ಮಡಿಕೇರಿ, ಜೂ.19: ಕೊಡಗು ಜಿಲ್ಲೆಯಲ್ಲಿ ಹೊಸದಾಗಿ ವೈದ್ಯಕೀಯ ಕಾಲೇಜು ಆರಂಭಗೊಂಡಿದ್ದು, ಪ್ರಥಮ ವರ್ಷದ ತರಗತಿಗಳು ಪೂರ್ಣಗೊಂಡು ದ್ವಿತೀಯ ವರ್ಷದ ತರಗತಿಗಳು ಆರಂಭವಾಗಿದ್ದು, ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ವಿಧಾನ ಸಭೆಯಲ್ಲಿ ಗಮನ ಸೆಳೆದಿದ್ದಾರೆ. ಇದಕ್ಕೆ ಮಾಹಿತಿ ನೀಡಿರುವ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ ಪ್ರಕಾಶ್ ಪಾಟೀಲ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ಕಟ್ಟಡ ಕಾಮಗಾರಿಗೆ 161.65 ಕೋಟಿ ರೂ. ಮೊತ್ತಕ್ಕೆ ಅನುಮೋದನೆಗೊಂಡಿದ್ದು, ಈಗಾಗಲೇ ಕಾಮಗಾರಿ ಅಂತಿಮ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

2016-17ನೇ ಸಾಲಿನಿಂದ 150 ಎಂ.ಬಿ.ಬಿ.ಎಸ್. ವಿದ್ಯಾರ್ಥಿಗಳ ಪ್ರವೇಶ ಮಿತಿಯೊಂದಿಗೆ ಈಗಾಗಲೇ ಕಾರ್ಯಾರಂಭಗೊಂಡಿದ್ದು, ಭಾರತ ವೈದ್ಯಕೀಯ ಮಂಡಳಿ ಮಾರ್ಗಸೂಚಿ ಅನ್ವಯ ಪ್ರಸ್ತುತ ಅವಶ್ಯವಿರುವ ಕಾಲೇಜು ಕಟ್ಟಡ, ಗ್ರಂಥಾಲಯ, ಪ್ರಯೋಗಾಲಯ, ಬೋಧನಾ ಕೊಠಡಿ, ಬಾಲಕ ಬಾಲಕಿಯರಿಗೆ ವಸತಿ ನಿಲಯ, ವೈದ್ಯರ ವಸತಿ ನಿಲಯಗಳನ್ನು ಒದಗಿಸಲಾಗಿದೆ. ಒಳಚರಂಡಿ ವ್ಯವಸ್ಥೆ ಮತ್ತು ದೀಪಗಳ ವ್ಯವಸ್ಥೆ

(ಮೊದಲ ಪುಟದಿಂದ) ಮಾಡಲಾಗುತ್ತಿದೆ. ಸಂಸ್ಥೆಯ ಭೋದಕ ಆಸ್ಪತ್ರೆಗೆ ವೈದ್ಯಕೀಯ ಉಪಕರಣ, ಪೀಠೋಪಕರಣ ಮೂಲಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಗುತ್ತಿಗೆದಾರರು ಕಾಮಗಾರಿ ಯನ್ನು 17 ತಿಂಗಳೊಳಗೆ ಪೂರ್ಣ ಗೊಳಿಸಬೇಕಿತ್ತು, ಆದರೆ ಹಲವು ಕಾರಣಗಳನ್ನು ನೀಡಿರುವದ ರಿಂದ ಟೆಂಡರ್‍ದಾರರು ಷರತ್ತುಗಳನ್ನು ಉಲ್ಲಂಘಿಸಿರು ವದರಿಂದ 75 ಲಕ್ಷ ರೂ.ಗಳ ಮೊತ್ತವನ್ನು ಗುತ್ತಿಗೆದಾರರ ಬಿಲ್ಲಿನಲ್ಲಿ ಕಟಾವು ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ವೈದ್ಯಕೀಯ ಕಾಲೇಜಿಗೆ ಪ್ರಸ್ತುತ ಅಗತ್ಯವಿರುವ ಮೂಲಭೂತ ಸೌಕರ್ಯಗಳಾದ ಸಿಮೆಂಟ್ ಕಾಂಕ್ರೀಟ್ ರಸ್ತೆ, ನೀರು ಸರಬರಾಜು, ಕುಡಿಯುವ ನೀರು, ಶೌಚಾಲಯಗಳು, ವಿದ್ಯುತ್ ವ್ಯವಸ್ಥೆಗಳು ಹಾಗೂ ವಸತಿ ನಿಲಯಗಳನ್ನು ಒದಗಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಈ ಸಂಸ್ಥೆಗೆ ಶಾಶ್ವತವಾಗಿ ಬೇಕಾಗಿರುವ ಶೌಚಾಲಯದ ತ್ಯಾಜ್ಯವನ್ನು ಸಂಸ್ಕರಿಸಲು ಆಧುನಿಕ ತಂತ್ರಜ್ಞಾನದ ತ್ಯಾಜ್ಯ ಸಂಸ್ಕರಣ ಘಟಕ ನಿರ್ಮಿಸಲು ಕ್ರಮವಹಿಸಲಾಗಿರುತ್ತದೆ. ಮಡಿಕೇರಿ ನಗರದ ಸ್ಟೋನ್‍ಹಿಲ್ ಬಳಿಯಿರುವ ಜಲಶುದ್ಧೀಕರಣ ಘಟಕದಿಂದ ಪ್ರತ್ಯೇಕವಾಗಿ 6.50 ಕಿ.ಮೀ. ಕೊಳವೆ ಮಾರ್ಗ ಅಳವಡಿಸಿಕೊಂಡು ಶಾಶ್ವತ ಶುದ್ಧ ನೀರು ಸರಬರಾಜು ಮಾಡಲು ಕ್ರಮವಹಿಸಲಾಗುತ್ತಿದೆ. 2017-18ನೇ ಸಾಲಿನಲ್ಲಿ ದ್ವಿತೀಯ ವರ್ಷದ ತರಗತಿಗಳು ಪ್ರಾರಂಭವಾಗ ಬೇಕಾಗಿದ್ದು, ಇದಕ್ಕೂ ಸಹ ಅಗತ್ಯವಾಗಿ ಬೇಕಾಗಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಹ ಕ್ರಮಕೈಗೊಳ್ಳ ಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವರು ಮಾಹಿತಿ ನೀಡಿದ್ದಾರೆ.