ನಾಪೋಕ್ಲು, ಜೂ. 18: ರೈತ ಬೆಳೆಗಾರರಿಗೆ ಮಾಹಿತಿ ಕಾರ್ಯಾಗಾರ ಸಮೀಪದ ಚೆಯ್ಯಂಡಾಣೆಯಲ್ಲಿ ಜರುಗಿತು. ಚೆಯ್ಯಂಡಾಣೆ ಗ್ರಾಮಪಂಚಾಯಿತಿಗೆ ಒಳಪಟ್ಟ ಗ್ರಾಮೀಣ ರೈತ ಬೆಳೆಗಾರರಿಗೆ ಜೈವಿಕ ಗೊಬ್ಬರ ಹಾಗೂ ಯಾಂತ್ರೀಕೃತ ಭತ್ತ ನಾಟಿ ಬಗ್ಗೆ ಮಾಹಿತಿ ನೀಡಲಾಯಿತು.

ಮಹಿಳಾ ಸಮಾಜ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್‍ಎಲ್‍ಎನ್ ಗ್ಲೋಬಲ್ ವತಿಯಿಂದ ಜೈವಿಕ ಗೊಬ್ಬರದ ಸಮಗ್ರ ಮಾಹಿತಿಯನ್ನು ಪ್ರಮುಖರಾದ ವಿಷ್ಣುಮೂರ್ತಿ ರಾವ್ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಯಾಂತ್ರೀಕೃತ ಭತ್ತದ ನಾಟಿ ಬಗ್ಗೆ ಕೃಷಿ ಅಧಿಕಾರಿ ಕುಶಾಲಪ್ಪ ಮಾಹಿತಿ ನೀಡಿದರು. ನಂತರ ರೈತರು ಹಾಗೂ ಬೆಳೆಗಾರರ ನಡುವೆ ಸಂವಾದ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆಯ್ಯಂಡಾಣೆ ನರಿಯಂದಡ ಗ್ರಾಮಪಂಚಾಯಿತಿ ಉಪಾಧ್ಯಕ್ಷ ಮುಂಡ್ಯೋಳಂಡ ರವಿಸೋಮಣ್ಣ ವಹಿಸಿದ್ದು ವೇದಿಕೆಯಲ್ಲಿ ಬೆಳೆಗಾರರಾದ ಬೊವ್ವೇರಿಯಂಡ ಸುಧೀರ್‍ಸುಬ್ಬಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ದಿ ಮೇಲ್ವಿಚಾರಕ ರಮೇಶ್ ಇನ್ನಿತರರು ಉಪಸ್ಥಿತರಿದ್ದರು. ಬೊವ್ವೇರಿಯಂಡ ಡೀನಾ ಮಾದಯ್ಯ ಅವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಕುಕ್ಕೆ ಮನೆ ಸುಬ್ರಮಣ್ಯ ಸ್ವಾಗತಿಸಿ ನಿರೂಪಿಸಿದರು. ಸ್ವಪ್ನ ವಂದಿಸಿದರು. - ದುಗ್ಗಳ