ಮಡಿಕೇರಿ, ಜೂ. 19: ಕೊಡಗು ಜಿಲ್ಲೆಯಲ್ಲಿ ಪ್ರಸ್ತುತ ಹಗುರದಿಂದ ಸಾಧಾರಣವಾದ ಮಳೆಯಾಗುತ್ತಿದೆ. ಆಗಾಗ್ಗೆ ಬಿಸಿಲಿನ ವಾತಾವರಣ ನಡು ನಡುವೆ ಸಣ್ಣ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಈಗಿನ ವಾತಾವರಣ ಇನ್ನೂ ಒಂದೆರಡು ದಿನ ಮುಂದು ವರಿಯಲಿದೆ. ಮುಂದಿನ ಮೂರು - ನಾಲ್ಕು ದಿನಗಳಲ್ಲಿ ಕೊಡಗಿನಲ್ಲಿ ಭಾರೀ ಮಳೆಯಾಗುವ ಸಂಭವವಿದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಜಿಲ್ಲೆಯಲ್ಲಿ ಇದೀಗ ಕೆಲವೆಡೆ ಒಂದೊಂದು ರೀತಿಯ ವಾತಾವರಣ ಕಂಡು ಬರುತ್ತಿವೆ. ತಾ. 17 ರಂದು ಮಡಿಕೇರಿ ನಗರದಲ್ಲಿ ಅಪರಾಹ್ನ ಭಾರೀ ಮಳೆಯಾಗಿದ್ದರೆ, ಪಕ್ಕದ ಮೂರ್ನಾಡುವಿನಲ್ಲಿ ಬಿಸಿಲಿನ ವಾತಾವರಣವಿತ್ತು. ನಿನ್ನೆ ದಿನವಿಡೀ ಬಿಸಿಲಿನ ವಾತಾವರಣ ಕಂಡು ಬಂದಿದ್ದು, ಅಪರಾಹ್ನ 3.30ರ ಬಳಿಕ ತುಸು ಮಳೆ ಸುರಿಯಿತು. ಜಿಲ್ಲೆಯ ಇನ್ನಿತರ ಕಡೆಗಳಲ್ಲಿ ಈ ರೀತಿಯ ವಾತಾವರಣ ಗೋಚರವಾಗುತ್ತಿದೆ. ಕೃಷಿ ಚಟುವಟಿಕೆಯೂ ನಿಧಾನಗತಿಯಲ್ಲಿ ಸಾಗುತ್ತಿದೆ.
ಜಿಲ್ಲೆಯಲ್ಲಿ ಈ ತನಕ ಸರಾಸರಿ 19.44 ಇಂಚು
(ಮೊದಲ ಪುಟದಿಂದ) ಮಳೆಯಾಗಿದೆ. ಕಳೆದ ವರ್ಷ ಈ ಅವಧಿಯಲ್ಲಿ 12.91 ಇಂಚು ಸರಾಸರಿ ಮಳೆಯಾಗಿತ್ತು. ಕಳೆದ ಜನವರಿಯಿಂದ ಈ ತನಕ ಮಡಿಕೇರಿ ತಾಲೂಕಿನಲ್ಲಿ 27.7 ಇಂಚು, ವೀರಾಜಪೇಟೆಗೆ 17.57 ಹಾಗೂ ಸೋಮವಾರಪೇಟೆಗೆ 15.21 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮಡಿಕೇರಿ ತಾಲೂಕಿಗೆ 20.32, ವೀರಾಜಪೇಟೆಗೆ 10.14 ಹಾಗೂ ಸೋಮವಾರಪೇಟೆ ತಾಲೂಕಿಗೆ 8.22 ಇಂಚು ಮಳೆಯಾಗಿತ್ತು.