ನಾಪೆÇೀಕ್ಲು, ಜೂ. 18: ಸ್ಥಳೀಯ ಪಟ್ಟಣದ ವ್ಯಾಪ್ತಿಯಲ್ಲಿ ಎಲ್ಲಿ ನೋಡಿದರೂ ಕೊಕ್ಕರೆಗಳೇ. ಅವುಗಳದ್ದೇ ಸಾಮ್ರಜ್ಯ. ಅವುಗಳ ಕಲರವದ ಜೊತೆಗೆ ಅವುಗಳನ್ನು ವೀಕ್ಷಿಸುವದೇ ಕಣ್ಣಿಗೆ ಒಂದು ಸಂಭ್ರಮದ ಹಬ್ಬ.ಇವುಗಳಿಗೆ ನೀವು ವಲಸಿಗರೆಂದಾದರೂ ಹೇಳಿ ಅಥವಾ ವರ್ಷಂಪ್ರತಿ ಭೇಟಿ ನೀಡುವ ಪ್ರವಾಸಿಗರು ಎಂದಾದರೂ ಹೇಳಿ. ಏನೆ ಆದರೂ ತಕರಾರಿಲ್ಲ. ತಂಗಲು ಹೋಂಸ್ಟೇ ರೆಸಾರ್ಟ್‍ಗಳ ಹಂಗಿಲ್ಲ. ಆತಿಥ್ಯ, ಉಪಚಾರಗಳ ಆಡಂಬರದ ಕೋರಿಕೆ ಇಲ್ಲದ ಬೆಳ್ಳಕ್ಕಿಗಳು ಮರ-ಗಿಡಗಳ ಮೇಲೆ ಎಲ್ಲೆಂದರಲ್ಲಿ ಮನಸೋಯಿಚ್ಛೆ ಬಿಡಾರ ಹೂಡುತ್ತವೆ. ಎಲ್ಲಿ ಗೂಡು ಕಟ್ಟಲು ಅವಕಾಶವಿದೆಯೊ ಅಲ್ಲೆಲ್ಲಾ ಗೂಡು ಕಟ್ಟಿಕೊಂಡು ಸಂಸಾರ ಹೂಡುವ ತವಕ ಈ ಸುಂದರ ಅತಿಥಿಗಳದ್ದು.

ಇವು ಪ್ರತಿ ವರ್ಷ ಜೂನ್ ತಿಂಗಳಲ್ಲಿ ಇಲ್ಲಿಗೆ ವಲಸೆ ಬಂದು ನೆಲೆಸುವ ಕ್ರಮವನ್ನು ರೂಢಿ ಮಾಡಿಕೊಂಡಿವೆ. ಕೆಲವು ವರ್ಷಗಳ ಮೊದಲು ನಾಪೆÇೀಕ್ಲುವಿನ ನಾಡಕಚೇರಿ ಹಾಗೂ ಅದರ ಸುತ್ತ ಮುತ್ತಲ ಪ್ರದೇಶಗಳು, ಕಾವೇರಿ ನದಿ ತೀರದ ಬಿದಿರ ಮೆಳೆಗಳಲ್ಲಿ ಆಸರೆ ಪಡೆಯುತ್ತಿದ್ದ ಇವು ಇತ್ತೀಚಿನ ವರ್ಷಗಳಲ್ಲಿ ಮರಗಳ ಹನನ ಹಾಗೂ ಬಿದಿರು ಮೆಳೆಗಳು ಕಟ್ಟೆ ರೋಗಕ್ಕೆ ತುತ್ತಾಗಿರುವದರಿಂದಾಗಿ ಮತ್ತು ಕಿಡಿಗೇಡಿಗಳ ಉಪಟಳದ ಫಲವಾಗಿ ಜನ ಸಂದಣಿಯಿರುವ ನಾಪೆÇೀಕ್ಲು ಪಟ್ಟಣದ ಬೇತು ರಸ್ತೆ, ಇಂದಿರಾ ನಗರದಲ್ಲಿರುವ ವೃಕ್ಷ ನೆಲೆಗಳನ್ನೇ ಆಶ್ರಯಿಸಿರುವದು ವಿಶೇಷ. ಜೂನ್ ತಿಂಗಳಿನಲ್ಲೇ ಗೂಡು ಕಟ್ಟಲು ಪ್ರಾರಂಭಿಸುವ ಇವು ಜುಲೈ ಆಗಸ್ಟ್ ತಿಂಗಳುಗಳಲ್ಲಿ ಮೊಟ್ಟೆಯಿಟ್ಟು ಮರಿ ಮಾಡುತ್ತವೆ. ಗೂಡು ಕಟ್ಟುವ ಸಂದರ್ಭ ಯಾವ ಬೆಳ್ಳಕ್ಕಿಯನ್ನು ಗಮನಿಸಿದರೂ ಎಲ್ಲಿಂದಲೋ ತಂದ ಕಸ ಕಡ್ಡಿಗಳ ಒಪ್ಪವಾದ ಜೊಡಿಸುವಿಕೆಯಲ್ಲೇ ತಲ್ಲಿನವಾಗಿರುತ್ತವೆ. ಎಲ್ಲದರಲ್ಲೂ ಉದಾಸೀನ ತೋರುವ ಮಾನವ ಇದನ್ನು ನೋಡಿ ನಿಜಕ್ಕೂ ನಾಚಿಕೆ ಪಡಬೇಕು. ಈ ಹಕ್ಕಿಗೆ ತಮ್ಮ ಗೂಡುಕಟ್ಟುವಲ್ಲಿನ ತಾಳ್ಮೆ, ಉತ್ಸಾಹ ಹಾಗೂ ವಂಶಾಭಿವೃದ್ಧಿ ಯಲ್ಲಿನ ಜವಾಬ್ದಾರಿ, ಮೊಟ್ಟೆಯಿಟ್ಟೊಡನೆ ಅದಕ್ಕೆ ಕಾವು ಕೊಡುವದು, ಮಳೆ ನೀರು ಬೀಳದಂತೆ ರೆಕ್ಕೆಯನ್ನು ರಕ್ಷಣೆ ಮಾಡಿಕೊಳ್ಳುವದು ಅದಕ್ಕೆ ಅದರ ಕರುಳ ಕುಡಿಯ ಮೇಲಿರುವ ಮಮತೆಯನ್ನು ಸೂಚಿಸುತ್ತದೆ. ಹೆತ್ತ ಮಕ್ಕಳನ್ನೆ ಕಸದ ತೊಟ್ಟಿಗೆ ಎಸೆಯುವ ಈ ಕಾಲದ ತಾಯಂದಿರನ್ನು ಇವು ಹಂಗಿಸುವಂತ್ತಿವೆ.

ಪುಟ್ಟ ಮರಿಗಳು ಹೂರ ಬಂದ ಸಮಯದಲ್ಲಂತೂ ತಾಯಿ ಮತ್ತು ತಂದೆ ಹಕ್ಕಿಗಳು ರಕ್ಷಣೆ ಹಾಗೂ ಆಹಾರ ಹುಡುಕುವಿಕೆಯಲ್ಲಿ ಸದಾ ಮಗ್ನರಾಗಿರುವದು ಕಂಡು ಬರುತ್ತದೆ. ಮರಿಗಳು ಹಾರಾಡಲು ಕಲಿಯುವ ಸಂದರ್ಭದಲ್ಲಿ ಆಗಸದಲ್ಲಿ ಎಲ್ಲಿ ನೋಡಿದರೂ ದೊಡ್ಡ ಮತ್ತು ಮರಿ ಹಕ್ಕಿಗಳ ಹಾರಾಟ. ಇವುಗಳು ಉಂಟು ಮಾಡುವ ಕ್ರೀ.ಕ್ರೀ ಶಬ್ದದಿಂದ ಈ ಪ್ರದೇಶವೇ ಕೊಕ್ಕರೆ ಮಯಾವಾಗಿರುತ್ತದೆ.

ಇವುಗಳಿಗೂ ಪರಿಸರ ನಾಶ, ಪರಿಸರ ಮಾಲಿನ್ಯ, ಕೀಟನಾಶಕ ಸಿಂಪಡಣೆಯಂತಹ ತೊಂದರೆಗಳಿಂದ ಹಾಗೂ ಗದ್ದೆ ಕೃಷಿಯ ಕೊರತೆಯಿಂದ ಆಹಾರದ ಕೂರತೆ ಕಂಡುಬರುತ್ತಿದೆ.

ಆದರೆ ಈಗ ಮಾನವನ ವೈಭವಪೂರಿತ ಜೀವನ ಶೈಲಿಯು ಪ್ರಾಣಿ ಪಕ್ಷಿಗಳಿಗೆ ಮಾರಕವಾಗಿ ಪರಿಣಮಿಸಿದೆ. ಏನೇ ಆದರೂ ಇಲ್ಲಿಗೆ ಆಗಮಿಸುತ್ತಿರುವ ಬೆಳ್ಳಕ್ಕಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕ್ಷೀಣಿಸುತ್ತಿವೆ ಎಂಬದು ಇಲ್ಲಿನ ಸ್ಥಳೀಯರ ಅಭಿಪ್ರಾಯ. ಈ ಎಲ್ಲಾ ಬೆಳ್ಳಕ್ಕಿಗಳಿಗೆ ದೃಷ್ಟಿತಾಕದೆ ಇರಲಿ ಎಂಬಂತೆ ಇವುಗಳ ಮಧ್ಯೆ, ಮಧ್ಯೆ ಹಾರಾಡುವ, ನೀರು ಕಾಗೆಗಳನ್ನು ಇಲ್ಲಿ ಯಥೇಚ್ಛವಾಗಿ ಕಾಣಬಹುದಾಗಿದೆ. ಕೊಕ್ಕರೆ ಮತ್ತು ನೀರು ಕಾಗೆಗಳು ಸಾಮರಸ್ಯದಿಂದ, ಹೊಂದಾಣಿಕೆಯಿಂದ ವಾಸಿಸುತ್ತಿರುವದನ್ನು ನಾವು ನೋಡಿ ಕಲಿಯಬೇಕಾಗಿದೆ. ಪ್ರವಾಸಿಗರಿಗೆ, ಮಕ್ಕಳಿಗೆ ಇವುಗಳನ್ನು ನೋಡಲು ಸುಂದರ ಮನಸ್ಸಿಗೆ ಆನಂದ ಆದರೆ ಇವು ವಾಸಿಸುವ ತೋಟದ ಮಾಲೀಕರ ಸ್ಥಿತಿ ಅವರಿಗೇ ಗೊತ್ತು. ಅವುಗಳ ತ್ಯಾಜ್ಯಗಳಿಂದ ತೋಟದ ಒಳಗಡೆ ಪ್ರವೇಶಿಸದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಟ್ಟಿನಲ್ಲಿ ನಾಪೆÇೀಕ್ಲು ಮೇಲ್ನೋಟಕ್ಕೆ ಒಂದು ಕಿರು ಕೊಕ್ಕರೆ ಧಾಮವಾಗಿ ರೂಪುಗೊಳ್ಳುತ್ತಿದೆ ಎಂದರೆ ತಪ್ಪಾಗಲಾರದು.

- ಪಿ.ವಿ. ಪ್ರಭಾಕರ್