ಕುಶಾಲನಗರ, ಜೂ. 21: ಮಂಗಳೂರು ವಿಶ್ವವಿದ್ಯಾನಿಲಯದ ಅಳುವಾರ ಸ್ನಾತಕೋತ್ತರ ಕೇಂದ್ರ ಸ್ವತಂತ್ರ ವಿಶ್ವವಿದ್ಯಾನಿಲಯವಾಗುವ ನಿಟ್ಟಿನಲ್ಲಿ ಎಲ್ಲಾ ಅರ್ಹತೆಯನ್ನು ಪಡೆದಿರುವ ಬಗ್ಗೆ ವಿಶೇಷ ಸಮಿತಿಯಿಂದ ರಾಜ್ಯಪಾಲರಿಗೆ ವರದಿ ಸಲ್ಲಿಕೆಯಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ. ಎ.ಎಂ.ಖಾನ್ ತಿಳಿಸಿದ್ದಾರೆ.

ಅಳುವಾರ ಕೇಂದ್ರದಲ್ಲಿ ನಡೆದ ಕ್ಯಾಂಪಸ್ ನೋಡ ಬನ್ನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 4 ವರ್ಷಗಳ ಅವಧಿಯಲ್ಲಿ ಅತಿ ವೇಗದ ಬೆಳವಣಿಗೆಯೊಂದಿಗೆ ಬಹುತೇಕ ಮೂಲಭೂತ ಸೌಲಭ್ಯ ಪಡೆಯುವದ ರೊಂದಿಗೆ ವಿದ್ಯಾರ್ಥಿಗಳಿಗೆ ಕೌಶಲ್ಯಾಧಾರಿತ ಶಿಕ್ಷಣ ನೀಡುವ ಕೇಂದ್ರವಾಗಿ ಬೆಳವಣಿಗೆ ಕಾಣುತ್ತಿರುವ ಅಳುವಾರ ಸ್ನಾತಕೋತ್ತರ ಕೇಂದ್ರ ಸ್ವತಂತ್ರ ವಿಶ್ವವಿದ್ಯಾಲಯವಾಗಿ ರೂಪು ಗೊಳ್ಳುವ ಆಶಯ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗೆ ಸಂದೇಶ ನೀಡುವ ಕಾರ್ಯಕ್ರಮ ಗಳನ್ನು ಕೇಂದ್ರ ಹಮ್ಮಿಕೊಂಡಿದೆ ಎಂದ ಅವರು, ಪ್ರಸಕ್ತ ಸಾಲಿನಲ್ಲಿ 5 ನೂತನ ವಿಭಾಗಗಳನ್ನು ಕೇಂದ್ರದಲ್ಲಿ ಪ್ರಾರಂಭಿಸಲಾಗುವದು. ಅರ್ಜಿಗಳನ್ನು ಆನ್‍ಲೈನ್ ಮೂಲಕ ವಿತರಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದರೊಂದಿಗೆ ಎಲ್ಲಾ ವ್ಯವಸ್ಥೆಗಳನ್ನು ಆನ್‍ಲೈನ್ ಮೂಲಕ ನಡೆಸಲಾಗುತ್ತಿದೆ ಎಂದು ಮಾಹಿತಿ ಒದಗಿಸಿದರು.

ದೇಶದ 50 ವಿಶ್ವವಿದ್ಯಾನಿಲಯ ಗಳಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಪ್ರಸಕ್ತ 19ನೇ ಸ್ಥಾನದಲ್ಲಿರುವ ಬಗ್ಗೆ ತಿಳಿಸಿದ ಪ್ರೊ. ಎ.ಎಂ. ಖಾನ್, ಅಳುವಾರ ಕ್ಯಾಂಪಸ್‍ನಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಭದ್ರತೆಗಳನ್ನು ಒದಗಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದ ಪ್ರಭಾರ ನಿರ್ದೇಶಕ ಪ್ರೊ. ಪಿ.ಎಲ್.ಧರ್ಮ, ವಿದ್ಯಾರ್ಥಿ ಸ್ನೇಹಿ ಕ್ಯಾಂಪಸ್ ಆಗಿ ಅಳುವಾರ ಸ್ನಾತಕೋತ್ತರ ಕೇಂದ್ರ ಕಾರ್ಯನಿರ್ವಹಿಸುತ್ತಿದೆ ಎಂದರು.

ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ತೊರೆನೂರು ಗ್ರಾ.ಪಂ. ಅಧ್ಯಕ್ಷ ಕೆ.ಜಿ. ದೇವರಾಜ್ ಮಾತನಾಡಿ, ಗ್ರಾಮಾಂತರ ಪ್ರದೇಶದ ಯುವ ಜನತೆಗೆ ಉನ್ನತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸ್ನಾತಕೋತ್ತರ ಕೇಂದ್ರ ಬಹಳ ಸಹಕಾರಿಯಾಗಿದೆ ಎಂದರು.

ಕೇಂದ್ರದ ವಿಭಾಗ ಮುಖ್ಯಸ್ಥರಾದ ಪ್ರೊ. ಕೆ.ಸಿ.ಪುಷ್ಪಲತಾ, ಪ್ರೊ. ಕೆ.ಎಸ್. ಚಂದ್ರಶೇಖರಯ್ಯ ಇದ್ದರು.

ಸಂಶೋಧನಾ ವಿದ್ಯಾರ್ಥಿಗಳಾದ ಹರಿಣಾಕ್ಷಿ ಮತ್ತು ಲೇಖ ಪ್ರಾರ್ಥಿಸಿ ದರು, ಕೇಂದ್ರದ ದೈಹಿಕ ಶಿಕ್ಷಣ ವಿಭಾಗದ ಉಪನಿರ್ದೇಶಕ ಡಾ. ಟಿ. ಕೇಶವಮೂರ್ತಿ ಸ್ವಾಗತಿಸಿದರು, ಅತಿಥಿ ಉಪನ್ಯಾಸಕ ಜಮೀರ್ ಅಹಮ್ಮದ್ ನಿರೂಪಿಸಿದರು.

ಈ ಸಂದರ್ಭ ನೂರಾರು ವಿದ್ಯಾರ್ಥಿಗಳು ತಮ್ಮ ಪೋಷಕ ರೊಂದಿಗೆ ಕೇಂದ್ರಕ್ಕೆ ಭೇಟಿ ನೀಡಿ ವಿವಿಧ ವಿಷಯಗಳ ಬಗ್ಗೆ ಮಾಹಿತಿ ಪಡೆಯುವದರೊಂದಿಗೆ ಅರ್ಜಿ ಸಲ್ಲಿಸಿ ದರು. 100 ಕ್ಕೂ ಹೆಚ್ಚು ಅರ್ಜಿ ಗಳು ಈ ಸಾಲಿಗೆ ಸಲ್ಲಿಕೆಯಾಗಿದೆ ಎಂದು ಕೇಂದ್ರದ ಪ್ರಭಾರ ನಿರ್ದೇಶಕ ಪ್ರೊ. ಪಿ.ಎಲ್. ಧರ್ಮ ಮಾಹಿತಿ ನೀಡಿದ್ದಾರೆ.