ಸಿದ್ದಾಪುರ, ಜೂ. 19: ಡೆಂಗ್ಯು, ಚಿಕೂನ್ ಗುನ್ಯ ಮತ್ತು ಮಲೇರಿಯಾ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಿದ್ದಾಪುರ ಪಟ್ಟಣದಲ್ಲಿ ಶಾಲಾ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು.

ರೋಗಗಳು ಬಾರದ ಹಾಗೆ ತಡೆಯಲು ಹಾಗೂ ಸೋಂಕು ಹರಡದಂತೆ ತಡೆಯಲು ತೆಗೆದುಕೊಳ್ಳಬೇಕಾದ ಮುನ್ನಚ್ಚೆರಿಕೆಗಳ ಬಗ್ಗೆ ಘೋಷಣೆಗಳನ್ನು ಕೂಗಿದ ವಿದ್ಯಾರ್ಥಿಗಳು ಸಿದ್ದಾಪುರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ರೋಗಗಳ ಕುರಿತು ಮಾಹಿತಿ ನೀಡಿದ ಸಿದ್ದಾಪುರ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ರಾಘವೇಂದ್ರ ಒಂದೇ ಕಡೆ ನೀರು ನಿಂತಿರುವದರಿಂದ ಅಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಿ ಆ ಸೊಳ್ಳೆಗಳು ಮನುಷ್ಯನನ್ನು ಕಚ್ಚಿದರೆ ಇಂತಹ ರೋಗಗಳು ಬರುತ್ತವೆ. ಪರಿಸರವನ್ನು ಸ್ವಚ್ಛವಾಗಿಟ್ಟು ಎಲ್ಲೂ ಕೂಡ ನೀರು ನಿಲ್ಲದಂತೆ ಎಚ್ಚರ ವಹಿಸಬೇಕೆಂದರು. ಈಗಾಗಲೇ ಸುಮಾರು 17 ಮಂದಿಗೆ ಸೋಂಕು ತಗುಲಿದ್ದು ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ ಎಂದರು.

ಈ ಸಂದÀರ್ಭ ತಾಲೂಕು ಆರೋಗ್ಯ ನಿರೀಕ್ಷಕ ಮುಜೀಬ್, ಮಾಲ್ದಾರೆ ಆರೋಗ್ಯ ನಿರೀಕ್ಷಕ ಸುದರ್ಶನ್, ಸಿದ್ದಾಪುರ ಆರೋಗ್ಯ ಕೇಂದ್ರದ ಪ್ರಯೋಗ ಶಾಲಾ ನಿರೀಕ್ಷ ಶ್ರೀನಿವಾಸ್ ಸೇರಿದಂತೆ ಸಿದ್ದಾಪುರ ಸಂತ ಅನ್ನಮ್ಮ ಶಾಲೆಯ ವಿದ್ಯಾರ್ಥಿಗಳು ಹಾಜರಿದ್ದರು.