*ಗೋಣಿಕೊಪ್ಪಲು, ಜೂ. 19: ತಾಲೂಕಿನಲ್ಲಿ ಸುಮಾರು 16 ಡೆಂಗ್ಯೂ ಪ್ರಕರಣ ಕಾಣಿಸಿಕೊಂಡಿದೆ. ಜನರು ಈ ಬಗ್ಗೆ ಜಾಗೃತಿ ವಹಿಸಬೇಕಾಗಿದ್ದು, ಮನೆಯ ಸುತ್ತ ಮುತ್ತ ಶುಚಿತ್ವವನ್ನು ಕಾಪಾಡಿಕೊಳ್ಳಬೇಕಾಗಿದೆ. ನೀರು ನಿಲ್ಲದಂತೆ ಗಮನ ಹರಿಸಬೇಕಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.ಪೊನ್ನಂಪೇಟೆ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು.
ಈ ಹಿಂದೆ ಈ ಬಗ್ಗೆ ‘ಶಕ್ತಿ’ಯಲ್ಲಿ ಗೋಣಿಕೊಪ್ಪ ಹಾಗೂ ಬಾಳೆಲೆ ಭಾಗದಲ್ಲಿ ಡೆಂಗ್ಯು ಇದೆ ಎಂದು ವರದಿ ಮಾಡಿತ್ತು. ವರದಿ ಆಧಾರದ ಮೇಲೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆದು ತಾಲೂಕಿನಲ್ಲಿ 16 ಪ್ರಕರಣಗಳು ದಾಖಲಾಗಿದ್ದು, ಬಾಳೆಲೆ ಭಾಗದಲ್ಲಿ ಹೆಚ್ಚಿಗೆ ಕಾಣಿಸಿಕೊಂಡಿದೆ ಎಂದು ಹೇಳಿದರು. ಜೀಬ್ರಾ ಕ್ರಾಸ್ ರೀತಿಯಲ್ಲಿರುವ ಸೊಳ್ಳೆಗಳು ಕಚ್ಚಿದಾಗ ರೋಗ ಹರಡುತ್ತದೆ. ಜ್ವರ, ಕಾಲು, ಕೈ ನೋವು, ತಲೆನೋವು, ಕಣ್ಣಿನ ನೋವುಗಳು ಕಾಣಿಸಿಕೊಂಡರೆ ವೈದ್ಯರಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸುಮಾರು 52 ಅಂಗನವಾಡಿ ಕೇಂದ್ರಗಳನ್ನು ದುರಸ್ತಿ ಮಾಡಲಾಗುವದು ಎಂದು ಇಲಾಖೆ ಅಧಿಕಾರಿ ತಿಳಿಸಿದರು. ಅಂಗನವಾಡಿ ಕೇಂದ್ರಗಳಲ್ಲಿ ವಾಯಿದೆ ಮೀರಿದ ಹಾಲಿನ ಹುಡಿ ವಿತರಣೆ ಮಾಡಿದ ಬಗ್ಗೆ ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್ ಪ್ರಶ್ನಿಸಿ ಅಧಿಕಾರಿ ಹಾಗೂ ಅಂಗನವಾಡಿ ಕೇಂದ್ರದ ಶಿಕ್ಷಕಿಯ ಬೇಜವಾಬ್ದಾರಿತನದ ಬಗ್ಗೆ ಖಂಡಿಸಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು
(ಮೊದಲ ಪುಟದಿಂದ) ಶಿಕ್ಷಕಿಯ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಕ್ಕೆ ಉತ್ತರಿಸದ ಅಧಕಾರಿ ಈಗಾಗಲೆ ಶಿಕ್ಷಕಿಗೆ ಶೋಕಾಸ್ ನೋಟೀಸ್ ನೀಡಿದ್ದೇವೆ. ಮತ್ತು ಶಿಸ್ತಿನ ಕ್ರಮ ಕೈಗೊಂಡಿದ್ದೇವೆ. ಶಿಕ್ಷಕಿ ಪ್ರಕರಣಕ್ಕೆ ವಿಷಾದ ವ್ಯಕ್ತಪಡಿಸಿ ತಪ್ಪೊಪ್ಪಿಗೆ ಪತ್ರ ನೀಡಿದ್ದಾರೆ ಎಂದು ತಿಳಿಸಿದರು.ಕೃಷಿ ಇಲಾಖೆಯಲ್ಲಿ ರೈತರಿಗೆ ಭೂಚೇತನಾ ಹಾಗೂ ಕೃಷಿಭಾಗ್ಯ ಯೋಜನೆಯಡಿಯಲ್ಲಿ ಹಲವು ಸೌಕರ್ಯಗಳನ್ನು ಕಲ್ಪಿಸಿದೆ. ಭೂಚೇತನಾ ಕಾರ್ಯಕ್ರಮದಲ್ಲಿ ಯಂತ್ರಗಳನ್ನು ಬಳಸಿ ನಾಟಿ ಮಾಡಲು ಪ್ರೋತ್ಸಾಹ ನೀಡುತ್ತಿದ್ದು, 5 ಏಕ್ರೆ ಕೃಷಿ ಮಾಡುವ ರೈತರಿಗೆ 3 ಸಾವಿರ ಪ್ರೋತ್ಸಾಹಧನ ನೀಡಲಾಗುವದು. ಏಕರೆಗೆ 600 ರೂ. ಪ್ರೋತ್ಸಾಹಧನ ನೀಡಲಾಗುತ್ತಿದೆ. ಕೃಷಿ ಭಾಗ್ಯದಲ್ಲಿ ಕೃಷಿ ಹೊಂಡ, ಡೀಸೆಲ್ ಪಂಪ್ ವಿತರಣೆಗೆ ಸಹಾಯಧನ ನೀಡಲಾಗುವದು ಎಂದು ತಾಲೂಕು ಕೃಷಿ ಅಧಿಕಾರಿ ರೀನಾ ತಿಳಿಸಿದರು.
ಮೀನುಗಾರಿಕೆ ಇಲಾಖೆ ವತಿಯಿಂದ ರೈತರಿಗೆ ಬಲೆ ಹಾಗೂ ಟ್ರೇಗಳನ್ನು ನೀಡಲಾಗುತ್ತಿದೆ. ಕೆರೆ ನಿರ್ಮಾಣಕ್ಕೆ 30 ಸಾವಿರ ಅನುದಾನ ನೀಡಲಾಗುತ್ತಿದ್ದು, ಫಲಾನುಭವಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮೀನು ಮಾರಾಟಕ್ಕೆ ನಾಲ್ಕು ಚಕ್ರ, ದ್ವಿಚಕ್ರ, ತ್ರಿಚಕ್ರ ವಾಹನಗಳಿಗೆ 35 ಸಾವಿರ ಸಹಾಯಧನ ನೀಡಲಾಗುತ್ತಿದೆ. ಸ್ಥಳೀಯ ಪಂಚಾಯ್ತಿಯಿಂದ ಮೀನು ಮಾರಾಟದ ಪರವಾನಿಗೆ ಹೊಂದಿದವರಿಗೆ ಸಹಾಯಧನ ಲಭಿಸುತ್ತದೆ ಎಂದು ಇಲಾಖೆ ಸಹಾಯಕ ಅಧಿಕಾರಿ ಪ್ರಿಯಾ ಮಾಹಿತಿ ನೀಡಿದರು.
ಆರ್.ಟಿ.ಐ ಅಡಿಯಲ್ಲಿ 201 ಮಕ್ಕಳು ದಾಖಲಾಗಿದ್ದಾರೆ. ಪ್ರೌಢಶಾಲೆಗಳಿಗೆ 10 ಅತಿಥಿ ಶಿಕ್ಷಕರನ್ನು ನೀಡಲಾಗಿದ್ದು, ಈ ಬಾರಿ ಸ್ಥಳೀಯರಿಗೆ ಆದÀ್ಯತೆ ನೀಡಲಾಗಿದೆ. ಗೋಣಿಕೊಪ್ಪ ಪ್ರಾಥಮಿಕ ಶಾಲೆಯ ಕಟ್ಟಡ ಶಿಥಿಲಾವಸ್ಥೆಯಲ್ಲಿದ್ದು, ಕಟ್ಟಡ ಕುಸಿದು ಮಕ್ಕಳ ಮೇಲೆ ಬಿದ್ದು ಅನಾಹುತ ಉಂಟಾಗುವ ಮೊದಲೇ ಇಲಾಖೆ ಎಚ್ಚೆತ್ತುಕೊಳ್ಳಬೇಕು ಎಂದು ತಾ.ಪಂ. ಸದಸ್ಯ ಜಯಾ ಪೂವಯ್ಯ ಹೇಳಿದರು. ಕೂಡಲೇ ಕಟ್ಟಡ ತೆರವಿಗೆ ಕ್ರಮಕೈಗೊಳ್ಳುತ್ತೇವೆ ಎಂದು ಅಧಿಕಾರಿ ಸಭೆಯಲ್ಲಿ ತಿಳಿಸಿದರು. ಶಾಲಾ ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಗೋಣಿಕೊಪ್ಪ ಪ್ರೌಢಶಾಲೆ ಮೈದಾನದಲ್ಲಿ ಯುವಕರು, ಕಾಲೇಜು ವಿದ್ಯಾರ್ಥಿಗಳು ಗಾಂಜಾ ಪದಾರ್ಥಗಳನ್ನು ಬಳಸುತ್ತಿರುವದು ಕಂಡು ಬಂದಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು. ಈ ಬಗ್ಗೆ ಉತ್ತರಿಸಿದ ಶಿಕ್ಷಣಾಧಿಕಾರಿ ಹೆಚ್.ಕೆ. ಪಾಂಡು ಶೀಘ್ರ ಕ್ರಮಕ್ಕೆ ಮುಂದಾಗುವದಾಗಿ ಹೇಳಿದರು.
ಕಂದಾಯ ಇಲಾಖೆಯಲ್ಲಿ ಹಲವು ಲೋಪದೋಷಗಳನ್ನು ಸರಿಪಡಿಸಬೇಕಾಗಿದೆ. ಹಕ್ಕುಪತ್ರಗಳನ್ನು ವಿತರಿಸಬೇಕಾಗಿದೆ ಎಂದು ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ ತಹಶೀಲ್ದಾರರಿಗೆ ಹೇಳಿದರು. ಕಂದಾಯ ಇಲಾಖೆಯಲ್ಲಿನ ಸಮಸ್ಯೆಗಳನ್ನು ಪರಿಹರಿಸಲು ತಾ.ಪಂ. ಸದಸ್ಯರ ಹಾಗೂ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಇಲಾಖೆಯಲ್ಲಿನ ಭ್ರಷ್ಟತೆ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ ಎಂದು ತಹಶೀಲ್ದಾರ್ ಆರ್. ಗೋವಿಂದ ರಾಜು ಹೇಳಿದರು.
ಚೆಂಬೆಬೆಳ್ಳೂರು ಗ್ರಾ.ಪಂ. ವ್ಯಾಪ್ತಿಯ ಮಗ್ಗುಲ, ಬಿಳುಗುಂದದಲ್ಲಿ ಸ್ಮಶಾನಕ್ಕೆ ನೀಡಿದ ಜಾಗದಲ್ಲಿ ಅನಧೀಕೃತ ಮಸೀದಿ ನಿರ್ಮಾಣ ವಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಚೆಂಬೆಬೆಳ್ಳೂರು ಗ್ರಾ.ಪಂ. ಅಧ್ಯಕ್ಷ ವಾಟೇರಿರ ನಾಣಯ್ಯ ಸಭೆಯ ಗಮನಕ್ಕೆ ತಂದರು.
ತಾಲೂಕಿನಲ್ಲಿ ಈ ಬಾರಿ 95 ಶೇಕಡವಾರು ಮದÀ್ಯ ಮಾರಾಟವಾಗಿದೆ ಎಂದು ಅಬಕಾರಿ ಇಲಾಖೆ ಅಧಿಕಾರಿ ಲಕ್ಷ್ಮೀಶ್ ಮಾಹಿತಿ ನೀಡಿದರು. ರಾಜ್ಯ ಹೆದ್ದಾರಿ ಬದಿಯ ಮದ್ಯದಂಗಡಿಗಳನ್ನು ಸ್ಥಳಾಂತರಿಸಲು ಜೂನ್ 30 ಗಡುವು ನೀಡಲಾಗಿದೆ ಎಂದು ತಿಳಿಸಿದರು.
ಅಕ್ಷರದಾಸೋಹ, ಸಮಾಜ ಕಲ್ಯಾಣ ಇಲಾಖೆ, ಚೆಸ್ಕಾಂ, ಹಿಂದುಳಿದ ವರ್ಗ, ಪರಿಶಿಷ್ಟ ವರ್ಗ, ಅರಣ್ಯ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಭೆಯ ಗಮನಕ್ಕೆ ತಂದರು.
ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಕುಮಾರ್, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಗಣೇಶ್, ಕಾರ್ಯನಿರ್ವಹಣಾಧಿಕಾರಿ ಕಿರಣ್ ಪೆಡ್ನೇಕರ್, ತಹಶೀಲ್ದಾರ್ ಆರ್. ಗೋವಿಂದರಾಜು ಉಪಸ್ಥಿತರಿದ್ದರು.
-ಎನ್.ಎನ್.ದಿನೇಶ್