ಪೊನ್ನಂಪೇಟೆ, ಜೂ. 19 : ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಅದರ ಮಹತ್ವ ವನ್ನು ಸದಾ ಕಾಪಾಡಿಕೊಂಡರೆ ಮಾತ್ರ ಮನುಷ್ಯನಲ್ಲಿ ಮನುಷ್ಯತ್ವ ಮೂಡಲು ಸಾಧ್ಯ. ಇಲ್ಲದಿದ್ದಲ್ಲಿ ಮನುಷ್ಯನ ಬದುಕಿಗೆ ಅರ್ಥವೇ ಇರುವುದಿಲ್ಲ. ಜೀವನದಲ್ಲಿ ವ್ಯಕ್ತಿತ್ವ ರೂಪುಗೊಳ್ಳಲು ಮನುಷ್ಯತ್ವ ಅತಿ ಅಗತ್ಯ ಎಂದು ರಾಜ್ಯ ವಿಧಾನ ಪರಿಷತ್ತಿನ ವಿರೋಧ ಪಕ್ಷದ ಮಾಜಿ ನಾಯಕರಾದ, ಹಿರಿಯ ಮುತ್ಸದಿ ಎ.ಕೆ. ಸುಬ್ಬಯ್ಯ ಅವರು ಅಭಿಪ್ರಾಯ ಪಟ್ಟರು.ಕೊಡವ ಮುಸ್ಲಿಂ ಅಸೋಸಿ ಯೇಷನ್ (ಕೆ.ಎಂ.ಎ) ವತಿಯಿಂದ ಭಾನುವಾರ ಸಂಜೆ ವೀರಾಜಪೇಟೆ ಯಲ್ಲಿ ರಂಜಾನ್ ತಿಂಗಳ ವೃತಾಚಾರಣೆಯ ಮಹತ್ವದ ಗೌರವಾರ್ಥವಾಗಿ ಜರುಗಿದ ಕೆ.ಎಂ.ಎ ಇಪ್ತಾರ್ ಮೀಟ್ 2017 ‘ಸ್ನೇಹ ಸಂದೇಶ’ದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ವ್ಯಕ್ತಿತ್ವ ರೂಪುಗೊಳ್ಳಬೇಕಾದರೆ ಮನುಷ್ಯ ತನ್ನ ಸೀಮಿತ ಚೌಕಟ್ಟಿನ ವ್ಯಾಪ್ತಿ ಮೀರಿ ತೆರೆದ ಹೃದಯದಿಂದ ವಿಶಾಲವಾದ ಮನೋಭೂಮಿಕೆ ಯಿಂದ ಚಿಂತಿಸುವಂತಾಗಬೇಕು. ಮನುಷ್ಯರೆಲ್ಲರೂ ಒಂದೆ ಎಂಬ ಏಕ ದೃಷ್ಠಿಯಿಂದ ನೋಡುವಂತಾಗಬೇಕು. ಇದನ್ನೆ ಪ್ರವಾದಿ ಮಹಮ್ಮದ್ ಪೈಗಂಬರ್, ಭಗವಾನ್ ಬುದ್ದ, ಏಸು ಕ್ರಿಸ್ತರಂತಹ ಮಹಾಮಾನವತಾವಾದಿ ಗಳು ಪ್ರತಿಪಾಧಿಸಿ ಮಾನವೀಯ ಜಗತ್ತಿಗೆ ಉತ್ತಮವಾದ ಸಾರ್ವಕಾಲಿಕ ಸಂದೇಶ ನೀಡಿದ್ದರು ಎಂದು ಹೇಳಿದರು. ಮನುಷ್ಯ ಹಿಂದಕ್ಕೆ ಚಿಂತಿಸಿದರೆ ಅದು ಆತನ ಅವನತಿಗೆ ಕಾರಣವಾಗುತ್ತದೆ ಅಲ್ಲದೇ, ಆತನಲ್ಲಿ ಮಾನವೀಯ ಗುಣದ ಬದಲು ರಾಕ್ಷಸೀಯ ಗುಣ ಬೆಳೆಯಲು ಆರಂಭ ವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ‘ಪವಿತ್ರ ರಂಜಾನ್ ತಿಂಗಳ ವೃತಾಚರಣೆಯ ವೈಜ್ಞಾನಿಕ ಮಹತ್ವ’ ಎಂಬ ವಿಷಯದಲ್ಲಿ ಪ್ರಧಾನ ಭಾಷಣ ಮಾಡಿದ ಕೊಟ್ಟಮುಡಿಯ ಮರಕಝುಲ್ ಹಿದಾಯ ವಿದ್ಯಾಸಂಸ್ಥೆಯ ಸ್ನಾತಕೊತ್ತರ ವಿಭಾಗದ ವಿದ್ಯಾರ್ಥಿ ಬಲ್ಯತ್‍ಕಾರಂಡ ಫಾರೂಕ್ ಅವರು, ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಇಡೀ ಜಗತ್ತಿನ ವೈದ್ಯಲೋಕ ಯಾವುದೇ ತರ್ಕ ಗಳಿಲ್ಲದೇ ಅಂಗೀಕರಿಸುವ ರಂಜಾನ್ ತಿಂಗಳ ವೃತಾಚರಣೆ ಮನುಷ್ಯನ ಆರೋಗ್ಯಕ್ಕೆ ಪೂರಕವಾಗಿ ಪ್ರಭಾವಿಸು ತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಒಂದು ತಿಂಗಳ ಕಾಲ ಉಪವಾಸ ಆಚರಿಸುವದರಿಂದ ಉಳಿದ 11 ತಿಂಗಳು ಮನುಷ್ಯನ ದೇಹದಲ್ಲಿ ಜಡುಗಟ್ಟಿದ ಆರೋಗ್ಯ ವ್ಯವಸ್ಥೆ ಶುದ್ದಿಯಾಗುತ್ತದೆ ಎಂಬುದು ವೈದ್ಯಕೀಯ ಲೋಕ ಒಪ್ಪಿಕೊಳ್ಳುವ ಸಾರ್ವಕಾಲಿಕ ಸತ್ಯವಾಗಿದೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ಕೆ.ಎಂ.ಎ.ಯ ಸ್ಥಾಪಕ ಅಧ್ಯಕ್ಷ ಕುವೇಂಡ ವೈ ಹಂಝತುಲ್ಲಾ ಅವರು, ಜನರು ಸೀಮಿತ ವ್ಯವಸ್ಥೆಗೆ ಮಾತ್ರ ಸೀಮತ ಗೊಂಡರೆ ಅದ್ದರಿಂದ ಪರಿಪೂರ್ಣ ಬದುಕು ಸಾಧ್ಯವಿಲ್ಲ. ಪರಸ್ಪರ ಸ್ನೇಹ ವಿಶ್ವಾಸದಿಂದ ಮಾತ್ರ ಐಕ್ಯತೆಯ ಸಮಾಜ ನಿರ್ಮಾಣ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೆ.ಎಂ.ಎ. ಅಧ್ಯಕ್ಷ ದುದ್ದಿಯಂಡ ಹೆಚ್.ಸೂಫಿ ಅವರು ಮಾತನಾಡಿ, ಧಾರ್ಮಿಕ ಆಚರಣೆಯಾದ ರಂಜಾನ್ ತಿಂಗಳ ಉಪವಾಸ ಆಚರಣೆ ವೇಳೆ ಆಯೋಜಿಸಲ್ಪಡುವ ಇಫ್ತಾರ್ ಕೂಟಗಳಲ್ಲಿ ಸಮಾಜದ ಎಲ್ಲಾ ವರ್ಗದ ಜನರು ಒಂದೆಡೆ ಸೇರಿ ಪರಸ್ಪರ ಸ್ನೇಹ ವಿಶ್ವಾಸ ಹಂಚಿಕೊಳ್ಳುವ ದರಿಂದ ಮನಸ್ಸಿಗೆ ಹೆಚ್ಚು ಸಂತೋಷ ನೀಡುತ್ತದೆ. ಅಲ್ಲದೇ ಇದು ಹೆಚ್ಚು ಸಾರ್ಥಕತೆಯನ್ನು ಒದಗಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಇಫ್ತಾರ್ ಕೂಟದಲ್ಲಿ ಭಾರತೀಯ ವೈದ್ಯಕೀಯ ಸಂಘದ (ಐ.ಎಂ.ಎ) ವಿರಾಜಪೇಟೆ ತಾಲೂಕು ಘಟಕದ ಅಧ್ಯಕ್ಷ ಡಾ. ಬಿ.ಜಿ. ಕಿರಣ್, ಕೊಡವ ಪ್ರೆಸ್ ಕ್ಲಬ್ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್, ಸಿ.ಪಿ.ಐ.(ಎಂ) ಜಿಲ್ಲಾ ಕಾರ್ಯದರ್ಶಿ ಡಾ. ದುರ್ಗಾಪ್ರಸಾದ್, ಕೊಡಗು ಪತ್ರಿಕಾ ಭವನ ಟ್ರಸ್ಟ್‍ನ ಮ್ಯಾನೇಜಿಂಗ್ ಟ್ರಸ್ಟಿ ಬಿ.ಎನ್. ಮನು ಶೆಣೈ, ವೀರಾಜಪೇಟೆ ಪಟ್ಟಣ ಪಂಚಾಯ್ತಿಯ ಹಿರಿಯ ಸದಸ್ಯ ಎಸ್.ಹೆಚ್. ಮೊಯಿನುದ್ದೀನ್, ಸದಸ್ಯ ವಕೀಲ ಕೆ.ಎಂ. ವಿಶ್ವನಾಥ್, ಮತೀನ್, ಮೊಹಮ್ಮದ್ ರಾಫಿ, ಬಿ.ಜೆ.ಪಿ ಮುಖಂಡ ಜೊಕಿಮ್ ರಾಡ್ರಿಗಸ್, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕರಾದ ಎನ್.ಎನ್. ದಿನೇಶ್, ಪಟ್ಟಣದ ಉಧ್ಯಮಿಗಳಾದ ಚೋಪಿ ಜೊಸೆಫ್, ರಶೀದ್, ವೀರಾಜಪೇಟೆ ಕಾರ್ಪೋರೇಶನ್ ಬ್ಯಾಂಕ್‍ನ ವ್ಯವಸ್ಥಾಪಕ ಉಮಾಮಹೇಶ್, ಕೊಡಗು ಜಿಲ್ಲಾ ಕಾಂಗ್ರೆಸ್ ವಕ್ತಾರ ಎ. ಎಸ್. ಟಾಟು ಮೊಣ್ಣಪ್ಪ, ದ.ಕೊಡಗು ಮುಸ್ಲಿಂ ಸಹಕಾರ ಸಂಘದ ಅಧ್ಯಕ್ಷ ಮೊಹಮ್ಮದ್ ಸುಹೈಬ್ ಮೊದಲಾದವರು ಪಾಲ್ಗೊಂಡಿದ್ದರು.

ಕೊಟ್ಟಮುಡಿಯ ಮರಕಝುಲ್ ಹಿದಾಯ ವಿದ್ಯಾಸಂಸ್ಥೆಯ ವಿದ್ಯಾರ್ಥಿ ಅಬ್ದುಲ್ ಶುಕೂರ್ ಖಿರಾತ್ ಪಠಿಸಿದರು. ಕೆ.ಎಂ.ಎ ನಿರ್ದೇಶಕ ಮೀತಲತಂಡ ಎಂ. ಇಸ್ಮಾಯಿಲ್ ಸ್ವಾಗತಿಸಿದರು. ಈತಲತಂಡ ರಫೀಕ್ ತೂಚಮಕೇರಿ ಕಾರ್ಯಕ್ರಮ ನಿರೂಪಿಸಿ ದರೆ ನಿರ್ದೇಶಕ ಪುದಿಯತಂಡ ಹೆಚ್. ಷಂಶುದ್ದೀನ್ ವಂದಿಸಿದರು.