್ವಿಚಾರಕರ ಮೇಲೆ ಕೆಲವರಿಗೆ ಅಸಡ್ಡೆ, ತಾತ್ಸಾರ ಮನೋಭಾವವಿದೆ. ನೀವೇ ತಂತ್ರಗಳನ್ನು ರೂಪಿಸಿಕೊಂಡು ಸರ್ಕಾರವನ್ನು ಮಣಿಸಬೇಕು ಎಂದು ಸಲಹೆ ನೀಡಿದರು.

ಸಿಐಟಿಯುನ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಹೆಚ್.ಪಿ.ರಮೇಶ್‍ರವರು ಮಾತನಾಡಿ ಇಂದು ಸಿಐಟಿಯು 60 ಸಾವಿರ ಸದಸ್ಯತ್ವವನ್ನು ಹೊಂದಿದ್ದು, 9 ಸಂಘಟನೆಗಳನ್ನು ರಚಿಸಿ ನೌಕರರಿಗೆ ನೆರವು ನೀಡುತ್ತಾ ಬಂದಿದೆ. ಗ್ರಂಥಾಲಯ ಮೇಲ್ವಿಚಾರಕರ ಸಂಘವು ಸಿಐಟಿಯುನ 10 ನೇ ಸಂಘಟನೆಯಾಗಿದೆ. ಗ್ರಂಥಾಲಯ ಮೇಲ್ವಿಚಾರಕರ, ಅಂಗನವಾಡಿ ನೌಕರರ ಸಮಸ್ಯೆ ಬಗೆಹರಿಯಬೇಕಾದರೆ ಎಲ್ಲರೂ ಸಂಘಟಿತರಾಗಿ ಹೋರಾಟವನ್ನು ಮಾಡಬೇಕಾಗುತ್ತದೆ. ಸಿಐಟಿಯು ಸಂಪೂರ್ಣ ಬೆಂಬಲವನ್ನು ನೀಡುತ್ತದೆ ಎಂದು ಭರವಸೆಯಿತ್ತರು.

ಮಡಿಕೇರಿಯ ಹಿರಿಯ ಕಾರ್ಮಿಕ ಅಧಿಕಾರಿ ಎಂ. ಎಂ. ಯತ್ನಾಡಿಯವರು ಕಾರ್ಮಿಕರಿಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೂಪಿಸಿರುವ ಕನಿಷ್ಠ ವೇತನ ನಿಗದಿ ಮತ್ತು ಹೆರಿಗೆ ಭತ್ಯೆ ಕಾಯ್ದೆ ಕಾನೂನು ನೀತಿ, ನಿಯಮಗಳ ಕುರಿತು ಮಾಹಿತಿ ನೀಡಿದರು. ಕನಿಷ್ಠ ವೇತನ ನೀಡದಿದ್ದಲ್ಲಿ ವಿಚಾರಣೆ ನಡೆಸಿ ಸಹಾಯಕ ಆಯುಕ್ತರಿಗೆ ಮಾಹಿತಿ ನೀಡಲಾಗುವದು. ತಿಂಗಳ 7ನೇ ತಾರೀಖಿನೊಳಗೆ ವೇತನ ನೀಡದಿದ್ದರೆ ದೂರನ್ನು ಉಪಕಾರ್ಮಿಕ ಆಯುಕ್ತರ ಬಳಿ ನೀಡಿದರೆ ಅವರು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.

ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾ.ಪಂ ನೌಕರರ ಸಂಘದ ಅಧ್ಯಕ್ಷ ಪಿ. ಆರ್. ಭರತ್ ಮಾತನಾಡಿ ಇಂದು ಗ್ರಂಥಾಲಯಗಳು ಸಮಸ್ಯೆಯ ಆಗರವಾಗಿವೆ. ದುಡಿಮೆಗೆ ಸರಿಯಾದ ಕೂಲಿ ಬೇಕು. ಅದರಲ್ಲಿ ಯಾವದೇ ರಾಜಿ ಇಲ್ಲ. ಇಂದು ಕನಿಷ್ಟ ವೇತನ ನಿಗದಿಯಾಗಿದ್ದರೂ ಅದನ್ನು ನೀಡದಿರುವದು ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಂತಾಗಿದೆ ಎಂದರು.

ಪ್ರಮುಖರಾದ ಲೀಲಾವತಿ, ಸಿಐಟಿಯುನ ಸಂಚಾಲಕರಾದ ಯೋಗೇಶ್, ಜಿಲ್ಲಾ ಗ್ರಂಥಾಲಯ ಮೇಲ್ವಿಚಾರಕ ಪುರುಷೋತ್ತಮ್, ಎಂ. ಜಿ. ಮೊಣ್ಣಪ್ಪ, ಶೆರ್ಲಿ, ವಸಂತಿ, ಜಲಜಾಕ್ಷಿ ಇನ್ನಿತರರು ಉಪಸ್ಥಿತರಿದ್ದರು.

ಪ್ರತಿಭಟನೆ: ಸಮಾವೇಶದ ಬಳಿಕ ಕನಿಷ್ಟ ವೇತನ, ಹೆರಿಗೆ ಭತ್ಯೆ ಗ್ರಾಚ್ಯುಟಿ ನೀಡಬೇಕೆಂದು ಒತ್ತಾಯಿಸಿ ಕೇಂದ್ರ ಗ್ರಂಥಾಲಯದ ಎದುರು ಪ್ರತಿಭಟನೆ ನಡೆಸಿದರು. ಗ್ರಂಥಾಲಯ ಅಧಿಕಾರಿಗೆ ಬೇಡಿಕೆಗಳ ಕುರಿತಾದ ಮನವಿಯನ್ನು ಸಲ್ಲಿಸಲಾಯಿತು.