ಮಡಿಕೇರಿ, ಜೂ.21: ಸಂಸದರು ಮತ್ತು ಶಾಸಕರ ನಿಧಿಯಡಿ ಬಿಡುಗಡೆಯಾದ ಅನುದಾನವನ್ನು ಆಯಾಯ ವರ್ಷದಲ್ಲಿ ಬಳಕೆ ಮಾಡಿ ಕಾಮಗಾರಿಗಳ ಪ್ರಗತಿ ಸಾಧಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಎಂಜಿನಿಯರ್‍ಗಳಿಗೆ ಯೋಜನಾ ಮತ್ತು ಸಾಂಖ್ಯಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರೇಣುಕಾ ಚಿದಂಬರಂ ಸ್ಪಷ್ಟ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ಸಂಸದರು, ಶಾಸಕರ ನಿಧಿಯಡಿ ಬಿಡುಗಡೆಯಾದ ಅನುದಾನ ಸಂಬಂಧ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಸಂಸದರು ಮತ್ತು ಶಾಸಕರ ನಿಧಿಯಡಿ ಬಿಡುಗಡೆಯಾದ ಅನುದಾನ ಪ್ರಗತಿ ಸಾಧಿಸುವಂತಾಗಲು ಇನ್ನಷ್ಟು ಶ್ರಮ ವಹಿಸಬೇಕಿದೆ. ಶಾಸಕರು ಮತ್ತು ಸಂಸದರ ಬಳಿ ಅಗತ್ಯ ಪ್ರಸ್ತಾವನೆಯನ್ನು ಪಡೆದು ಜಿಲ್ಲಾಧಿಕಾರಿ ಅವರಿಗೆ ಅಂದಾಜು ಪಟ್ಟಿ ಸಲ್ಲಿಸುವದು ಇಂಜನಿಯರ್‍ಗಳ ಕರ್ತವ್ಯವಾಗಿದೆ. ಆದರೆ ಈ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ರೇಣುಕಾ ಚಿದಂಬರಂ ಅವರು ಅಸಮಾಧಾನ ವ್ಯಕ್ತಪಡಿಸಿದರು.

ಸಂಸದರ ಅವಧಿ ಪೂರ್ಣಗೊಂಡ ಬಳಿಕ 18 ತಿಂಗಳವರೆಗೆ ಅನುದಾನ ಖರ್ಚು ಮಾಡಲು ಕಾಲಾವಕಾಶವಿದೆ. ಆದ್ದರಿಂದ ಬಿಡುಗಡೆಯಾದ ಅನುದಾನವನ್ನು ಸಾರ್ವಜನಿಕ ಉದ್ದೇಶಕ್ಕೆ ಖರ್ಚು ಮಾಡುವದು ಅತ್ಯಗತ್ಯ ಎಂದು ಹೇಳಿದರು.

ಯೋಜನಾ ಇಲಾಖೆಯ ಜಂಟಿ ಕಾರ್ಯದರ್ಶಿ ಎಂ.ಕೆ.ಭರ್ಮರಾಜಪ್ಪ ಪ್ರಗತಿಯ ಮಾಹಿತಿ ಪಡೆದು ಸಂಸದರು ಮತ್ತು ಶಾಸಕರ ನಿಧಿಯಡಿ ಬಿಡುಗಡೆಯಾದ ಅನುದಾನ ಸಮರ್ಪಕವಾಗಿ ಬಳಕೆಗೆ ವಿಶೇಷ ಗಮನಹರಿಸಬೇಕಿದೆ ಎಂದರು.

ಈ ಸಂಬಂಧ ಸಂಸದರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ನಡಾವಳಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಕಳುಹಿಸಿಕೊಡಬೇಕು. ಪ್ರತೀ ತಿಂಗಳು ಪ್ರಗತಿಯ ವರದಿ ಸಲ್ಲಿಸುವಂತೆ ಸೂಚನೆ ನೀಡಿದರು.

ರಸ್ತೆ, ಕುಡಿಯುವ ನೀರು, ಶಾಲಾ ಮೈದಾನ, ಕಟ್ಟಡ ಹೀಗೆ ನಾನಾ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಕಾಮಗಾರಿ ಸಂಬಂಧ ಜಿಲ್ಲಾಧಿಕಾರಿ ಅವರ ಗಮನಕ್ಕೆ ತರಬೇಕು ಎಂದು ಧರ್ಮರಾಜಪ್ಪ ಸಲಹೆ ಮಾಡಿದರು.

ಹಣವನ್ನು ಮೀಸಲಿಟ್ಟು ಖರ್ಚು ಮಾಡದಿದ್ದರೆ ಹೇಗೆ, ಸಾರ್ವಜನಿಕರಿಗೆ ಉಪಯೋಗವಾಗುವ ಕೆಲಸಗಳಿಗೆ ವಿಳಂಬ ಮಾಡುವದು ಏಕೆ ಎಂದು ಅವರು ಪ್ರಶ್ನಿಸಿದರು.

ಜಿಲ್ಲಾಧಿಕಾರಿ ಡಾ.ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ ಸಂಸದರು ಮತ್ತು ಶಾಸಕರ ಅನುದಾನದ ಅನುಷ್ಠಾನದಲ್ಲಿ ಯಾವದೇ ರೀತಿಯ ತೊಡಕಿಲ್ಲ. ಎಂಜಿನಿಯರ್‍ಗಳು ಕಾಮಗಾರಿಗಳ ಪ್ರಗತಿ ಸಂಬಂಧ ಹೆಚ್ಚಿನ ಶ್ರಮವಹಿಸಬೇಕಿದೆ ಎಂದು ಹೇಳಿದರು.

ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯ ನಿರ್ದೇಶಕ ಸಿ.ಬಿ.ಪಾಟೀಲ, ಜಿ.ಪಂ.ಕಾರ್ಯಪಾಲಕ ಎಂಜಿನಿಯರ್ ರಾಜ್ ಕುಮಾರ್ ರೆಡ್ಡಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಇಬ್ರಾಹಿಂ, ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಸಿ.ನಾಗರಾಜು, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಬಿ.ಆರ್.ಗಿರೀಶ್, ಕೃಷಿ ಇಲಾಖೆಯ ಉಪ ನಿರ್ದೇಶಕ ರಾಜು, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಸಚಿನ್, ಭಾಗ್ಯಲಕ್ಷ್ಮಿ, ಮೈಕಲ್ ಇತರರು ಇದ್ದರು.