ಶನಿವಾರಸಂತೆ, ಜೂ. 19: ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಜಗೇರಿ ಗ್ರಾಮದ ನಿವಾಸಿ ಸುಂದರಮ್ಮ (55) ಎಂಬವರಿಗೆ ಕಾರೊಂದು ಡಿಕ್ಕಿ ಪಡಿಸಿ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಾಗ ದಾರಿ ಮಧ್ಯೆ ಮೃತರಾಗಿದ್ದಾರೆ. ಈ ಬಗ್ಗೆ ಶನಿವಾರಸಂತೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಭಾನುವಾರ ಸಂಜೆ 4 ಘಂಟೆಗೆ ಸುಂದರಮ್ಮ ದುಂಡಳ್ಳಿ ಗ್ರಾಮ ಪಂಚಾಯಿತಿ ಕಛೇರಿಯ ಸಮಿಪದ ಫಾರೆಸ್ಟ್ ಆಫಿಸ್ ಮುಂಭಾಗದ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಾರೊಂದು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಓಡಿಸಿಕೊಂಡು ಬಂದು ಡಿಕ್ಕಿ ಪಡಿಸಿ ಚಾಲಕ ಕಾರನ್ನು ನಿಲ್ಲಿಸದೆ ಪರಾರಿಯಾಗಿರುತ್ತಾನೆ. ಸುಂದರಮ್ಮ ಅವರ ತಲೆ, ಮುಖ, ಕೈ ತೀವ್ರ ಜಖಂಗೊಂಡಿದ್ದು ಚರಂಡಿಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದ ಅವರನ್ನು ಆಟೋರಿಕ್ಷ ಚಾಲಕ ಪ್ರಸನ್ನ ಶನಿವಾರಸಂತೆ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು, ವೈದ್ಯರಿಲ್ಲದ ಕಾರಣ ಆಂಬ್ಯುಲೆನ್ಸ್‍ನಲ್ಲಿ ಹಾಸನ ಸರಕಾರಿ ಅಸ್ಪತ್ರೆಗೆ ಸಾಗಿಸಲಾಯಿತು. ಚಿಕಿತ್ಸೆ ನೀಡಿದ ಹಾಸನ ವೈದ್ಯರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುತ್ತಿರುವಾಗ ಇಂದು ಬೆಳಗ್ಗಿನ ಜಾವ ಮಾರ್ಗ ಮಧ್ಯೆ ಮೃತರಾಗಿದ್ದಾರೆ. ಆಟೋರಿಕ್ಷಾ ಚಾಲಕ ಕೆ.ಎನ್. ಪ್ರಸನ್ನ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೋಲಿಸ್ ಠಾಣೆಯ ಹೆಡ್ ಕಾನ್ಸ್‍ಟೇಬಲ್ ಮಹೇಶ್ ಹಾಗೂ ಸಹಾಯಕ ಸಬ್ ಇನ್ಸ್‍ಪೆಕ್ಟರ್ ಹೆಚ್.ಎಂ. ಗೋವಿಂದ ಪ್ರಕರಣ ದಾಖಲಿಸಿದ್ದಾರೆ. ಮೃತರು ಮೂವರು ಪುತ್ರಿಯರನ್ನು ಅಗಲಿದ್ದಾರೆ.