ಸೋಮವಾರಪೇಟೆ,ಜೂ.19: ಇಲ್ಲಿನ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಪಕ್ಷದ ವತಿಯಿಂದ ಆಸ್ಪತ್ರೆಗೆ ಮುತ್ತಿಗೆ ಹಾಕಲಾಗುವದು ಎಂದು ಜಾತ್ಯತೀತ ಜನತಾ ದಳ ಎಚ್ಚರಿಸಿದೆ.

ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಸ್ತ್ರೀ ರೋಗ ತಜ್ಞರಿಲ್ಲ. ಅರೆವಳಿಕೆ ವೈದ್ಯರಿಲ್ಲ. ಡಯಾಲಿಸೀಸ್ ಘಟಕ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ. ಮಕ್ಕಳ ತಜ್ಞರು ಸೇರಿದಂತೆ ಇತರ ತಜ್ಞರ ಕೊರತೆಯಿದೆ. 12 ವೈದ್ಯರಿರಬೇಕಾಗಿರುವಲ್ಲಿ ಕೇವಲ 4 ಮಂದಿ ಕೆಲಸ ಮಾಡುತ್ತಿದ್ದಾರೆ ಎಂದು ಅವ್ಯವಸ್ಥೆಗಳ ಪಟ್ಟಿ ನೀಡಿದರು.

ಸೋಮವಾರಪೇಟೆಯಲ್ಲಿ ಸರ್ಕಾರಿ ಆಸ್ಪತ್ರೆ ಇದೆ ಎಂಬದೇ ರಾಜ್ಯದ ಆರೋಗ್ಯ ಸಚಿವರಿಗೆ ಗೊತ್ತಿದ್ದಂತೆ ಕಾಣುತ್ತಿಲ್ಲ. ಇಲ್ಲಿನ ಆರೋಗ್ಯ ರಕ್ಷಾ ಸಮಿತಿ ಸಭೆಯೂ ಕಳೆದ 4 ವರ್ಷಗಳಿಂದ ನಡೆದಿಲ್ಲ. ಇಂತಹ ಸಮಿತಿಯ ಅವಶ್ಯಕತೆ ಇದೆಯೇ ಎಂದು ಪ್ರಶ್ನಿಸಿದ ಸುರೇಶ್, ತಕ್ಷಣ ಸಮಿತಿಯನ್ನು ವಿಸರ್ಜಿಸಬೇಕು. ಆಸ್ಪತ್ರೆಯ ಸಮಸ್ಯೆಗಳನ್ನು ತಕ್ಷಣ ಬಗೆಹರಿಸದಿದ್ದರೆ ಪಕ್ಷದಿಂದ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವದು ಎಂದು ಎಚ್ಚರಿಸಿದರು. ಚುನಾವಣೆ ಸಂದರ್ಭ ಮಾತ್ರ ಮತದಾರರ ಮನೆಗಳಿಗೆ ತೆರಳಿದ ಶಾಸಕರು ನಂತರ ಈ ಭಾಗದ ಸಾರ್ವಜನಿಕರನ್ನು ಮರೆತಿದ್ದಾರೆ ಎಂದು ಸುರೇಶ್ ದೂರಿದರು. ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಜನಪ್ರತಿನಿಧಿಗಳು ಸದನದಲ್ಲಿ ಪ್ರಶ್ನಿಸದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿದ್ದ ಪಕ್ಷದ ಜಿಲ್ಲಾ ಉಸ್ತುವಾರಿ ವಿ.ಎಂ. ವಿಜಯ ಮಾತನಾಡಿ, ಇಲ್ಲಿನ ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಬಡವರ ಕೆಲಸಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಆರ್‍ಟಿಸಿ ವಿತರಿಸಲು 2 ಕೌಂಟರ್‍ಗಳನ್ನು ತೆರೆಯುವಂತೆ ಸಚಿವರೇ ಸೂಚಿಸಿದ್ದರೂ ಇಂದಿಗೂ ಕಾರ್ಯಗತವಾಗಿಲ್ಲ. ಪಡಿತರ ವಿತರಣೆಯೂ ಪಾರದರ್ಶಕವಾಗಿಲ್ಲ. ನೆಮ್ಮದಿ ಕೇಂದ್ರದಲ್ಲಿ ಮಧ್ಯಾಹ್ನದ ನಂತರ ಆದಾಯ-ಜಾತಿ ದೃಡೀಕರಣ ಪತ್ರ ಸಿಗುತ್ತಿಲ್ಲ ಎಂದು ಆರೋಪಿಸಿದರು.

ತಾಲೂಕಿನ ಐಗೂರು, ನಗರಳ್ಳಿ, ಕುಂದಳ್ಳಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದ್ದು, ಇವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ವಿ.ಎಂ. ವಿಜಯ ಒತ್ತಾಯಿಸಿದರು. ಕಸ್ತೂರಿರಂಗನ್ ವರದಿ ಅನುಷ್ಠಾನ ವಿರೋಧಿಸಿ, ಸೋಮವಾರಪೇಟೆ ತಾಲೂಕು ಕಚೇರಿ ಹಾಗೂ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಖಂಡಿಸಿ ತಾ. 26ರಂದು ಆಸ್ಪತ್ರೆ ಹಾಗೂ ತಾಲೂಕು ಕಚೇರಿ ಎದುರು ಜೆಡಿಎಸ್ ವತಿಯಿಂದ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವದು ಎಂದು ಮಾಹಿತಿ ಒದಗಿಸಿದರು.

ಗೋಷ್ಠಿಯಲ್ಲಿ ಪಕ್ಷದ ಯುವ ಘಟಕದ ಅಧ್ಯಕ್ಷ ಅಜೀಶ್‍ಕುಮಾರ್, ವಕ್ತಾರ ಕೃಷ್ಣಪ್ಪ, ನಗರಾಧ್ಯಕ್ಷ ಚಂದ್ರು, ಅಲ್ಪಸಂಖ್ಯಾತ ಘಟಕದ ಮೋಣು, ಪ್ರಮುಖ ಶಿವಪ್ಪ ಅವರುಗಳು ಉಪಸ್ಥಿತರಿದ್ದರು.