*ಗೋಣಿಕೊಪ್ಪಲು, ಜೂ. 19: ಪೊನ್ನಂಪೇಟೆ ಗ್ರಾ.ಪಂ. ವ್ಯಾಪ್ತಿಯ ಪ್ಲಾಸ್ಟಿಕ್ ನಿಷೇಧ ಹಾಗೂ ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಬಗ್ಗೆ ಸ್ವಚ್ಚ ಭಾರತ್ ಅಭಿಯಾನದಡಿ ಸಾರ್ವಜನಿಕ ಜಾಗೃತಿ ಅಭಿಯಾನ ನಡೆಯಿತು.

ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಸುಮಿತಾ ಗಣೇಶ್ ಅಧ್ಯಕ್ಷತೆಯಲ್ಲಿ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ಗ್ರಾ.ಪಂ. ಸದಸ್ಯರು ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು.

ನಂತರ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿ.ಪಂ. ಸದಸ್ಯೆ ಶ್ರೀಜಾ ಸಾಜಿ ಮಾತನಾಡಿ, ಪ್ಲಾಸ್ಟಿಕ್ ಬಳಕೆಯಿಂದ ಅಂತರ್ಜಲ ಕುಸಿಯುತ್ತದೆ. ಪ್ಲಾಸ್ಟಿಕ್ ಮಣ್ಣಿನ ಮೇಲೆ ಪರಿಣಾಮ ಬೀರುವದರಿಂದ ಮಳೆಯ ನೀರು ಸಂಗ್ರಹಗೊಳ್ಳುವದಿಲ್ಲ. ಹೀಗಾಗಿ ಭೂಮಿಯಲ್ಲಿ ನೀರಿನ ಅಂಶ ಇರುವದಿಲ್ಲ. ಕುಡಿಯುವ ನೀರಿಗೆ ಸಮಸ್ಯೆಯಾಗುತ್ತದೆ. ಮನೆಗಳಿಗೆ ಮಾರುಕಟ್ಟೆಗಳಿಂದ ವಸ್ತುಗಳನ್ನು ಖರೀದಿಸುವಾಗ ಪ್ಲಾಸ್ಟಿಕ್ ಬ್ಯಾಗ್‍ಗಳನ್ನು ಬಳಸದೆ, ಬಟ್ಟೆ ಬ್ಯಾಗ್‍ಗಳನ್ನು ಬಳಸಬೇಕು ಎಂದು ಹೇಳಿದರು.

ರಾಮಕೃಷ್ಣ ಶಾರದಾಶ್ರಮದ ಅಧ್ಯಕ್ಷ ಬೋಧಸ್ವರೂಪಾನಂದಾಜಿ ಮಾತನಾಡಿ, ಸ್ಥಳೀಯ ಪಂಚಾಯಿತಿಗಳಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡುವ ಬದಲು ಸರಕಾರವೇ ಪ್ಲಾಸ್ಟಿಕ್ ತಯಾರಿಕಾ ಕಂಪನಿಗಳನ್ನು ನಿಷೇಧಿಸಬೇಕು ಎಂದು ಹೇಳಿದರು.

ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಅಬ್ದುಲ್ಲ ಮಾತನಾಡಿ, ಹಸಿ ಮತ್ತು ಒಣ ತ್ಯಾಜ್ಯಗಳನ್ನು ಬೇರ್ಪಡಿಸಿ ಬಕೆಟ್‍ಗಳಲ್ಲಿ ಸಂಗ್ರಹಿಸಿ ಇಟ್ಟರೆ ಪೌರ ಕಾರ್ಮಿಕರು ಇದನ್ನು ಪಡೆದುಕೊಳ್ಳುತ್ತಾರೆ. ವಿಂಗಡಿಸದ ಕಸವನ್ನು ಪಡೆದುಕೊಳ್ಳುವದಿಲ್ಲ ಕಸ ವಿಲೇವಾರಿಗೆ ಸಹಕರಿಸಬೇಕು ಎಂದು ತಿಳಿಸಿದರು.

ಜನರು ತಾವೇ ಸ್ವ ಕಾಳಜಿಯಿಂದ ಪ್ಲಾಸ್ಟಿಕ್ ಬಳಕೆಯನ್ನು ನಿರ್ಲಕ್ಷಿಸಿದರೆ, ಕಂಪನಿಗಳು ಸಹ ಮುಚ್ಚಿಕೊಳ್ಳುತ್ತವೆ. ಹೆಚ್ಚಾಗಿ ಜನರು ಬಟ್ಟೆ ಬ್ಯಾಗ್‍ಗಳನ್ನು ಬಳಸಿ ಎಂದು ಹೇಳಿದರು.

ಗ್ರಾ.ಪಂ. ಸದಸ್ಯರುಗಳಾದ ಅಮ್ಮತ್ತಿರ ಸುರೇಶ್, ಮೂಕಳೇರ ಲಕ್ಷ್ಮಣ್, ಜಯಲಕ್ಷ್ಮಿ, ಮೂಕಳೇರ ಕಾವ್ಯ, ಚೆಪ್ಪುಡಿರ ರೂಪ, ಸ್ವಚ್ಚಭಾರತ್ ಅಭಿಯಾನದ ನೋಡೆಲ್ ಅಧಿಕಾರಿ ಅಜ್ಜಿಕುಟ್ಟಿರ ಸೂರಜ್ ಹಾಜರಿದ್ದರು.