ರಾಜೀನಾಮೆಗೆ ಆಗ್ರಹ

ಸುಂಟಿಕೊಪ್ಪ, ಜೂ. 23: ಸುಂಟಿಕೊಪ್ಪ ಆಟೋ ರಿಕ್ಷಾ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಮುಸ್ತಫಾ ಕಳೆದ ಸಾಲಿನಲ್ಲಿ ಸಂಘದಿಂದ ನಡೆಸಲಾದ ಡ್ಯಾನ್ಸ್ ಮೇಳ ಕಾರ್ಯಕ್ರಮದಲ್ಲಿ ಲಾಟರಿ ಹಣವನ್ನು ದುರುಪಯೋಗಪಡಿಸಿದ್ದು, ಇವರು ರಾಜೀನಾಮೆ ನೀಡಬೇಕೆಂದು ಸ್ಥಾಪಕ ಅಧ್ಯಕ್ಷ ಗ್ಯಾಬ್ರಿಯಲ್ ಡಿಸೋಜ ಆಗ್ರಹಿಸಿದ್ದಾರೆ.

ನ್ಯೂಸ್‍ಗ್ಯಾಲರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜನವರಿ 26 ರಂದು ಸಂಘದ ವತಿಯಿಂದ ಡ್ಯಾನ್ಸ್ ಮೇಳ ಏರ್ಪಡಿಸಲಾಗಿದ್ದು, ಇದರ ಅಂಗವಾಗಿ ಲಾಟರಿ ಡ್ರಾ ಹಣ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಲಾದ ರೂ. 5 ಲಕ್ಷಗಳನ್ನು ದುರುಪಯೋಗಪಡಿಸಲಾಗಿದೆ. ಅಲ್ಲದೆ ಲಾಟರಿ ಟಿಕೆಟ್ ಕಾರ್ರ್ಯಕಾರಿ ಸಮಿತಿಗೆ ತಿಳಿಸದೆ ಹೆಚ್ಚಿಗೆ ಮುದ್ರಿಸಿದ್ದು ಇದರಿಂದ ಪ್ರಥಮ ಬಹುಮಾನ ಒಂದೇ ನಂಬರಿನ ಇಬ್ಬರಿಗೆ ಬಂದಿದ್ದರಿಂದ ಸಂಘಕ್ಕೆ ಕೆಟ್ಟ ಹೆಸರನ್ನು ತಂದಿದ್ದಾರೆ. ಆಟೋ ಸಂಘದ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನು ಸ್ವಂತಕ್ಕೆ ಬಳಸಿದ್ದಾರೆ.

2016-17 ನೇ ಸಾಲಿನಲ್ಲಿ ವಾರದ ಶುಲ್ಕ, ಹೊಸ ಸದಸ್ಯರುಗಳ ಶುಲ್ಕ, ಚಾಲಕರ ಮರು ನೋಂದಣಿ ಶುಲ್ಕವೂ ಸೇರಿ ರೂ. 60,000 ಗಳ ಲೆಕ್ಕಪತ್ರ ಸಲ್ಲಿಸದೆ ವಂಚಿಸಿದ್ದಾರೆ.

ಮಾಜಿ ಅಧ್ಯಕ್ಷರುಗಳು ಸಂಘವನ್ನು ಮುನ್ನಡೆಸುವ ಸಂದರ್ಭ ಉಳಿತಾಯ ಖಾತೆಯಲ್ಲಿದ್ದ ರೂ. 2,44,000 ಹಾಗೂ 94,000 ಗಳನ್ನು ಆಡಳಿತ ಮಂಡಳಿ ಹಾಗೂ ಮಾಜಿ ಅಧ್ಯಕ್ಷರುಗಳ ಗಮನಕ್ಕೆ ತರದೆ ಬ್ಯಾಂಕ್ ಖಾತೆಯಿಂದ ತೆಗೆದುಕೊಂಡಿದ್ದಾರೆ. ಒಟ್ಟು 9 ಲಕ್ಷ ರೂಗಳ ದುರುಪಯೋಗಪಡಿಸಿದ ಅಧ್ಯಕ್ಷ ಮುಸ್ತಫಾ ಲೆಕ್ಕಪತ್ರ ದಾಖಲೆಗಳನ್ನು ನೀಡಿ ರಾಜೀನಾಮೆ ಸಲ್ಲಿಸಬೇಕು ಎಂದು ಮಾಜಿ ಅಧ್ಯಕ್ಷರುಗಳು ಒಟ್ಟಾಗಿ ಆಗ್ರಹಿಸಿದ್ದಾರೆ. ಆಟೋ ರಿಕ್ಷಾದ ಚಾಲಕ ಸಂಘದ ಕಚೇರಿಗೂ ಬಾರದೆ ಆಟೋ ಚಾಲನೆಯನ್ನು ಮಾಡದೆ ದೂರವಾಣಿ ಕರೆಗೂ ಸಿಗದೆ ತಲೆಮರೆಸಿಕೊಂಡಿರುವ ಮುಸ್ತಫಾ ಅವರ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ಗೋಷ್ಠಿಯಲ್ಲಿ ಆಟೋ ರಿಕ್ಷಾ ಮಾಲೀಕ ಮತ್ತು ಚಾಲಕರ ಸಂಘದ ಮಾಜಿ ಅಧ್ಯಕ್ಷರುಗಳಾದ ರವೀಂದ್ರ, ಸೋಮಯ್ಯ, ಮೋಹನ್ (ರಜನಿ), ಸಂತೋಷ್ (ದಿನು), ಹಾಲಿ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಟೋನಿ, ಮಾಜಿ ಕಾರ್ಯದರ್ಶಿ ಜಯಚಂದ್ರ ಹಾಗೂ ಪದಾಧಿಕಾರಿಗಳು ಹಾಜರಿದ್ದರು.