ಸಿದ್ದಾಪುರ, ಜೂ. 21: ಕೆಲಸಕ್ಕೆ ತೆರಳುತ್ತಿದ್ದ ವೇಳೆ ಕಾರ್ಮಿಕರ ಮೇಲೆ ಕಾಡಾನೆ ಧಾಳಿ ನಡೆಸಿದ ಪರಿಣಾಮ ಓರ್ವ ಮಹಿಳೆ ಗಂಭೀರ ಗಾಯಗೊಂಡಿರುವ ಘಟನೆ ಚೆನ್ನಯ್ಯನಕೋಟೆ ಗ್ರಾಮದಲ್ಲಿ ನಡೆದಿದೆ.

ಅಲ್ಲಿನ ಬಿ ಕಾನನಕಾಡು ತೋಟಕ್ಕೆ ಬಾಡಗ ಬಾಣಂಗಾಲ ಗ್ರಾಮದ ಹುಂಡಿಯ ನಿವಾಸಿಗಳಾದ ನಬೀಸ, ನಸೀಮ, ಅಫ್ಸತ್, ನಬೀಸ ಎಂಬವರು ಬೆಳಗ್ಗೆ ಕೂಲಿ ಕೆಲಸಕ್ಕೆ ತೆರಳುತ್ತಿದ್ದ ಸಂದರ್ಭ ತೋಟದ ಒಳಭಾಗದಿಂದ ಕಾಡಾನೆಯೊಂದು ದಿಢೀರನೆ ದಾಳಿ ನಡೆಸಿದೆ. ಈ ಸಂದರ್ಭ ನಬೀಸ (50) ಎಂಬಾಕೆಯನ್ನು ಕಾಡಾನೆಯು ಸೊಂಡಿಲಿನಿಂದ ಎತ್ತಿ ಬಿಸಾಡಿದ ಪರಿಣಾಮ ನಬೀಸಳ ಎಡ ಕಾಲು ಹಾಗೂ ಎಡ ಕೈ ಮೂಳೆ ಮುರಿದಿದ್ದು, ಗಂಭೀರ ಗಾಯಗೊಂಡಿದ್ದಾರೆ. ಕಾಡಾನೆಯ ಆರ್ಭಟ ಹಾಗೂ ದಾಳಿಯಿಂದ ದಿಕ್ಕೆಟ್ಟು ಭಯದಿಂದ ಓಡಿದ ಸಂದರ್ಭ ನಸೀಮ (40) ಬಿದ್ದು ಗಾಯಗೊಂಡಿದ್ದಾರೆ. ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಗಂಭೀರ ಗಾಯಗೊಂಡಿರುವ ನಬೀಸಳಿಗೆ ಪಾಲಿಬೆಟ್ಟದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಥಳಕ್ಕೆ ಚೆನ್ನಯ್ಯನಕೋಟೆ ಉಪಠಾಣಾ ಮುಖ್ಯ ಪೇದೆ ಲೋಕೇಶ್ ಸ್ಥಳಕ್ಕೆ ತೆರಳಿ ಮಹಜರು ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಚೆನ್ನಯ್ಯನಕೋಟೆ ಹಾಗೂ ಪಾಲಿಬೆಟ್ಟ ಭಾಗದಲ್ಲಿ ನಿರಂತರವಾಗಿ ಕಾಡಾನೆ ಹಾವಳಿ ಹೆಚ್ಚಾಗಿದ್ದು, ಕೂಡಲೇ ಕಾಡಾನೆಗಳನ್ನು ಕಾಡಿಗಟ್ಟಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

-ವಾಸು ಎ.ಎನ್.