ಮಡಿಕೇರಿ, ಜೂ.20 : ನಗರದ ಹೊರ ವಲಯದಲ್ಲಿರುವ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಬಸ್‍ಗಳ ವೇಳಾಪಟ್ಟಿ ನಿಗದಿಪಡಿಸುವ ಸಭೆ ನಡೆಯಿತು. ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ಅನ್ವರ್ ಪಾಷ, ಕೆ.ಎಸ್.ಆರ್.ಟಿ.ಸಿ. ಡಿಪೋ ವ್ಯವಸ್ಥಾಪಕಿ ಗೀತಾ, ಪುತ್ತೂರು ಕೆ.ಎಸ್.ಆರ್.ಟಿ.ಸಿ. ವಿಭಾಗದ ಅಧಿಕಾರಿಗಳು, ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ, ಬಿ.ಟಿ.ಪೂಣಚ್ಚ ಇತರರು ಇದ್ದರು. ಸಭೆಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್‍ಗಳ ಸಂಚಾರ ಕುರಿತು ಚರ್ಚೆ ನಡೆಯಿತು. ಮಾಂದಲ್ ಪಟ್ಟಿಗೆ ಬಸ್ ವ್ಯವಸ್ಥೆ ಕಲ್ಪಿಸುವ ಬಗ್ಗೆ ತೀರ್ಮಾನಿಸಲಾಯಿತು.

(ಮೊದಲ ಪುಟದಿಂದ) ಮಡಿಕೇರಿ- ದೇವಸ್ತ್ತೂರು-ಮಾಂದಲ್ ಪಟ್ಟಿ ಮಾರ್ಗ ಬೆಳಿಗ್ಗೆ 7.30 ಗಂಟೆಗೆ ನಗರದ ಬಸ್ ನಿಲ್ದಾಣದಿಂದ ಹೊರಡುವದು, 8.15 ಗಂಟೆಗೆ ಮಾಂದಲ್‍ಪಟ್ಟಿಗೆ ತಲಪುವದು. ಮತ್ತೆ ವಾಪಸು ಮಡಿಕೇರಿಗೆ ಆಗಮಿಸಲಿದೆ. ಮತ್ತೆ ಸಂಜೆ 4 ಗಂಟೆಗೆ ಮಡಿಕೇರಿ ನಗರದಿಂದ ಹೊರಟು ಮಾಂದಲ್ ಪಟ್ಟಿಗೆ ತೆರಳಲಿದೆ. ಮತ್ತೆ ವಾಪಸು ಮಡಿಕೇರಿಗೆ ತಲುಪಲಿದೆ.

ಮಡಿಕೇರಿ-ಚೆಟ್ಟಳ್ಳಿ-ಸಿದ್ದಾಪುರ ಮಾರ್ಗ ಬಸ್ ಸಂಚಾರಕ್ಕೆ ಅನುಮತಿ ನೀಡಲಾಯಿತು. ಸಂಜೆ 6.30 ಗಂಟೆಗೆ ನಗರದ ಬಸ್ ನಿಲ್ದಾಣದಿಂದ ಹೊರಟು 7.25 ಗಂಟೆಗೆ ಸಿದ್ದಾಪುರ ತಲುಪಲಿದೆ. ಸಿದ್ದಾಪುರದಿಂದ ಬೆಳಿಗ್ಗೆ 6.15 ಕ್ಕೆ ಹೊರಟು ಬೆಳಿಗ್ಗೆ 7.10 ಗಂಟೆಗೆ ನಗರಕ್ಕೆ ತಲುಪಲಿದೆ. ಈ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರಕ್ಕೆ ಅನುಮೋದನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಮೇಶ್ ಜೋಯಪ್ಪ ಅವರು ಪರವಾನಗಿ ಇಲ್ಲದೆ ಕೆ.ಎಸ್.ಆರ್.ಟಿ.ಸಿ. ಬಸ್‍ಗಳು ಸಂಚರಿಸುತ್ತಿದ್ದು, ಇವುಗಳ ನಿಯಂತ್ರಣ ಮಾಡಬೇಕು ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಅನ್ವರ್ ಪಾಷ ಅವರು ಪರವಾನಗಿ ಇಲ್ಲದೆ ಸಂಚರಿಸುವ ಎಲ್ಲಾ ರೀತಿಯ ಬಸ್‍ಗಳನ್ನು ಸ್ಥಗಿತಗೊಳಿಸಲಾಗುವದು. ಈ ಸಂಬಂಧ ವಿಶೇಷ ತಂಡವನ್ನು ರಚಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವದು ಎಂದರು. ಪ್ರಾದೇಶಿಕ ಸಾರಿಗೆ ಕಚೇರಿಯ ವ್ಯವಸ್ಥಾಪಕರಾದ ಶಿವಣ್ಣ, ರೀಟಾ ಇತರರು ಇದ್ದರು.