ಮಡಿಕೇರಿ, ಜೂ.21 : ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೊಟ್ಟಿಗೆಗಳಲ್ಲಿ ಕಟ್ಟಿದ್ದ ಮತ್ತು ಮೇಯಲು ಬಿಟ್ಟ ದನಕರುಗಳನ್ನು ಕಳವು ಮಾಡಿರುವ ಪ್ರಕರಣ ಖಂಡನೀಯವಾಗಿದ್ದು, ಜಾನುವಾರುಗಳ ಚೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಕೊಂಡಂಗೇರಿಯ ಸುನ್ನಿ ಮುಸ್ಲಿಂ ಜಮಾಅತ್ ಒತ್ತಾಯಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಜಮಾಅತ್‍ನ ಅಧ್ಯಕ್ಷ ಕೆ.ವೈ.ಮೊಹಮದ್, ತಕ್ಕರಾದ ಕೆ.ಎಂ.ಯಹ್ಯಾ ಹಾಗೂ ಸಮಿತಿ ಸದಸ್ಯ ಕೆ.ಎಂ.ಆಲಿ, ಜಿಲ್ಲೆಯಲ್ಲಿ ಹಿಂದೂ- ಮುಸ್ಲಿಂ ಸಮುದಾಯದವರು ಪರಸ್ಪರ ಸ್ನೇಹಭಾವ, ಸೌಹಾರ್ದತೆಯಿಂದ ಬಾಳುತ್ತಿರುವಾಗ ಕೆಲವರು ಸಹಬಾಳ್ವೆಗೆ ವಿರುದ್ಧವಾದ ಚಟುವಟಿಕೆಗಳನ್ನು ನಡೆಸುವ ಮೂಲಕ ಶಾಂತಿ, ಸಾಮರಸ್ಯಕ್ಕೆ ಹುಳಿ ಹಿಂಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಸ್ಲಾಂ ಧರ್ಮವು ಕಳ್ಳತನ ಮಾಡುವವರ ಕೈಯನ್ನು ಕಡಿಯುವಂತೆ ಆದೇಶಿಸಿದೆ. ಆದರೆ ಧರ್ಮಾನುಯಾಯಿ ಎಂದು ಹೇಳಿಕೊಳ್ಳುತ್ತಿರುವ ಕೆಲವರು ಗೋವುಗಳನ್ನು ಕಳ್ಳತನ ಮಾಡುವÀ ಮೂಲಕ ಧರ್ಮ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವದು ಅಕ್ಷಮ್ಯ ಅಪರಾಧವಾಗಿದೆ. ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಗೋವುಗಳ ಕಳವು ಪ್ರಕರಣವನ್ನು ನಮ್ಮ ಜಮಾಅತ್ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ನೈಜ ಮುಸ್ಲಿಮರು ಎಂದಿಗೂ ಕಳವು. ಕೊಲೆ, ಅತ್ಯಾಚಾರಗಳಂತಹ ದುಷ್ಕøತ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವದಿಲ್ಲ. ಧರ್ಮದ ತತ್ವಾದರ್ಶಗಳನ್ನು ಗಾಳಿಗೆ ತೂರಿ ನಡೆಯುವ ಕೆಲವು ನಾಮಧಾರಿ ಮುಸ್ಲಿಮರಿಂದ ಇಂತಹ ದುಷ್ಕøತ್ಯಗಳು ನಡೆಯುತ್ತಿದ್ದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾದಾಗಲೇ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಲು ಸಾಧ್ಯವಾಗ ಬಹುದು ಎಂದು ಅವರುಗಳು ಅಭಿಪ್ರಾಯಪಟ್ಟಿದ್ದಾರೆ.

ರಂಜಾóನ್ ವ್ರತಾಚರಣೆಯ ದಿನಗಳು ಪ್ರತಿಯೋರ್ವ ಮುಸ್ಲಿಮನ ಪಾಲಿಗೂ ಅತ್ಯಂತ ಮಹತ್ವ ಪೂರ್ಣವಾಗಿದ್ದು, ವ್ರತಕಾಲದಲ್ಲಿ ಸಾಧ್ಯವಾದಷ್ಟು ಒಳಿತನ್ನು, ಪರೋಪಕಾರವನ್ನು ಮಾಡಬೇಕೆಂದು ಮುಸ್ಲಿಂ ಧರ್ಮ ಉಪದೇಶಿಸಿದೆ.

ವಸ್ತು ಸ್ಥಿತಿ ಹೀಗಿದ್ದರೂ ಕೆಲವು ಬೆರಳೆಣಿಕೆಯ ಮಂದಿ ಇಡಿಯ ಮುಸ್ಲಿಂ ಸಮೂಹಕ್ಕೆ ಕೆಟ್ಟ ಹೆಸರು ತರುವ ಕೃತ್ಯವನ್ನು ಎಸಗಿದ್ದಾರೆ. ಗೋವುಗಳನ್ನು ಕಳೆದು ಕೊಂಡವರಿಗೆ ಅಗತ್ಯ ಪರಿಹಾರವನ್ನು ಕಳ್ಳತನ ಮಾಡಿದವರಿಂದಲೇ ವಸೂಲಿ ಮಾಡಿ ಕೊಡಬೇಕೆಂದು ಪ್ರಮುಖರು ಒತ್ತಾಯಿಸಿದ್ದಾರೆ.