ಸುಂಟಿಕೊಪ್ಪ, ಜೂ.19: ಲಂಡನ್‍ನಲ್ಲಿ ನಡೆದ ಚಾಂಪಿಯನ್ ಟ್ರೋಫಿ ಕ್ರಿಕೆಟ್ ಫೈನಲ್ ಪಂದ್ಯಾಟದಲ್ಲಿ ಭಾರತವನ್ನು ಸೋಲಿಸಿದ ಪಾಕಿಸ್ತಾನದ ಪರ ಪಟಾಕಿಸಿಡಿಸಿ ಸಂಭ್ರಮಾಚರಣೆ ಆಚರಿಸಿದ ಮೂರು ಮಂದಿ ಆರೋಪಿಗಳನ್ನು ಬಂಧಿಸಿದ್ದು, ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ. ಸ್ಥಳೀಯರು ನೀಡಿದ ದೂರಿನ ಮೇರೆ ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ತಾ. 18 ರಂದು ರಾತ್ರಿ ಲಂಡನ್‍ನಲ್ಲಿ ನಡೆದ ಚಾಂಪಿಯನ್ ಟ್ರೋಫಿ ಕ್ರಿಕೆಟ್‍ನ ಫೈನಲ್ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಲಿದೆ ಎಂದೂ ನಿರೀಕ್ಷಿಸಲಾಗಿತ್ತು ಆದರೆ ಪಾಕಿಸ್ತಾನ ತಂಡ ಎಲ್ಲಾ ವಿಭಾಗದಲ್ಲೂ ಮೇಲುಗೈ ಸಾಧಿಸಿ ಭಾರತವನ್ನು ಮಣಿಸಿತ್ತು.

ಪಂದ್ಯ ಮುಗಿದ ತಕ್ಷಣ 7ನೇ ಹೊಸಕೋಟೆ

(ಮೊದಲ ಪುಟದಿಂದ) ಕಲ್ಲುಕೋರೆ, ಕಲ್ಲೂರು, ಅಂದಗೋವೆ ಗ್ರಾಮಗಳಿಗೆ ತೆರಳುವ ವೃತ್ತದ ಬಳಿಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನದಲ್ಲಿ ಬಂದ ಸ್ಥಳೀಯರಾದ 7ನೇ ಹೊಸಕೋಟೆ ಗ್ರಾ.ಪಂ.ಉಪಾಧ್ಯಕ್ಷ ಮುಸ್ತಾಫ (ಕುಂಞಕುಟ್ಟಿ) ಅವರ ಪುತ್ರ ರಿಯಾಜ್, ಇಬ್ರಾಹಿಂ ಅವರ ಪುತ್ರ ಅಬ್ದುಲ್ ಸಮದ್, ಕೆ.ಎ.ಮಹಮ್ಮದ್ ಅವರ ಪುತ್ರ ಜಬ್ಬೀರ್ ಹಾಗೂ ಮುನೀರ್ ಅವರುಗಳು ಪಟಾಕಿ ಸಿಡಿಸಿ ಪಾಕಿಸ್ತಾನ ಪರ ಘೋಷಣೆ ಹಾಕಿ ಸಂಭ್ರಮಾಚರಣೆ ಮಾಡಿದರೆಂದು ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಬಿಜೆಪಿ ಮುಖಂಡರಾದ ದಾಸಂಡ ರಮೇಶ್ ಚಂಗಪ್ಪ ಹಾಗೂ ಜೀವನ್ ದೂರು ಸಲ್ಲಿಸಿದ್ದಾರೆ. ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಐಪಿಸಿ 295 (ಎ) 34ನೇ ಸೆಕ್ಷನ್ ಅಡಿ ಕೋಮು ಪ್ರಚೋದನೆಗೆ ಅವಕಾಶ ನೀಡಿದ್ದಲ್ಲದೆ ಘರ್ಷಣೆಗೆ ಅವಕಾಶ ಕಾರಣಕ್ಕೆ ಹಾಗೂ ಸಮಾನ ಉದ್ದೇಶಕ್ಕಾಗಿ ಕೆಲವರು ಬೆಂಬಲ ನೀಡಿದ್ದಾರೆಂದು ಮೊಕದ್ದಮೆ ದಾಖಲಿಸಿ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಾಜರು ಪಡಿಸಿದ್ದಾರೆ. ಆರೋಪಿ ಮುನೀರ್ ತಲೆಮರೆಸಿಕೊಂಡಿದ್ದಾನೆ.

ಕುಶಾಲನಗರ ಡಿವೈಎಸ್‍ಪಿ ಸಂಪತ್ ಕುಮಾರ್, ವೃತ್ತನಿರೀಕ್ಷಕರಾದ ಕ್ಯಾತೆಗೌಡ ಸುಂಟಿಕೊಪ್ಪ ಠಾಣಾಧಿಕಾರಿ ಹೆಚ್.ಎಸ್.ಬೋಜಪ್ಪ ಅವರು ಈ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮೊಕದ್ದಮೆ ದಾಖಲಿಸಿದ್ದಾರೆ.

ದೇಶ ದ್ರೋಹಿಗಳು ಚಿಗುರಿನಲ್ಲಿ ಮಟ್ಟಹಾಕಬೇಕು: ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ಬಿ.ಬಿ.ಭಾರತೀಶ್ ಸುದ್ಧಿಗಾರರೊಂದಿಗೆ ಮಾತನಾಡಿ ನಮ್ಮ ದೇಶದಲ್ಲೇ ಇದ್ದು ಪಾಕಿಸ್ತಾನದ ಪರ ಪ್ರೀತಿ ತೋರಿಸುತ್ತಿರುವವರು ದೇಶದ್ರೋಹಿಗಳಾಗಿರುತ್ತಾರೆ. ಪಾಕಿಸ್ತಾನ ಕ್ರಿಕೆಟ್‍ನಲ್ಲಿ ಜಯಗಳಿಸಿದಾಗ ಪಟಾಕಿ ಸಿಡಿಸಿ ಸಂಭ್ರಮ ಆಚರಿಸುವ ನಡವಳಿಕೆ ಅಪಾಯಕಾರಿಯಾದುದು. ಪಾಲೂರು ದೇವಾಲಯ ಧ್ವಂಸ ಪ್ರಕರಣ, ಹೊಸತೋಟದಲ್ಲಿ ಉಗ್ರಗಾಮಿ ನಜೀರ್ ಬಾಂಬ್ ತಯಾರಿಸಿದ್ದ ಪ್ರಕರಣ ಮಸೀದಿ ಮೇಲೆ ಪಾಕಿಸ್ತಾನ ಧ್ವಜ ಹಾರಿಸಿರುವದು ಜಿಲ್ಲೆಯಲ್ಲಿ ಕೆಲ ವರ್ಷಗಳ ಹಿಂದೆ ನಡೆದಿದೆ.

ಇದೀಗ ಪಾಕಿಸ್ತಾನ ಕ್ರಿಕೆಟ್‍ನಲ್ಲಿ ವಿಜಯ ಸಾಧಿಸಿದಾಗ ಪಟಾಕಿ ಸಿಡಿಸಿ ಜಯಘೋಷ ಹಾಕುವ ಕಾರ್ಯಕ್ರಮ ಸಹಿಸಲು ಸಾಧ್ಯವಿಲ್ಲ; ಈ ಆರೋಪಿಗಳ ವಿರುದ್ದ ಪೊಲೀಸರು ಕ್ರಮಕೈಗೊಳ್ಳಬೇಕು, ಚಿಗುರಿನಲ್ಲಿ ಇಂತಹ ದುಸ್ಸಾಹಸ ಮಾಡುವವರನ್ನು ಮಟ್ಟ ಹಾಕಬೇಕೆಂದು ಹೇಳಿದರು.

ಜಿ.ಪಂ. ಸದಸ್ಯ ಪಿ.ಎಂ. ಲತೀಫ್, ಮುಸ್ಲಿಂ ಬಾಂಧವರಿಗೆ ಭಾರತ ಸುರಕ್ಷಿತ ಪ್ರದೇಶವಾಗಿದೆ. ಪಾಕಿಸ್ತಾನದಲ್ಲಿ ಮಸೀದಿ ಮೇಲೆ ಆಗಾಗ್ಗೆ ದಾಳಿಯಾಗಿರುತ್ತದೆ. ಇಂತಹ ಕೃತ್ಯ ಎಸಗಿದ್ದು ವಿಷಾದನೀಯ ಆದರೂ ಈ ಯುವಕರಿಗೆ ಒಮ್ಮೆ ಉದಾರ ಮನಸ್ಸಿನಿಂದ ಕ್ಷಮೆ ನೀಡಿ ಅವರ ಈ ಕೃತ್ಯದ ಬಗ್ಗೆ ಬಹಿರಂಗ ಕ್ಷಮೆಯಾಚಿಸಲಿದ್ದಾರೆ ಎಂದು ಮನವಿ ಮಾಡಿಕೊಂಡರು, ಇದಕ್ಕೆ ವಿಎಚ್‍ಪಿ ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ, ಕುಶಾಲನಗರದ ವಿಎಚ್‍ಪಿ ನಾಯಕ ನಾಣಯ್ಯ, ನಗರ ಬಿಜೆಪಿ ಅಧ್ಯಕ್ಷ ಪಿ.ಆರ್.ಸುನಿಲ್ ಕುಮಾರ್, ಹಾಗೂ ಗ್ರಾಮಸ್ಥರು ಒಪ್ಪಲಿಲ್ಲ.

ಗಡಿಪಾರು ಆಗ್ರಹ

7ನೇ ಹೊಸಕೋಟೆಯಲ್ಲಿ ನಿನ್ನೆ ರಾತ್ರಿಯ ಬೆಳವಣಿಗೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರು, ಪಾಕಿಸ್ತಾನ ಪರ ಘೋಷಣೆ ಮೂಲಕ ದೇಶದ್ರೋಹದ ಅಪಾದನೆಗೆ ಗುರಿಯಾದವರನ್ನು ಕೊಡಗಿನಿಂದ ಗಡಿಪಾರು ಮಾಡುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ. ಅಲ್ಲದೆ, ಪೊಲೀಸ್ ಇಲಾಖೆ ಆರೋಪಿಗಳ ವಿರುದ್ಧ ರಾಷ್ಟ್ರದ್ರೋಹದಡಿ ಮೊಕದ್ದಮೆ ದಾಖಲಿಸುವ ಮೂಲಕ ಮುಂದೆ ಇಂತಹ ಕೃತ್ಯಗಳು ಮರುಕಳಿಸದಂತೆ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ‘ಶಕ್ತಿ’ಗೆ ಹೇಳಿಕೆ ನೀಡಿದ್ದಾರೆ.