ಮಡಿಕೇರಿ, ಜೂ. 20: ಭೂಮಿ ಮತ್ತು ವಸತಿಗಾಗಿ ಆಗ್ರಹಿಸಿ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.ನಗರದ ಗಾಂಧಿ ಮೈದಾನದಿಂದ ಜಿಲ್ಲಾಡಳಿತ ಭವನಕ್ಕೆ ಮೆರವಣಿಗೆಯಲ್ಲಿ ಆಗಮಿಸಿದ ಪ್ರತಿಭಟನಾಕಾರರು ಭೂಮಿ, ವಸತಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ವತಿಯಿಂದ ಸ್ವಾತಂತ್ರ್ಯ ಸೇನಾನಿ ಹೆಚ್.ಎಸ್. ದೊರೆಸ್ವಾಮಿ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕ್ ಭೂಮಿ ಮತ್ತು ಹಕ್ಕು ವಂಚಿತ ನಿರ್ಗತಿಕರ ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟು, ಹೋರಾಟ ನಡೆಸುತ್ತಿದ್ದು, ಆ ಹೋರಾಟಕ್ಕೆ ಬೆಂಬಲವಾಗಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು ಎಂದು ಹೋರಾಟಗಾರರು ತಿಳಿಸಿದರು.

ಕರ್ನಾಟಕ ರಾಜ್ಯದಾದ್ಯಂತ ಇರುವ ಬಡ ಜನರ ಭೂಮಿ, ವಸತಿ ಸಮಸ್ಯೆಯನ್ನು ತುರ್ತಾಗಿ ಪರಿಹರಿಸಲು ಉನ್ನತಾಧಿಕಾರಿಗಳ ಸಮಿತಿಯನ್ನು ಕೂಡಲೇ ರಚಿಸಬೇಕು, ಸಮಿತಿಯಲ್ಲಿ ಹೋರಾಟ ನಿರತ ಸಂಘಟನೆಗಳ ಮತ್ತು ನಾಗರಿಕ ಸಮಾಜದ ಕನಿಷ್ಟ ಐದು ಜನ ಪ್ರತಿನಿಧಿಗಳಿರಬೇಕು, ರಾಜ್ಯದಾದ್ಯಂತ ಬಡವರು ಬಿಡಿ ಬಿಡಿ ಹೋರಾಟಗಳ ಮೂಲಕ ಭೂಮಿ, ವಸತಿ ಸಂಬಂಧಿತ ಪ್ರಕರಣಗಳನ್ನು ಒಂದು ತಿಂಗಳ ಒಳಗಾಗಿ ಬಡ ಜನರ ಪರವಾಗಿ ಇತ್ಯರ್ಥಪಡಿಸುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಸಾರ್ವತ್ರಿಕವಾದ ಕಾರ್ಯಾದೇಶವನ್ನು ಜಾರಿ ಮಾಡಬೇಕು, ಹೋರಾಟಗಳ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಬಡ ಹೋರಾಟಗಾರರ ಮೇಲೆ ಪೊಲೀಸರು ದಾಖಲಿಸಿರುವ ಎಲ್ಲಾ ಕೇಸುಗಳನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು, ಬೇಡಿಕೆಗಳ ಈಡೇರಿಕೆಗಾಗಿ ಕಳೆದ 6 ದಿವಸಗಳಿಂದ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆ ಕೂಡಲೇ ಎಚ್ಚೆತ್ತು ಬೇಡಿಕೆಗಳನ್ನು ಈಡೇರಿಸಬೇಕು. ತಪ್ಪಿದರೆ ಈ ಹೋರಾಟ ನಿರಂತರವಾಗಿ ಸಾಗಿ ರಾಜ್ಯದಾದ್ಯಂತ ಉಗ್ರ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾ ಮುಖಂಡ ಅಮೀನ್ ಮೊಹಿಸಿನ್ ಹೇಳಿದರು.

ದೊರೆಸ್ವಾಮಿ ನೇತೃತ್ವದಲ್ಲಿ ಕಳೆದ 4 ದಿನಗಳಿಂದ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರದ ಪ್ರತಿನಿಧಿಗಳು ಇದುವರೆಗೂ ವಿಚಾರಿಸದೇ ಇರುವದು ಸ್ವಾತಂತ್ರ್ಯ ಸೇನಾನಿಗೆ ಮಾಡಿದ ಅವಮಾನವಾಗಿದೆ. ಸಮಸ್ಯೆ ಬಗೆಹರಿಸುವ ಕಾಳಜಿ ಸರ್ಕಾರಕ್ಕೆ ಇಲ್ಲ ಎಂದು ಆರೋಪಿಸಿದರು. ಈ ಸಂದರ್ಭ ಹೋರಾಟ ಸಮಿತಿಯ ಕೆ.ಬಿ. ರಾಜು, ಕೆ.ಜೆ. ಪೀಟರ್, ಮನ್ಸೂರ್, ಹೆಚ್. ಕೆ. ಮೊಣ್ಣಪ್ಪ, ಪಿಎಫ್‍ಐನ ಹ್ಯಾರೀಸ್ ಹಾಗೂ ಇನ್ನಿತರರು ಇದ್ದರು.