ಸೋಮವಾರಪೇಟೆ, ಜೂ. 21: ಕೊಡಗಿನ ಪರಿಸರ ರಕ್ಷಣೆಯಲ್ಲಿ ಸ್ಥಳೀಯ ಕೃಷಿಕರ ಪಾತ್ರ ಅನನ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿ ಸದಸ್ಯ ಎಸ್.ಎಂ. ಡಿಸಿಲ್ವಾ ಅಭಿಪ್ರಾಯಿಸಿದರು. ನೇರುಗಳಲೆ ಗ್ರಾಮದ ಕನ್ನಂಬಾಡಿ ಅಮ್ಮ ಹಾಗೂ ಶಾಂತಲಿಂಗೇಶ್ವರ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ತಾಲೂಕು ಪತ್ರಕರ್ತರ ಸಂಘ, ಸೋಮವಾರಪೇಟೆ ರೋಟರಿ ಸಂಸ್ಥೆ ಮತ್ತು ಅರಣ್ಯ ಇಲಾಖೆ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ವರ್ಷಗಳಲ್ಲಿ ಪರಿಸರದ ಮೇಲೆ ನಡೆಯುತ್ತಿರುವ ದೌರ್ಜನ್ಯ ಹಾಗೂ ಬದಲಾದ ಕೃಷಿ ಪದ್ಧತಿಯಿಂದಾಗಿ ಕೊಡಗಿನ ಹವಾಮಾನದಲ್ಲಿ ಕೂಡ ಭಾರೀ ಬದಲಾವಣೆಯುಂಟಾಗಿದೆ. ಇದು ಹೀಗೆಯೇ ಮುಂದುವರೆದಲ್ಲಿ ಭವಿಷ್ಯಕ್ಕೆ ಕಂಟಕ ಬಂದೊದಗಲಿದೆ ಎಂದು ಎಚ್ಚರಿಸಿದರು.

ರೋಟರಿ ಸಂಸ್ಥೆ ಅಧ್ಯಕ್ಷ ಡಾ. ರಾಕೇಶ್ ಪಟೇಲ್ ಮಾತನಾಡಿ, ಪರಿಸರ ಹಾಗೂ ಜೀವಿಗಳಿಗೆ ಅನ್ಯೋನ್ಯವಾದ ಸಂಬಂಧವಿದ್ದು, ಅದನ್ನು ಈ ಹಿಂದಿನಂತೆಯೇ ಮುಂದುವರೆಸುವ ಪ್ರಯತ್ನ ನಮ್ಮಿಂದ ಆಗಬೇಕಾಗಿದೆ ಎಂದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಕೊಡಗು, ಚಿಕ್ಕ ಮಗಳೂರು, ಹಾಸನದ ಮಲೆನಾಡು ಪ್ರದೇಶಗಳಲ್ಲಿ ಉತ್ತಮ ಪರಿಸರವನ್ನು ಕಾಣಬಹುದಾದರೂ ಉಳಿದಂತೆ ಇರುವ ಜಿಲ್ಲೆಗಳಲ್ಲಿ ಪರಿಸರದ ಸ್ಥಿತಿ ಕ್ಷೀಣಿಸುತ್ತಿದೆ. ಮರ-ಗಿಡಗಳನ್ನು ಬೆಳೆಸುವ ಪ್ರಯತ್ನಕ್ಕೆ ಮೊದಲ ಆದ್ಯತೆ ನೀಡಬೇಕಾಗಿದೆ. ಆ ನಿಟ್ಟಿನಲ್ಲಿ ಇಂತಹ ಹೆಚ್ಚು ಹೆಚ್ಚು ಕಾರ್ಯಕ್ರಮಗಳು ನಡೆಯಬೇಕಾಗಿದೆ ಎಂದರು.

ತಾಲೂಕು ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎ. ಭಾಸ್ಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಧ್ಯಕ್ಷತೆಯನ್ನು ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ ವಹಿಸಿದ್ದರು.

ವೇದಿಕೆಯಲ್ಲಿ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ಪಿ.ಡಿ. ಪ್ರಕಾಶ್, ರೋಟರಿ ಸಂಸ್ಥೆ ಕಾರ್ಯದರ್ಶಿ ಪ್ರಕಾಶ್, ಪದಾಧಿಕಾರಿ ನಂದಿನಿ ಗೋಪಾಲ್, ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಂ. ಪ್ರಭಾಕರ್, ಕಾರ್ಯದರ್ಶಿ ಪ್ರವೀಣ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ವೈ. ಪ್ರಕಾಶ್, ಮೇಲ್ವಿಚಾರಕ ರಮೇಶ್, ಒಕ್ಕೂಟದ ಅಧ್ಯಕ್ಷ ಶಶಿಕುಮಾರ್, ಸೇವಾ ಪ್ರತಿನಿಧಿ ಶೈಲಾ ಇದ್ದರು. ನಂತರ ದೇವಾಲಯಕ್ಕೆ ಸೇರಿದ ಜಮೀನಿನಲ್ಲಿ ಗಿಡಗಳನ್ನು ನೆಡಲಾಯಿತು.