ಕೂಡಿಗೆ, ಜೂ. 21: ಹೆಬ್ಬಾಲೆ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹೊರತುಪಡಿಸಿ ಸದಸ್ಯರು ಮಂಗಳವಾರ ಪ್ರಾರಂಭಿಸಿದ ಧರಣಿ ಎರಡನೇ ದಿನವೂ ಮುಂದುವರೆಯಿತು.

ಗ್ರಾ.ಪಂನ ಸಾಮಾನ್ಯ ಸಭೆ ನಡೆದ ಸಂದರ್ಭ 1ಲಕ್ಷ ರೂ.ಗಳ ಪಂಚಾಯಿತಿಯ ಹಣವನ್ನು ಸೋಮವಾರಪೇಟೆ ತಾಲೂಕು ಪಂಚಾಯಿತಿ ಕಾರ್ಯನಿರ್ವ ಹಣಾಧಿಕಾರಿಗಳ ಆಣತಿಯಂತೆ ಕುಡಿಯುವ ನೀರಿನ ಯೋಜನೆಗೆ ಯಾವದೇ ಹರಾಜು ಪ್ರಕ್ರಿಯೆ ನಡೆಸದೆ ಬೇಕಾಬಿಟ್ಟಿ ಮಂಜೂರು ಮಾಡಲಾಗಿದೆ. ಈವರೆಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿದಿಲ್ಲ. ಗ್ರಾಮಗಳ ಅನೇಕ ಸಮಸ್ಯೆಗಳು ಹಾಗೇ ಉಳಿದಿದೆ. ಪ್ರತಿನಿಧಿಗಳೆನಿಸಿಕೊಂಡ ನಮಗೆ ಮತದಾರರು ಹಿಡೀ ಶಾಪ ಹಾಕುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗ್ರಾ.ಪಂನ ಅಭಿವೃದ್ಧಿಗೆ ಶ್ರಮಿಸಬೇಕಾದ ಅಧಿಕಾರಿ ಸರ್ವಾಧಿಕಾರಿಯಾಗಿ ಆಡಳಿತ ಮಂಡಳಿಯನ್ನು ಧಿಕ್ಕರಿಸಿ ಅಧ್ಯಕ್ಷರನ್ನು ಯಾಮಾರಿಸಿ ಹಣವನ್ನು ಏಪ್ರಿಲ್ ತಿಂಗಳಲ್ಲೇ ಮಂಜೂರು ಮಾಡಿದ್ದಾರೆ. ಆದರೆ ಈವರೆಗೆ ಕುಡಿಯುವ ನೀರಿನ ಬವಣೆ ತೀರಿಲ್ಲ ಎಂದು ಧರಣಿ ನಿರತ ಸದಸ್ಯರುಗಳು ಆರೋಪಿಸಿದ್ದಾರೆ.

ಸೋಮವಾರದಿಂದ ಗ್ರಾ.ಪಂ ಅಭಿವೃದ್ಧಿ ಅಧಿಕಾರಿ ಮತ್ತು ಅಧ್ಯಕ್ಷರ ವಿರುದ್ಧ ಪ್ರತಿಭಟಿಸುವ ಉದ್ದೇಶದಿಂದ ಅನಿರ್ಧಿಷ್ಟ ಚಳವಳಿ ನಡೆಸಲಾಗುವದು, ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಸೂಕ್ತ ಕ್ರಮ ಜರುಗಿಸಬೇಕು. ಅಲ್ಲಿಯವರೆಗೆ ಸಭಾಂಗಣದಲ್ಲಿ ನಿರಂತರ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಸದಸ್ಯರುಗಳಾದ ದಿನೇಶ್.ಹೆಚ್.ಟಿ, ಮಧುಸೂದನ್, ಶಿವನಂಜಪ್ಪ, ವೆಂಕಟೇಶ್, ದೇವಮ್ಮ, ಚೇತನ್, ಅಶೋಕ್, ವಿಜಯ್ ಕುಮಾರ್, ಪ್ರಮೀಳಾ, ಮಂಜುಳಾ, ಪದ್ಮಾ, ಪ್ರೇಮಾ ಹೇಳಿದರು. ಅಧ್ಯಕ್ಷೆ ಹಾಗು ಉಪಾಧ್ಯಕ್ಷೆ ಹೊರತು ಪಡಿಸಿ ಉಳಿದ ಸದಸ್ಯರು ಧರಣಿ ಸತ್ಯಾಗ್ರಹದಲ್ಲಿ ತೊಡಗಿದ್ದಾರೆ.