ಕುಶಾಲನಗರ, ಜೂ 20: ಕುಶಾಲನಗರ ಪಟ್ಟಣದ ಕೆಲವೆಡೆ ಕಂಡುಬಂದಿರುವ ಡೆಂಗ್ಯು ಜ್ವರದ ಹಿನ್ನೆಲೆ ವಿವಿಧ ಬಡಾವಣೆಗಳ ಸ್ವಚ್ಛತೆ ಕಾರ್ಯದಲ್ಲಿ ಪಟ್ಟಣ ಪಂಚಾಯಿತಿ ತೊಡಗಿದೆ. ಪಟ್ಟಣದ ಪೊಲೀಸ್ ವಸತಿ ಗೃಹಗಳು ಹಾಗೂ ರಾಧಾಕೃಷ್ಣ ಬಡಾವಣೆಯ 10 ಕ್ಕೂ ಅಧಿಕ ಮಂದಿ ಡೆಂಗ್ಯು ಜ್ವರ ಬಾಧಿತರಾಗಿ ಮಡಿಕೇರಿ, ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾದ ಬಗ್ಗೆ ಶಕ್ತಿಯಲ್ಲಿ ವರದಿ ಪ್ರಕಟಗೊಂಡ ಬೆನ್ನಲ್ಲೇ ಪಂಚಾಯಿತಿ ಸಿಬ್ಬಂದಿಗಳು ಚರಂಡಿ ಸೇರಿದಂತೆ ಬಡಾವಣೆಗಳ ಸ್ವಚ್ಛತಾ ಕಾರ್ಯ ನಡೆಸಿದೆ.

ಪಂಚಾಯಿತಿ ಉಪಾಧ್ಯಕ್ಷ ಟಿ.ಆರ್. ಶರವಣಕುಮಾರ್ ಅವರ ಸೂಚನೆಯಂತೆ ರಾಧಾಕೃಷ್ಣ ಬಡಾವಣೆ ಮತ್ತು ಪೊಲೀಸ್ ವಸತಿಗೃಹ ವ್ಯಾಪ್ತಿಯಲ್ಲಿ ಕಲುಷಿತ ನೀರು ನಿಲ್ಲುವ ಸ್ಥಳಗಳ ಪರಿಶೀಲನೆ ಹಾಗೂ ಸೊಳ್ಳೆಗಳು ಉತ್ಪಾದನೆ ಯಾಗದಂತೆ ಎಚ್ಚರವಹಿಸಲು ಕ್ರಮ ಕೈಗೊಂಡಿದ್ದಾರೆ. ಪಂಚಾಯ್ತಿ ಪೌರಕಾರ್ಮಿಕರು ಕಳೆದ ಎರಡು ದಿನಗಳಿಂದ ಈ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ಯಾವದೇ ರೀತಿಯ ರೋಗರುಜಿನಗಳು ಹಬ್ಬದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ.

ಇತ್ತೀಚೆಗೆ ದಂಡಿನಪೇಟೆ ವ್ಯಾಪ್ತಿಯಲ್ಲಿ ಕೂಡ ಡೆಂಗ್ಯು ಜ್ವರ ಕಾಣಿಸಿಕೊಂಡಿದ್ದು ಕುಶಾಲನಗರ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಸುರಯ್ಯ ಭಾನು ಅವರೂ ಕೂಡ ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಇದೀಗ ಗುಣಮುಖರಾಗಿ ದ್ದಾರೆ. ಪಟ್ಟಣದ ಎಲ್ಲೆಡೆ ಡೆಂಗ್ಯು ಮತ್ತಿತರ ಖಾಯಿಲೆ ವ್ಯಾಪಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ತಿಳಿಸಿದ್ದಾರೆ.