ಶ್ರೀಮಂಗಲ, ಜೂ. 19: 2016-17ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ. 100 ರ ಫಲಿತಾಂಶ ಪಡೆದಿರುವ ಟಿ. ಶೆಟ್ಟಿಗೇರಿ ಮಾಯಣಮಾಡ ಮಂದಯ್ಯ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯಿನಿ, ಸಹ ಶಿಕ್ಷಕರು ಹಾಗೂ ಶಾಲಾ ಆಡಳಿತ ಮಂಡಳಿಯನ್ನು ಟಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವತಿಯಿಂದ ಅಭಿನಂದಿಸಲಾಯಿತು.ಪ್ರಸಕ್ತ ವರ್ಷ ವೀರಾಜಪೇಟೆ ತಾಲೂಕಿನ ಸರಕಾರಿ ಪ್ರೌಢ ಶಾಲೆಗಳ ಪೈಕಿ ಶೇ.100 ರ ಫಲಿತಾಂಶ ಪಡೆದಿರುವ ಏಕೈಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವದರೊಂದಿಗೆ ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ಶೇ.100 ರ ಫಲಿತಾಂಶ ಪಡೆಯುತ್ತಿರುವ ಟಿ. ಶೆಟ್ಟಿಗೇರಿ ಮಾಯಣಮಾಡ ಮಂದಯ್ಯ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಶಿಕ್ಷಕರ ಪ್ರಯತ್ನವನ್ನು ಗ್ರಾ.ಪಂ.ಅಧ್ಯಕ್ಷ ಹಾಗೂ ಸದಸ್ಯರು ಶ್ಲಾಘಿಸಿದರು.

ಈ ಸಂದರ್ಭ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಚಿರಿಯಪಂಡ ರುಕ್ಮಿಣಿ ಶಾಲೆಗೆ ಬಾರದ ವಿದ್ಯಾರ್ಥಿಗಳನ್ನು ಹಾಗೂ ಪೋಷಕರ ಮನವೊಲಿಸಿ ಕರೆತಂದು ಬಹಳ ಶ್ರಮ ವಹಿಸಿ ಕಲಿಸಿದ್ದೇವೆ. ಗಣಿತ ವಿಷಯಕ್ಕೆ ಅಧ್ಯಾಪಕರಿಲ್ಲದೆ ಸಮೀಪದ ರೂಟ್ಸ್ ಆಂಗ್ಲ ಮಾದ್ಯಮ ಶಾಲೆಯ ಗಣಿತ ಅಧ್ಯಾಪಕರ ಸಹಕಾರ ಪಡೆದು ಕಲಿಸಿದ್ದೇವೆ. ನಮ್ಮ ಪ್ರಯತ್ನ ಸಾರ್ಥಕವಾಯಿತೆಂಬ ಸಂತೋಷವಿದೆ ಎಂದು ಅನುಭವ ಹಂಚಿಕೊಳ್ಳುವದ ರೊಂದಿಗೆ ಗ್ರಾ.ಪಂ. ಹಾಗೂ ಸಾರ್ವಜನಿಕರ ಸಹಕಾರವನ್ನು ಈ ಸಂದರ್ಭ ನೆನೆಸಿಕೊಂಡರು.

ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಎನ್ ಸುಮಂತ್ ಮಾತನಾಡಿ ಸರಕಾರಿ ಶಾಲೆಯಲ್ಲಿ ಕಾರ್ಮಿಕರ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು ಗೈರು ಹಾಜರಿಯೇ ಹೆಚ್ಚಾಗಿರುತ್ತದೆ. ಆದರೆ ನಮ್ಮ ಪ್ರೌಢ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು ದಿನನಿತ್ಯ ಹಾಜರಾಗು ವಂತೆ ಮಾಡುವದರೊಂದಿಗೆ ವಿಶೇಷ ಶ್ರಮ ವಹಿಸಿ ಸತತ ನಾಲ್ಕು ವರ್ಷಗಳಿಂದ ಶೇ.100 ರ ಸಾಧನೆ ಮಾಡುತ್ತಿರುವದು ಶ್ಲಾಘನೀಯ. ಮುಂದಿನ ದಿನಗಳಲ್ಲೂ ಶೇ 100 ರ ಸಾಧನೆ ಮಾಡಲು ಪ್ರಯತ್ನಿಸಿ. ಪಂಚಾಯಿತಿ ವತಿಯಿಂದ ಎಲ್ಲಾ ರೀತಿಯ ಸಹಕಾರ ನೀಡುತ್ತೇವೆ ಎಂದರು. ಈ ಸಂದರ್ಭ ಶಾಲೆಯ ಮುಖ್ಯೋಪಾಧ್ಯಾಯಿನಿ ಚಿರಿಯಪಂಡ ರುಕ್ಮಿಣಿ, ಸಹ ಶಿಕ್ಷಕರಾದ ಚಂದನ್, ಸವಿತ, ರಾಜೇಶ್, ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಸುನಂದ, ಟಿ.ಶೆಟ್ಟಿಗೇರಿ ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಎನ್. ಸುಮಂತ್, ಉಪಾಧ್ಯಕ್ಷೆ ಕೆ.ಎಸ್. ಯಶೋಧ, ಪಿ.ಡಿ.ಓ. ಕವಿತ, ಸದಸ್ಯರಾದ ಸಿ.ಕೆ. ಉದಯ, ಸಿ.ಎನ್. ರಂಜು ಕರುಂಬಯ್ಯ, ಬಾಚೀರ ಜಾನ್ಸಿ, ಎಂ.ಯು. ಸಂದೀಪ್, ಮೀನಾ, ಸಬಿತ, ದಮಯಂತಿ, ಚಂದ, ಸಿದ್ದ, ಅಯ್ಯಪ್ಪ, ಕೆಚ್ಚಿ, ಗೌರಿ, ಶಾಲಾಭಿವೃದ್ಧಿ ಸಮಿತಿಯ ಉಳುವಂಗಡ ದತ್ತ, ಅಪ್ಪಚ್ಚಂಗಡ ಮೋಟಯ್ಯ ಮತ್ತಿತರರು ಭಾಗವಹಿಸಿದ್ದರು.