ಸೋಮವಾರಪೇಟೆ, ಜೂ.19: ತನ್ನ ಸಹೋದರಿಯ ಪತಿ (ಬಾವ) ನಿಧನರಾದ ಸುದ್ದಿಯ ನಡುವೆಯೂ ಭಾರತ ಹಾಕಿ ತಂಡದ ಉದಯೋನ್ಮುಖ ಆಟಗಾರ ಎಸ್.ವಿ. ಸುನಿಲ್ ದೇಶಕ್ಕಾಗಿ ಆಟವಾಡಿ ಉತ್ತಮ ಪ್ರದರ್ಶನದೊಂದಿಗೆ ಗೆಲುವಿನ ರೂವಾರಿಯಾಗಿದ್ದಾರೆ.ಲಂಡನ್‍ನಲ್ಲಿ ನಡೆಯುತ್ತಿರುವ ಹಾಕಿ ವಿಶ್ವಕಪ್ ಸೆಮಿಫೈನಲ್ ಲೀಗ್‍ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧದ ಪಂದ್ಯ ನಿನ್ನೆ ಸಂಜೆ ನಿಗದಿಯಾಗಿದ್ದರೆ, ತಂಡದಲ್ಲಿದ್ದ ಕರ್ನಾಟಕದ ಎಸ್.ವಿ. ಸುನಿಲ್ ಅವರ ಸಹೋದರಿಯ ಪತಿ ಗಣೇಶ್ ಅವರು ನಿನ್ನೆ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನಲ್ಲಿ ನಿಧನರಾದರು.

ಈ ಸುದ್ದಿಯನ್ನು 10.30ಕ್ಕೆ ಎಸ್.ವಿ. ಸುನಿಲ್‍ಗೆ ತಿಳಿಸಲಾಗಿದೆ. ಲಂಡನ್‍ನಲ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯಕ್ಕೆ ಅಣಿಯಾಗುತ್ತಿದ್ದ ಕೊಡಗಿನ ಹಾಕಿ ಆಟಗಾರನಿಗೆ ಈ ಸುದ್ದಿ ಆಘಾತ ತಂದಿದ್ದು, ತಕ್ಷಣ ಸಹೋದರಿ ಸವಿತಾ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ.

ತಾನು ಪಂದ್ಯಾವಳಿ ಮುಗಿದ ತಕ್ಷಣ ಮನೆಗೆ ಆಗಮಿಸುತ್ತೇನೆ ಎಂದ ಸುನಿಲ್, ತನ್ನ ಸಂಬಂಧಿಕರಿಗೆ ಕರೆ ಮಾಡಿ ಮುಂದಿನ ವಿಧಿವಿಧಾನಗಳನ್ನು ನೆರವೇರಿಸುವಂತೆ ತಿಳಿಸಿದ್ದಾರೆ. ಸಂಜೆ ವೇಳೆಗೆ ಪ್ರಾರಂಭವಾದ ಪಂದ್ಯಾಟದಲ್ಲಿ ಮೈದಾನಕ್ಕಿಳಿದ ಸುನಿಲ್ ಎಂದಿನಂತೆಯೇ ಹಾಕಿ ಸ್ಪೂರ್ತಿ ಮೆರೆದು ದೇಶಕ್ಕಾಗಿ ಆಟವಾಗಿದ್ದಾರೆ.

ದ್ವಿತೀಯ ಕ್ವಾರ್ಟರ್‍ನಲ್ಲಿ ಮೈದಾನದ ಡಿ. ಆವರಣದೊಳಗೆ ಬಂದ ಬಾಲ್‍ನ್ನು ಆಕರ್ಷಕವಾಗಿ ತಂಡದ ಮತ್ತೋರ್ವ ಆಟಗಾರ ತಲ್ವಿಂದರ್ ಸಿಂಗ್‍ಗೆ ಪಾಸ್ ಮಾಡಿ ಭಾರತದ ಪರವಾಗಿ ಮೂರನೇ ಗೋಲನ್ನು ದಾಖಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಸುನಿಲ್ ಅವರ ಆಟವನ್ನು ಕೋಟ್ಯಾಂತರ ಹಾಕಿ ಪ್ರೇಮಿಗಳು ಕಣ್‍ತುಂಬಿಕೊಂಡರು. ಮನಸ್ಸಿನೊಳಗಿನ ನೋವನ್ನು ತೋರ್ಪಡಿಸದೇ ದೇಶಕ್ಕಾಗಿ ಆಟವಾಡುತ್ತಿದ್ದ ಸುನಿಲ್ ಅವರ ಹಾಕಿಪ್ರೇಮವನ್ನು ಕಂಡು ಅವರನ್ನು ಹತ್ತಿರದಿಂದ ಬಲ್ಲವರೂ ಸಹ ಕ್ಷಣಕಾಲ ಮೂಕವಿಸ್ಮಿತರಾದರು.

ಎಸ್.ವಿ. ಸುನಿಲ್ ಅವರ ಸಹೋದರಿ ಸವಿತಾ ಅವರ ಪತಿ ಗಣೇಶ್ (46) ಅವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದು, ನಿನ್ನೆ ದಿನ ಬೆಳಿಗ್ಗೆ 10 ಗಂಟೆಗೆ ಮಂಗಳೂರಿನ ವಾಮಂಜೂರಿನಲ್ಲಿ ನಿಧನರಾದರು. ಇಂದು ಅಂತ್ಯಕ್ರಿಯೆ ನೆರವೇರಿತು.

ಕಳೆದ 2009-10ರಲ್ಲಿ ನಡೆದ ಅಜ್ಲಾನ್ ಷಾ ಕಪ್ ಹಾಕಿ ಪಂದ್ಯಾವಳಿಯ ಫೈನಲ್‍ನಲ್ಲೂ ಸಹ ಸುನಿಲ್ ಮಲೇಷ್ಯಾದಲ್ಲಿ ಆಟವಾಡುತ್ತಿದ್ದ ಸಂದರ್ಭ ಅವರ ತಂದೆ ವಿಠಲಾಚಾರ್ಯ ಅವರು ನಿಧನರಾದರು. ತಂದೆಯ ನಿಧನದ ಸುದ್ದಿಯ ನಡುವೆಯೂ ದೇಶಕ್ಕಾಗಿ ಆಟವಾಡಿದ ಸುನಿಲ್, ಅಮೋಘ ಆಟದ ಮೂಲಕ ಭಾರತ ತಂಡ ಫೈನಲ್‍ನಲ್ಲಿ ಭರ್ಜರಿ ಜಯಗಳಿಸಲು ಸಾಧ್ಯವಾಯಿತು. ಈ ಗೆಲುವನ್ನು ಸುನಿಲ್ ಅವರ ತಂದೆಗೆ ಭಾರತ ತಂಡ ಸಮರ್ಪಿಸಿ ಹಿರಿಯ ಆಟಗಾರನಿಗೆ ಗೌರವ ಸಲ್ಲಿಸಿತ್ತು.

ಒಟ್ಟಾರೆ ತನ್ನ ಕುಟುಂಬದ ಈರ್ವರ ನಿಧನದ ಸಂದರ್ಭದಲ್ಲೂ ಹೊರದೇಶದಲ್ಲಿ ತಾಯ್ನಾಡಿಗಾಗಿ ಆಟವಾಡಿದ ಆಟಗಾರ ಸುನಿಲ್ ಅವರ ಬದ್ಧತೆ ಮೆಚ್ಚುವಂತದ್ದು. ಆದರೂ ತನ್ನ ತಂದೆ ಹಾಗೂ ಬಾವನ ಅಂತಿಮ ಕ್ಷಣಗಳಲ್ಲಿ ಅವರ ಮುಖವನ್ನೂ ನೋಡಲಾಗದ ದುರದೃಷ್ಟ ಈ ಆಟಗಾರನಿಗೆ ಒದಗಿದ್ದು ವಿಧಿಯಾಟಕ್ಕೆ ಸಾಕ್ಷಿಯಷ್ಟೇ!