ಶನಿವಾರಸಂತೆ, ಜೂ. 21: ಪರಿಸರ ಸಂರಕ್ಷಣೆ ಮೂಲಕ ಜೀವನದಲ್ಲಿ ಸಾರ್ಥಕತೆ ಕಾಣಬಹುದು ಎಂದು ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.

ಗೋಪಾಲಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಅರಣ್ಯ ಇಲಾಖೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶರಣ ಸಾಹಿತ್ಯ ಪರಿಷತ್, ರೋಟರಿ ಸಂಸ್ಥೆ, ಪತ್ರಕರ್ತರ ಸಂಘ ಸಹಭಾಗಿತ್ವದಲ್ಲಿ ನಡೆದ ಪರಿಸರ ಜಾಗೃತಿ ಹಾಗೂ ಸಸಿ ನಾಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್. ಎಸ್. ಮಹೇಶ್, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವಲಯ ಮೇಲ್ವಿಚಾರಕ ಮಹೇಶ್, ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಡಿ.ಬಿ. ಧರ್ಮಪ್ಪ ಹಾಗೂ ಮುಖ್ಯ ಶಿಕ್ಷಕ ಅಪ್ಪಸ್ವಾಮಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹೇಶ್ ಮಾತನಾಡಿ, ಜನಸಂಖ್ಯೆ ಏರಿಕೆಗೂ ಪರಿಸರ ನಾಶವೇ ಕಾರಣ ಎಂದು ಅಭಿಪ್ರಾಯಪಟ್ಟರು.

ಶರತ್ ಶೇಖರ್, ಜಿ.ಎಂ. ಕಾಂತರಾಜ್, ಶಿವಣ್ಣ, ಸೋಮಪ್ಪ, ತಾರಾಮಣಿ, ಯೋಜನೆಯ ಸೇವಾ ಪ್ರತಿನಿಧಿಗಳಾದ ಮಹೇಶ್, ಮಾಲತಿ, ಪವಿತ್ರಾ, ಪ್ರಮೀಳಾ ಇದ್ದರು. ಬಳಿಕ ಶಾಲಾ ಆವರಣದಲ್ಲಿ 50ಕ್ಕೂ ಅಧಿಕ ವಿವಿಧ ಪ್ರಭೇದದ ಸಸಿಗಳನ್ನು ನಡೆಸಲಾಯಿತು.