ಮಡಿಕೇರಿ, ಜೂ. 21: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ “ಕೌಶಲ್ಯ ಕರ್ನಾಟಕ” ಕಾರ್ಯಕ್ರಮದಡಿ ಯುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಇನ್ನಷ್ಟು ಅಗತ್ಯ ಕ್ರಮ ವಹಿಸುವಂತೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಎಂಜಿನಿಯರಿಂಗ್ ಕಾಲೇಜುಗಳ ಪ್ರಾಂಶುಪಾಲರಿಗೆ ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಸೂಚನೆ ನೀಡಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಕೌಶಲ್ಯ ಕರ್ನಾಟಕ ಯೋಜನೆಯಡಿ 18 ರಿಂದ 35 ವರ್ಷ ವಯೋಮಾನದ ನಿರುದ್ಯೋಗ ಯುವಕ ಯುವತಿಯರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿಯನ್ನು ಸರ್ಕಾರ ಉಚಿತವಾಗಿ ನೀಡಲು ಉದ್ದೇಶಿಸಿದ್ದು, ಈ ಅವಕಾಶ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ತಲುಪಬೇಕು ಎಂದರು. ಜಿ.ಪಂ. ಸಿಇಓ ಚಾರುಲತಾ ಸೋಮಲ್ ಮಾತನಾಡಿ, ಜಿಲ್ಲೆಯಲ್ಲಿ ಹಲವು ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಿದ್ದು, ಈ ಕಾಲೇಜುಗಳ ವಿದ್ಯಾರ್ಥಿಗಳು ಹೆಸರನ್ನು ಕಡ್ಡಾಯವಾಗಿ ನೋಂದಾಯಿಸಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಯುವ ಜನರಿಗೆ ಮಾಹಿತಿ ನೀಡುವಂತೆ ಪ್ರಾಂಶುಪಾಲರಿಗೆ ಸಲಹೆ ನೀಡಿದರು.

ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಸಿ.ಜಗನ್ನಾಥ್ ಅವರು ಕೌಶಲ್ಯ ಕರ್ನಾಟಕ ಯೋಜನೆಯಡಿ ಇದುವರೆಗೆ ಜಿಲ್ಲೆಯಲ್ಲಿ 2612 ಉದ್ಯೋಗಾಕಾಂಕ್ಷಿಗಳು ಹೆಸರು ನೋಂದಾಯಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಆಸಕ್ತ ನಿರುದ್ಯೋಗ ಯುವಕ ಯುವತಿಯರು ತಮ್ಮ ಹೆಸರನ್ನು ಅಂತರ್ಜಾಲ ತಾಣ ತಿತಿತಿ.ಞಚಿushಚಿಟಞಚಿಡಿ.ಛಿom ದ ಮೂಲಕ ಆನ್‍ಲೈನ್‍ನಲ್ಲಿ ನೋಂದಣಿ ಮಾಡಿಕೊಳ್ಳಬೇಕಿದೆ. ಕೌಶಲ್ಯ ಕರ್ನಾಟಕ ಯೋಜನೆಯಡಿಯಲ್ಲಿ ಕೌಶಲ್ಯ ತರಬೇತಿಗಾಗಿ ನಗರದ ಜಿಲ್ಲಾಡಳಿತ ಭವನದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಹೆಸರು ನೋಂದಾಯಿಸಬಹುದಾಗಿದೆ ಎಂದರು.

ಕೌಶಲ್ಯ ಕರ್ನಾಟಕ ಯೋಜನೆಯ ಪ್ರಯೋಜನ ಪಡೆಯುವ ಅಭ್ಯರ್ಥಿಗಳು ಞಚಿushಚಿಟಞಚಿಡಿ ಮೊಬೈಲ್ ಆಪ್ ಮೂಲಕವು ನೋಂದಾಯಿಸಬಹುದಾಗಿರುತ್ತದೆ. ಹೆಚ್ಚಿನ ವಿವರಗಳನ್ನು ತಿತಿತಿ.ಞಚಿushಚಿಟಞಚಿಡಿ.ಛಿom ಮೂಲಕ ಅಥವಾ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಮಾಹಿತಿಯನ್ನು ಪಡೆದುಕೊಳ್ಳಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ತಿಳಿಸಿದ್ದಾರೆ. ಜಿ.ಪಂ. ಯೋಜನಾ ನಿರ್ದೇಶಕ ಸಿದ್ದಲಿಂಗಮೂರ್ತಿ, ವಿವಿಧ ಇಲಾಖೆ ಅಧಿಕಾರಿಗಳು, ಪ್ರಾಂಶುಪಾಲರು, ಇತರರು ಇದ್ದರು.