ವೀರಾಜಪೇಟೆ, ಜೂ.21: ದಕ್ಷಿಣ ಕೊಡಗಿನಲ್ಲಿ ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ತಾಲೂಕಿನ ವಿವಿಧೆಡೆಗಳಲ್ಲಿ ಗೋವುಗಳನ್ನು ಕಳವು ಮಾಡಿ ಕೇರಳದ ಕಸಾಯಿಖಾನೆಗೆ ಸಾಗಿಸಿದ ಆರೋಪಿಗಳನ್ನು ಪತ್ತೆ ಹಚ್ಚಲು ಪೊಲೀಸ್ ಇಲಾಖೆ ವಿಳಂಬ ಮಾಡುತ್ತಿದೆ ಎಂದು ಆರೋಪಿಸಿ, ಭಜರಂಗದಳ, ವಿಶ್ವ ಹಿಂದೂ ಪರಿಷತ್ ಹಾಗೂ ಬಿಜೆಪಿ ತಾಲೂಕು ಸಮಿತಿಯ ಕಾರ್ಯಕರ್ತರು ಇಂದು ಪ್ರತಿಭಟನೆ ನಡೆಸಿದರು.

ವೀರಾಜಪೇಟೆ ಗಡಿಯಾರ ಕಂಬದಿಂದ ಪ್ರಾರಂಭಗೊಂಡ ಮೆರವಣಿಗೆಯಲ್ಲಿ ರಾಜ್ಯ ಸರಕಾರ, ಪೊಲೀಸ್ ಇಲಾಖೆಯ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಇಲ್ಲಿನ ಮಲಬಾರ್ ರಸ್ತೆಯಲ್ಲಿರುವ ಸಮುಚ್ಚಯ ಪೊಲೀಸ್ ಠಾಣೆಗೆ ತೆರಳಿ ಡಿ.ವೈ.ಎಸ್.ಪಿ. ನಾಗಪ್ಪ ಅವರಿಗೆ ಮನವಿ ಸಲ್ಲಿಸಿದ ನಂತರ ತಾಲೂಕು ಕಚೇರಿಗೆ ತೆರಳಿ ತಾಲೂಕು ತಹಶೀಲ್ದಾರ್ ಗೋವಿಂದರಾಜು ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಡಿ.ವೈ.ಎಸ್.ಪಿ ನಾಗಪ್ಪ ಅವರು ಅಂತರರಾಜ್ಯ ಗೋವು ಕಳ್ಳರ ಮೊದಲ ತಂಡವನ್ನು ಈಗಾಗಲೇ ಬೇಧಿಸಲಾಗಿದೆ. ತನಿಖಾ ತಂಡ, ಶಂಕಿತ ಇನ್ನು ಅನೇಕ ಮಂದಿಯನ್ನು ವಿಚಾರಣೆಗೊಳಪಡಿಸಿದೆ. ಗೋವು ಕಳ್ಳರ ಬಗ್ಗೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರಲ್ಲದೆ ಗೋವು ಕಳವು ಬಗ್ಗೆ ದೂರು ಕೊಟ್ಟ ತಕ್ಷಣ ಪ್ರಕರಣ ದಾಖಲಿಸುವದಾಗಿ ಹೇಳಿದರು.

ಮನವಿ ಸ್ವೀಕರಿಸಿದ ತಹಶೀಲ್ದಾರ್ ಗೋವಿಂದರಾಜು ಅವರು ಗೋವು ಕಳವು, ಗೋವು ಅಕ್ರಮ ಸಾಗಾಟದ ವಿರುದ್ದ ಕ್ರಮ ಕೈಗೊಳ್ಳಲಾಗುವದು. ಮನವಿಯನ್ನು ಸೂಕ್ತ ಕ್ರಮಕ್ಕಾಗಿ ಸರಕಾರಕ್ಕೆ ಕಳುಹಿಸಿಕೊಡಲಾಗುವದು ಎಂದರು.

ಸಮುಚ್ಚಯ ಪೊಲೀಸ್ ಠಾಣೆಯ ಅಧಿಕಾರಿಗಳ ಹಾಗೂ ಪ್ರತಿಭಟನಾಕಾರರ ಸಮ್ಮುಖದಲ್ಲಿ ಭಜರಂಗದಳದ ಜಿಲ್ಲಾ ಸಂಚಾಲಕ ಅಜಿತ್ ಮಾತನಾಡಿ, ಅಕ್ರಮ ಗೋವುಗಳ ಸಾಗಾಟ ಹಾಗೂ ಗೋವುಗಳ ಕಳವಿಗೆ ಪೊಲೀಸ್ ಇಲಾಖೆಯ ಪರೋಕ್ಷ ಬೆಂಬಲ ಇದೆ. ಇದರಿಂದಾಗಿ ಪೊಲೀಸರು ಗೋವು ಕಳ್ಳರನ್ನು ಪತ್ತೆ ಹಚ್ಚಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಗೋವು ಕಳವು, ಅಕ್ರಮ ಸಾಗಾಟ ಆರೋಪಿಗಳು, ಈ ಪ್ರಕರಣದ ಏಜೆಂಟರುಗಳನ್ನು 15ದಿನಗಳೊಳಗೆ ಬಂಧಿಸಿ ಕ್ರಮ ಕೈಗೊಳ್ಳಬೇಕು. ಪಾಕಿಸ್ತಾನದ ಪರವಾಗಿ ವಿಜಯೋತ್ಸವ ಆಚರಣೆ ಮಾಡಿದ ದೇಶದ್ರೋಹಿಗಳ ವಿರುದ್ಧ ಪ್ರಕರಣ ದಾಖಲಿಸಿ ಇವರುಗಳನ್ನು ಗಡಿಪಾರು ಮಾಡಬೇಕು. ಅರಣ್ಯ ಸಚಿವ, ಸಂಘ ಪರಿವಾರದ ಪ್ರಮುಖ ಪ್ರಭಾಕರ್ ಭಟ್ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿರುವದಕ್ಕೆ ಸಚಿವರನ್ನು ಬಂಧಿಸಬೇಕು. ಇಲ್ಲದಿದ್ದರೆ ಕೊಡಗು ಬಂದ್ ಅನಿವಾರ್ಯವಾಗುವದು ಎಂದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಬಿ.ಜೆ.ಪಿ.ತಾಲೂಕು ಸಮಿತಿ ಅಧ್ಯಕ್ಷ ಅರುಣ್ ಭೀಮಯ್ಯ, ಜಿಲ್ಲಾ ಪಂಚಾಯಿತಿಯ ಶಶಿ ಸುಬ್ರಮಣಿ ಮಾತನಾಡಿದರು. ಪಕ್ಷದ ಜಿಲ್ಲಾ ಸಮಿತಿ ಉಪಾಧ್ಯಕ್ಷ ರಘುನಾಣಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರುಗಳಾದ ಅಚ್ಚಪಂಡ ಮಹೇಶ್, ವಿಜು ಸುಬ್ರಮಣಿ, ಸದಸ್ಯೆ ಭವ್ಯ, ಆರ್.ಎಂ.ಸಿ ಅಧ್ಯಕ್ಷ ಸುವಿನ್ ಗಣಪತಿ, ಜಿಲ್ಲಾ ಮಹಿಳಾ ಘಟಕದ ರೀನಾ ಪ್ರಕಾಶ್, ಯುವ ಮೋರ್ಚಾದ ಅಜಿತ್ ಕರುಂಬಯ್ಯ, ಜಿಲ್ಲಾ ಮಹಿಳಾ ಘಟಕದ ಕಾಂತಿ ಸತೀಶ್, ವಿಶ್ವ ಹಿಂದೂ ಪರಿಷದ್‍ನ ತಾಲೂಕು ಸಮಿತಿಯ ವೇಣು, ಭಜರಂಗದಳದ ತಾಲೂಕು ಸಂಚಾಲಕ ವಿವೇಕ್ ರೈ, ನಗರ ಸಮಿತಿಯ ಅಧ್ಯಕ್ಷ ಅಂಜಪರವಂಡ ಅನಿಲ್, ಪ್ರಧಾನ ಕಾರ್ಯದರ್ಶಿ ಟಿ.ಜೆ.ದಿವಾಕರ ಶೆಟ್ಟಿ, ಕಾರ್ಯದರ್ಶಿ ಟಿ.ಪಿ.ಯೋಗೀಶ್ ನಾಯ್ಡು, ಟಿ.ಪಿ. ಕೃಷ್ಣ, ಮಾಜಿ ಸೈನಿಕರ ರಮೇಶ್ ಕರುಂಬಯ್ಯ, ಫೆಡರೇಶನ್ ಉಪಾಧ್ಯಕ್ಷ ಮಧು ದೇವಯ್ಯ, ಇ.ಸಿ. ಜೀವನ್ ಚೋಟು ಕಾವೇರಪ್ಪ ಮತ್ತಿತರರು ಹಾಜರಿದ್ದರು.