ಸೋಮವಾರಪೇಟೆ, ಜೂ. 21: ಅನ್ನಭಾಗ್ಯ ಯೋಜನೆಯ ಅಕ್ಕಿ ವಿತರಣೆಯಲ್ಲಿ ಭಾರಿ ಗೋಲ್‍ಮಾಲ್ ನಡೆಯುತ್ತಿದೆ ಎಂದು ಆರೋಪಿಸಿ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು ತಾಲೂಕು ತಹಶೀಲ್ದಾರ್‍ರಿಗೆ ದೂರು ನೀಡಿದ್ದಾರೆ.

ಗರ್ವಾಲೆ ಗ್ರಾ.ಪಂ. ಉಪಾಧ್ಯಕ್ಷ ಚಾಮೇರ ಪಳಂಗಪ್ಪ ಮತ್ತು ಗ್ರಾಮಸ್ಥರು ತಹಶೀಲ್ದಾರ್ ಕಚೇರಿಗೆ ತೆರಳಿ ಆಹಾರ ಇಲಾಖೆಯ ಕೆಲ ಅಧಿಕಾರಿಗಳು, ಕೆಲ ನ್ಯಾಯಬೆಲೆ ಅಂಗಡಿ ಮಾಲೀಕರು ಶಾಮೀಲಾಗಿ ಫಲಾನುಭವಿಗಳಿಗೆ ವಿತರಿಸಬೇಕಾದ ಅಕ್ಕಿಯ ಅರ್ಧ ಭಾಗವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ತಹಶೀಲ್ದಾರ್ ಅವರಲ್ಲಿ ದೂರಿದರು.

ಕೆಲ ನ್ಯಾಯಬೆಲೆ ಅಂಗಡಿ ಹಾಗೂ ಸಂಚಾರಿ ನ್ಯಾಯಬೆಲೆ ಅಂಗಡಿಯವರು ಅಕ್ಕಿ ವಿತರಣೆ ಸಂದರ್ಭ ನಕಲಿ ಮಾಸಿಕ ಹಂಚಿಕೆ ಪ್ರಮಾಣದ ಪಟ್ಟಿಯನ್ನು ತಯಾರಿಸಿ ಆ ಪಟ್ಟಿಯನ್ನು ಬಿಪಿಎಲ್ ಫಲಾನುಭವಿಗಳಿಗೆ ತೋರಿಸಿ ಅಕ್ಕಿಯನ್ನು ವಿತರಿಸುತ್ತಿದ್ದಾರೆ. 8 ಜನರಿರುವ ಕುಟುಂಬಕ್ಕೆ 3 ಮಂದಿಗೆ ಮಾತ್ರ ಅಲಾಟ್ಮೆಂಟ್ ಆಗಿರುವದು ಎಂದು ವಿತರಿಸುತ್ತಿದ್ದು, ಉಳಿದ ಅಕ್ಕಿಯನ್ನು ಅಧಿಕ ಬೆಲೆಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಪಳಂಗಪ್ಪ ದೂರಿದರು.

ಗರ್ವಾಲೆ ಗ್ರಾ.ಪಂ.ನ ಮಂಕ್ಯಾ ಗ್ರಾಮದ ಸಿ.ಆರ್. ಚಂಗಪ್ಪ ಅವರ ಮನೆಯಲ್ಲಿ ಐವರು ವಾಸವಿದ್ದು, ಕಳೆದ 4 ತಿಂಗಳಿನಿಂದ 3 ಜನರಿಗೆ ಮಾತ್ರ ತಲಾ ಏಳು ಕೆ.ಜಿ.ಯಂತೆ ಅಕ್ಕಿ ವಿತರಿಸಿದ್ದಾರೆ. ಎ.ಎ. ಕುಟ್ಟಪ್ಪ ಅವರ ಮನೆಯಲ್ಲಿ ಇಬ್ಬರಿದ್ದು, ಒಬ್ಬರಿಗೆ ಅಕ್ಕಿ ವಿತರಿಸಲಾಗುತ್ತಿದೆ. ಕೆ.ಪಿ. ಕಾರ್ಯಪ್ಪ ಅವರ ಕುಟುಂಬದಲ್ಲಿ ಏಳು ಮಂದಿ ಸದಸ್ಯರಿದ್ದು ಒಬ್ಬರಿಗೆ ಮಾತ್ರ ವಿತರಿಸಲಾಗುತ್ತಿದೆ. ಗೌಡಂಡ ಕುಟ್ಟಪ್ಪ ಕುಟುಂಬದಲ್ಲಿ ಮೂವರಿದ್ದು, ಒಬ್ಬರಿಗೆ ಅಕ್ಕಿ ಸಿಗುತ್ತಿದೆ ಎಂದು ವಿವರಿಸಿದರು.

ಸೂರ್ಲಬ್ಬಿ ಚೋಮಕ್ಕಿ ಅವರ ಕುಟುಂಬದಲ್ಲಿ 8 ಮಂದಿ ಇದ್ದು, ಹಲವಾರು ತಿಂಗಳಿಂದ ಮೂವರಿಗೆ ಮಾತ್ರ ಅಕ್ಕಿ ವಿತರಣೆ ಆಗುತ್ತಿದೆ. ಕುಗ್ರಾಮ ಎಂದು ಕರೆಸಿಕೊಳ್ಳುವ ಕುಂಬಾರಗಡಿಗೆ ಗ್ರಾಮದ ಬೊಳ್ಳವ್ವ ಅವರ ಮನೆಯಲ್ಲಿ 8 ಮಂದಿ ಇದ್ದು, ಕಳೆದ 2 ತಿಂಗಳಿನಿಂದ ಅಕ್ಕಿಯನ್ನೇ ವಿತರಿಸುತ್ತಿಲ್ಲ. ಕುಂಬಾರಗಡಿಗೆ ಮುದ್ದಮ್ಮ ಕುಟುಂಬದಲ್ಲಿ ಈರ್ವರು ಸದಸ್ಯರಿದ್ದು, ಒಬ್ಬರಿಗೆ ಮಾತ್ರ ಅಕ್ಕಿ ವಿತರಣೆ ಆಗುತ್ತಿದೆ ಎಂದು ತಹಶೀಲ್ದಾರರಿಗೆ ಮಾಹಿತಿ ನೀಡಿದರು.

ಪಟ್ಟಣದ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಮಾಸಿಕ ಅಲಾಟ್ಮೆಂಟ್ ಪಟ್ಟಿಯನ್ನು ಪಡೆದ ತಹಶೀಲ್ದಾರ್ ಕೃಷ್ಣ ಅವರು, ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ 118ರ ಸಂಚಾರಿ ನ್ಯಾಯಬೆಲೆ ಅಂಗಡಿ ಅಲಾಟ್ಮೆಂಟ್ ಪಡೆದು ಪರಿಶೀಲಿಸಿದರು.

ಸಂಚಾರಿ ನ್ಯಾಯಬೆಲೆ ಅಂಗಡಿ ಮಾಸಿಕ ಹಂಚಿಕೆ ಪಟ್ಟಿಯಲ್ಲಿ ಹೆಚ್ಚಿನ ವ್ಯತ್ಯಾಸ ಕಂಡು ಬಂದ ಹಿನ್ನೆಲೆಯಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಮೇಲಾಧಿಕಾರಿಗಳಿಗೆ ಸೂಚಿಸ ಲಾಗುವದು ಎಂದು ತಹಶೀಲ್ದಾರ್ ಭರವಸೆ ನೀಡಿದರು.

ಈ ಸಂದರ್ಭ ಗರ್ವಾಲೆ ಗ್ರಾ.ಪಂ. ವ್ಯಾಪ್ತಿಯ ಗ್ರಾಮಸ್ಥರು ಉಪಸ್ಥಿತರಿದ್ದರು.