ಸುಂಟಿಕೊಪ್ಪ, ಜೂ. 23: ಇಲ್ಲಿನ ಮಧುರಮ್ಮ ಬಡಾವಣೆ ನಿವಾಸಿ ಬಡಗಿ ಕೆಲಸ ಮಾಡಿಕೊಂಡು ಜೀವಿಸುತ್ತಿದ್ದ ಟಿ. ರಾಜ (37) ಕಾಣೆಯಾಗಿ 1 ವಾರವಾದರೂ ಈತ ಎಲ್ಲಿದ್ದಾನೊ ಎಂಬ ಕೊರಗಿನಲ್ಲಿ ಪತ್ನಿ, ಮಕ್ಕಳು, ಕುಟುಂಬ ಸಮೂಹ ದಿನದೂಡುತ್ತಿದೆ.

ತಾ. 13 ರಂದು ಬಡಗಿ ಕೆಲಸ ಮುಗಿಸಿಕೊಂಡು ಬಂದ ರಾಜ ತನ್ನ ಮೋಟಾರ್ ಬೈಕ್ (ಕೆಎ12-8061) ನಲ್ಲಿ ಮನೆಗೆ ಬೇಕಾದ ನಿತ್ಯೋಪಯೋಗಿ ವಸ್ತುಗಳು, ಹಸಿಮೀನನ್ನು ಸುಂಟಿಕೊಪ್ಪದಿಂದ ಖರೀದಿಸಿ ಬೈಕ್‍ನಲ್ಲಿ ಇರಿಸಿದ್ದಾನೆ ಅನಂತರ ಮಡಿಕೇರಿ ರಸ್ತೆಯಲ್ಲಿರುವ ಬಾರ್‍ಗೆ ಮದ್ಯಸೇವಿಸಲು ತೆರಳಿದ್ದಾನೆ. ಗಂಡ ಮನೆಗೆ ಬಾರದಿದ್ದಾಗ ಆತನ ಪತ್ನಿ ಮಣಿ ರಾತ್ರಿ 8 ಗಂಟೆಗೆ ರಾಜನ ಮೊಬೈಲ್‍ಗೆ ಕರೆ ಮಾಡಿ ಬೇಗ ಮನೆಗೆ ಬರುವಂತೆ ಕೋರಿಕೊಂಡಿದ್ದಾಳೆ. ಅನಂತರ ರಾಜನ ಮೊಬೈಲ್ ಸಂಪರ್ಕಕ್ಕೆ ಸಿಗಲಿಲ್ಲ ಎಂದು ಮಣಿ ಕಣ್ಣೀರಿಡುತ್ತಾ ತಿಳಿಸಿದರು.

ಬಾರ್‍ನಲ್ಲಿ ಮಾರಾಮಾರಿ: ತಾ. 13 ರಂದು ರಾತ್ರಿ 9.30 ಗಂಟೆಗೆ ಬಾರ್ ಬಳಿ ರಾಜ ಹಾಗೂ ಆತನ ಮಿತ್ರ ಕುಮಾರನ ನಡುವೆ ಕ್ಷುಲ್ಲಕ ವಿಷಯಕ್ಕಾಗಿ ನೂಕಾಟ ತಳ್ಳಾಟ ನಡೆದಿದ್ದು ಪರಸ್ಪರ ಇವರಿಬ್ಬರು ಹೊಡೆದಾಡುವಾಗ ಮಧುರಮ್ಮ ಬಡಾವಣೆ ನಿವಾಸಿ ಶಿವ ಜಗಳವನ್ನು ಬಿಡಿಸಿದ್ದಾನೆ ಎನ್ನಲಾಗಿದೆ. ಆನಂತರ ಮತ್ತೆ ಬಾರ್‍ಗೆ ತೆರಳಿ ರಾಜ ಮದ್ಯ ಸೇವಿಸಿದ್ದು, ನೀಲಿ ಶರ್ಟು ಹಾಕಿಕೊಂಡ ವ್ಯಕ್ತಿಯೋರ್ವನು ರಾಜನನ್ನು ಕರೆದುಕೊಂಡು ಹೋದರೆಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. ಆದರೆ ಆ ನೀಲಿ ಶರ್ಟಿನ ವ್ಯಕ್ತಿ ಯಾರೆಂದು ಪತ್ತೆಯಾಗಿಲ್ಲ. ಕಾಣೆಯಾದ ರಾಜನ ಸಂಬಂಧಿಕರಾದ ತಮಿಳುನಾಡಿನ ಕಾಂಚಿಪುರ ವೇಲೂರು ಈ ಕಡೆಗಳಲ್ಲಿ ವಿಚಾರಿಸಿದರೂ ರಾಜ ಅಲ್ಲಿಗೆ ಬಂದಿಲ್ಲ ಎಂದು ಮಾಹಿತಿ ಸಿಕ್ಕಿದೆ.

ಕುಮಾರ ಹಾಗೂ ಶಿವ ಈ ಘಟನೆ ನಡೆದ ನಂತರ ಊರು ಬಿಟ್ಟಿದ್ದರೂ ಮಧ್ಯವರ್ತಿಯೊಬ್ಬರ ಮೂಲಕ ಈ ಇಬ್ಬರನ್ನು ಪೊಲೀಸ್ ಠಾಣೆಗೆ ಬರಮಾಡಿಕೊಂಡು ವಿಚಾರಿಸಿದರೂ ಆ ದಿನ ಕ್ಷುಲ್ಲಕ ವಿಷಯಕ್ಕಾಗಿ ಜಗಳವಾಗಿದ್ದು ನಿಜ ಆದರೆ ಆನಂತರ ರಾಜ ಎಲ್ಲಿಗೆ ಹೋದ ಎಂಬ ಬಗ್ಗೆ ನಮಗೆ ಮಾಹಿತಿ ಇಲ್ಲ ಎಂದು ಪೊಲೀಸರಿಗೆ ಶಿವ ಹಾಗೂ ಕುಮಾರ ಹೇಳಿಕೆ ನೀಡಿದ್ದಾರೆ.

ಪೊಲೀಸರು ನಾಪತ್ತೆಯಾದ ವ್ಯಕ್ತಿಯ ಪತ್ತೆಗೆ ಅವರದೆ ರೀತಿಯಲ್ಲಿ ತನಿಖೆ ನಡೆಸಿ ಕೆಲವರನ್ನು ವಿಚಾರಣೆ ಮಾಡುತ್ತಿದ್ದಾರೆ. ಆದರೆ ಕೆಲವರು ನನ್ನ ಮನೆಗೆ ಬಂದು ನೀನೇ ಪೊಲೀಸರಿಗೆ ನನ್ನ ಹೆಸರು ಹೇಳುತ್ತಿದ್ದೀಯಾ ಎಂದು ಜಗಳವಾಡುತ್ತಿದ್ದು, ನನಗೆ ತೀವ್ರ ಆಘಾತವುಂಟು ಮಾಡಿದೆ ಎಂದು ರಾಜನ ಪತ್ನಿ ಹೇಳಿದರು.

ಬಡಗಿ ಕೆಲಸ ನಿರ್ವಹಿಸುತ್ತಿರುವ ರಾಜನು ನಾಪತ್ತೆಯಾಗಿ ಹಲವು ದಿನಗಳು ಸಂದಿದ್ದರೂ ಆತನ ಬಗ್ಗೆ ಯಾವದೇ ರೀತಿಯ ಸುಳಿವು ಪತ್ತೆಯಾಗಿಲ್ಲ. ಪೊಲೀಸರು ತನಿಖಾ ಕಾರ್ಯವನ್ನು ಚುರುಕುಗೊಳಿಸುವಂತೆ ಮಧುರಮ್ಮ ಬಡಾವಣೆಯ ಟಿಂಬರ್ ವ್ಯಾಪಾರಿ ಪ್ರಸಾದ್ ಕುಟ್ಟಪ್ಪ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.