ಕೂಡಿಗೆ, ಜೂ. 23: ಕಾಫಿ ಮತ್ತು ಕಾಳುಮೆಣಸು ಖರೀದಿಸಿ ಹಣ ನೀಡುವದಾಗಿ ಹೇಳಿ ಕಾಫಿ ಹೊಟ್ಟಿನ ಚೀಲ ಇಟ್ಟು ಕಾಳುಮೆಣಸನ್ನು ಲಪಟಾಯಿಸಿ, ವ್ಯಕ್ತಿಯೋರ್ವರನ್ನು ಯಾಮಾರಿಸಿ ಪಂಗನಾಮ ಹಾಕಿದ ಘಟನೆ ಕೂಡಿಗೆಯಲ್ಲಿ ನಡೆದಿದೆ. ಕೂಡಿಗೆ ಗ್ರಾಮದ ಚೆನ್ನಪ್ಪ ಮೋಸ ಹೋದ ವ್ಯಕ್ತಿ. ತಮ್ಮ ತೋಟಗಳಲ್ಲಿ ಕಾಳುಮೆಣಸನ್ನು ಬೆಳೆದು, ಮನೆಯ ಉಪಯೋಗಕ್ಕೆ ಇಟ್ಟುಕೊಂಡು, ಇನ್ನುಳಿದ ಕಾಳುಮೆಣಸನ್ನು ಮಾರಾಟ ಮಾಡುವ ಉದ್ದೇಶದಿಂದ ಚೆನ್ನಪ್ಪ ಕಾಳುಮೆಣಸನ್ನು ತಮ್ಮ ಮನೆಯ ಮುಂಭಾಗದಲ್ಲಿ ಒಣಗಿಸಲು ಹಾಕಿದ್ದರು.

ಮೋಟಾರ್ ಬೈಕ್‍ನಲ್ಲಿ ಹಳ್ಳಿಗಳಿಗೆ ಪಾತ್ರೆ ಮತ್ತು ಪ್ಲಾಸ್ಟಿಕ್ ವಸ್ತುಗಳನ್ನು ಮಾರಾಟ ಮಾಡುವ ರೀತಿಯಲ್ಲಿ ಬೈಕ್‍ಗೆ ಮಗುವಿನ ತೊಟ್ಟಿಲನ್ನು ಕಟ್ಟಿಕೊಂಡು ಅದರೊಳಗೆ ಅರ್ಧ ಮೂಟಿಯಷ್ಟು ಕಾಫಿ ಹೊಟ್ಟು ಇಟ್ಟುಕೊಂಡು ಬಂದ ಆ ವ್ಯಕ್ತಿ ಒಣಗಲು ಹಾಕಿದ್ದ ಕಾಳುಮೆಣಸನ್ನು ಕಂಡು ಮನೆಯ ಹತ್ತಿರ ತೆರಳಿ ಕಾಫಿ ಮತ್ತು ಕಾಳುಮೆಣಸು ಖರೀದಿಸುತ್ತೇನೆಂದು ಹೇಳಿ

5 ಕೆ.ಜಿ. ಕಾಳುಮೆಣಸು ತೂಕ ಮಾಡಿದ ನಂತರ ಕಾಳುಮೆಣಸು ತೆಗೆದುಕೊಂಡಿದ್ದಾನೆ. ಹಣ ನೀಡುವದಾಗಿ ನಾಟಕವಾಡಿ, ಕಾಳುಮೆಣಸು ಮತ್ತು ಕಾಫಿಯನ್ನು ತೆಗೆದುಕೊಂಡು ಹೋಗಲು ಆಟೋ ತರುವದಾಗಿ ಹೇಳಿದ್ದಾರೆ. ಆತನ ಬಳಿ ಇದ್ದ ಕಾಫಿ ಹೊಟ್ಟಿನ ಚೀಲದಲ್ಲಿ ಕಾಫಿ ಬೀಜ ಇದೆ ಎಂದು ಹೇಳಿ ಚೀಲ ಇಲ್ಲೇ ಇರಲಿ ಎಂದು ಹಣ ಕೊಡದೆ ಕಾಳುಮೆಣಸನ್ನು ಲಪಟಾಯಿಸಿ ಪರಾರಿಯಾಗಿದ್ದಾನೆ.

ಕಾಫಿ ಬೀಜ ತೆಗೆದುಕೊಂಡು ಹೋಗಲು ಬಂದಾಗ ಹಣ ನೀಡುತ್ತೇನೆಂದು ಹೇಳಿ ಹೋದ ಆ ವ್ಯಕ್ತಿಯ ಮಾತನ್ನು ನಂಬಿ ಕಾಫಿ ಚೀಲವನ್ನು ಇಲ್ಲಿ ಇರಿಸಿಕೊಂಡಿದ್ದೆ. ಸ್ಪಲ್ಪ ಸಮಯದ ನಂತರ ಆ ವ್ಯಕ್ತಿಗಾಗಿ ಕಾದು ಚೀಲ ಬಿಚ್ಚಿ ನೋಡಿದಾಗ ಕಾಫಿ ಹೊಟ್ಟು ಇರುವದನ್ನು ನೋಡಿ ದಂಗಾದೆ ಎಂದು ಚೆನ್ನಪ್ಪ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಹಣ ಕೊಡದೆ ಕಾಳುಮೆಣಸು ಲಪಟಾಯಿಸಿರುವ ಇಂತಹ ಭೂಪರು ನಿಮ್ಮೂರಿಗೆ ಬರಬಹುದು ಎಚ್ಚರದಿಂದ ಇರಿ...!

-ಕೆ. ಕೆ. ನಾಗರಾಜಶೆಟ್ಟಿ