ಗೋಣಿಕೊಪ್ಪಲು, ಜೂ. 19: ಪವಿತ್ರ ರಂಜಾನ್ ಹಬ್ಬದ ಪ್ರಯುಕ್ತ ಗೋಣಿಕೊಪ್ಪಲಿನ ಜಮಾಅತ್ ಇಸ್ಲಾಮೀ ಹಿಂದ್ ಸಂಸ್ಥೆ ವತಿಯಿಂದ ಚೈತನ್ಯ ಹಾಲ್ ಇದಾಯಿತ್ ಸೆಂಟರ್‍ನಲ್ಲಿ ಇಫ್ತಾರ್ ಸ್ನೇಹಮಿಲನ ಕಾರ್ಯಕ್ರಮ ಜರುಗಿತು. ಗೋಣಿಕೊಪ್ಪ ಜಮಾಅತ್ ಇಸ್ಲಾಮೀ ಹಿಂದ್ ಸಂಸ್ಥೆಯ ಅಧ್ಯಕ್ಷ ತನ್ವೀರ್ ಅಹಮ್ಮದ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಚಿನ್ನ ಬೆಳ್ಳಿ ವರ್ತಕರ ಸಂಘದ ಗೌರವಾಧ್ಯಕ್ಷ ಎಂ.ಜಿ. ಮೋಹನ್ ಮಾತನಾಡಿ, ಎಲ್ಲಾ ಧರ್ಮವು ಒಂದೇ ಎಂದು ನಾವು ಕಾಣಬೇಕು. ಎಲ್ಲಾ ಧರ್ಮದಲ್ಲೂ ಉಪವಾಸ ವ್ರತ ಮಾಡುತ್ತಾರೆ. ಇಸ್ಲಾಂ ಧರ್ಮದಲ್ಲಿ ಇದನ್ನು ಸಮರ್ಪಕವಾಗಿ ಮಾಡುತ್ತಿದ್ದಾರೆ. ಎಲ್ಲಾ ಧರ್ಮದಲ್ಲಿಯೂ ಗುರು ಹಿರಿಯರನ್ನು ಗೌರವಿಸಬೇಕೆಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಂಗಳೂರಿನ ಜಮಾಅತ್ ಇಸ್ಲಾಮೀ ಹಿಂದ್ ಸಂಸ್ಥೆಯ ಉಪಾಧ್ಯಕ್ಷ ಕೆ.ಪಿ.ಮುಹಮ್ಮದ್ ಇಸ್ತಾಕ್ ಮಾತನಾಡಿ ಜನರು ಧರ್ಮದ ಮೌಲ್ಯವನ್ನು ಪಾಲಿಸಬೇಕು ನಾವು ಜಗತ್ತನ್ನು ಬಿಟ್ಟು ಹೋದಾಗ ನಮ್ಮ ಬಳಿ ಏನೂ ಇರುವದಿಲ್ಲ. ಜೀವಿತಾವಧಿಯಲ್ಲಿ ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವದರೊಂದಿಗೆ ಸ್ವತಂತ್ರವಾಗಿ ಬದುಕಲು ಎಲ್ಲ್ಲರನ್ನು ಬಿಡಬೇಕು. ಧರ್ಮವನ್ನು ಸರಿಯಾದ ರೀತಿಯಲ್ಲಿ ಪಾಲಿಸಿದಲ್ಲಿ ಎಲ್ಲಿಯೂ ಅಶಾಂತಿ ಮೂಡುವದಿಲ್ಲ ಎಂದರು.

ಅತಿಥಿಗಳಾದ ಗೋಣಿಕೊಪ್ಪಲಿನ ದಂತ ವೈದ್ಯ ಡಾ|| ಸೂರಜ್ ಉತ್ತಪ್ಪ, ಹಿರಿಯರಾದ ಲಕ್ಷ್ಮಣ್, ಕಾವೇರಿ ಹಿಲ್ಸ್ ಬಡಾವಣೆಯ ಅಧ್ಯಕ್ಷ ತಿರುನೆಲ್ಲಿಮಾಡ ಜೀವನ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಹೆಚ್.ಕೆ.ಚೆಲುವ, ಶಾಂತೆಯಂಡ ಮಧುಮಾಚಯ್ಯ, ರಾಮಚಾರಿ, ಜಪ್ಪಕೊಲ್ಲಿ ಕುಮಾರ, ನಜೀರ್ ಅಹಮ್ಮದ್, ಕುಲ್ಲಚಂಡ ಗಣಪತಿ, ಜೆ.ಕೆ.ಸೋಮಣ್ಣ, ಮುರುಗ, ಅಬ್ದುಲ್ ಸಮ್ಮದ್, ಅಬ್ದುಲ್ ರೆಹಮಾನ್ ಬಾಪು, ಮುಂತಾದವರು ಹಾಜರಿದ್ದರು. ಜಮಾಅತ್ ಇಸ್ಲಾಮೀ ಹಿಂದ್ ಜಿಲ್ಲಾ ಸಂಚಾಲಕ ಸಿ.ಹೆಚ್. ಅಪ್ಸರ್ ಸ್ವಾಗತಿಸಿ, ಗೋಣಿಕೊಪ್ಪಲು ಜಮಾಅತ್ ಇಸ್ಲಾಮೀ ಹಿಂದ್ ಸಂಸ್ಥೆಯ ಉಪಾಧ್ಯಕ್ಷ ಚಡ್‍ಖಾನ್ ರಫಿಕ್ ವಂದಿಸಿದರು.