ಕಾಮಗಾರಿ ಸ್ಥಗಿತ

ಕೂಡಿಗೆ, ಜೂ. 23: ಕರ್ನಾಟಕ ರಾಜ್ಯದಲ್ಲೇ ಪ್ರಥಮವಾಗಿ ಪ್ರಾರಂಭಗೊಂಡ, ಕೂಡಿಗೆಯ ಕೃಷಿ ಕ್ಷೇತ್ರದ ಆವರಣದಲ್ಲಿರುವ ಸರಕಾರಿ ಕ್ರೀಡಾ ಪ್ರೌಢಶಾಲೆಯ ಹಾಕಿ ಪಟುಗಳಿಗೆ ಅನುಕೂಲವಾಗುವಂತೆ ಬಹುದಿನಗಳ ಬೇಡಿಕೆಯಾಗಿದ್ದ ಹಾಕಿ ಟರ್ಫ್ ಮೈದಾನದ ಕಾಮಗಾರಿಯು ಪ್ರಾರಂಭಗೊಂಡು ಎರಡುವರೆ ವರ್ಷ ಕಳೆದು, ಶೇ.30 ರಷ್ಟು ಕಾಮಗಾರಿ ನಡೆದು ಇದೀಗ ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ನೆಪದಲ್ಲಿ ಕಾಮಗಾರಿ ಸ್ಥಗಿತಗೊಂಡಿದ್ದು, ಮೈದಾನದಲ್ಲಿ ಗಿಡಗಂಟಿಗಳು ಬೆಳೆದು ನಿಂತಿದೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ರಾಜ್ಯ ಮಟ್ಟದಲ್ಲಿ ಟೆಂಡರ್ ಕರೆದು ದೆಹಲಿಯ ಸಿನ್ಹೋ ಕೋಡ್ ಕಂಪೆನಿಗೆ ಟೆಂಡರ್ ನೀಡಿದ್ದು, ಟೆಂಡರ್ ಪಡೆದ ಸಂದರ್ಭ ಅಂದಾಜು ರೂ. 4.5 ಕೋಟಿ ಮಂಜೂರಾಗಿದ್ದು, ಇದೀಗ ಅರ್ಧ ಕಾಮಗಾರಿ ನಡೆದರೂ, ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಎಂಬ ನೆಪದಿಂದ ಕಾಮಗಾರಿ ಅರ್ಧದಲ್ಲೇ ನಿಂತಿದೆ.

ಇದೀಗ ಟರ್ಫ್ ಆವರಣದಲ್ಲಿ ಅಳವಡಿಸಿದ ಕಬ್ಬಿಣದ ಸಲಾಕೆಗಳು ಸಹ ತುಕ್ಕು ಹಿಡಿದಿವೆ. ಹಾಕಿ ಟರ್ಫ್‍ಗೆ ಅಳವಡಿಸಲು ತಂದಿರುವ ಕೃತಕ ಹುಲ್ಲಿನ ದೊಡ್ಡ ಮಟ್ಟದ ಟರ್ಫ್ ಸೀಟುಗಳು ಬಿಸಿಲಿನಲ್ಲಿ ಒಣಗಿ ಹಾಳಾಗುವಂತಹ ಪರಿಸ್ಥಿತಿ ಕಂಡು ಬರುತ್ತಿದೆ. ಈ ಸೀಟುಗಳನ್ನು ಮೈದಾನದ ಅಡಿಮಟ್ಟದ ಕಾಮಗಾರಿ ನಡೆಯುವ ಮೊದಲೇ ತರಿಸಿರುವದರಿಂದ ಇವು ಬಿಸಿಲಿನಲ್ಲಿ ಒಣಗಿ ಅದರ ಗುಣಮಟ್ಟವನ್ನು ಕಳೆದುಕೊಳ್ಳುವದರಲ್ಲದೆ ಸೀಟಿನ ಉದುರುವಿಕೆ ಕಂಡು ಬರುತ್ತಿದೆ.

ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವ ಈ ಶಾಲಾ ಆವರಣಕ್ಕೆ ಇದೀಗ ಹಾಕಿ ಟರ್ಫ್ (ಕೃತಕ ಹುಲ್ಲಿನ ಮೈದಾನ) ದೊರೆತಿದ್ದು, ಇಲ್ಲಿ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಮೇಲ್ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸುವ ಸಂದರ್ಭ ಹಾಕಿ ಟರ್ಫ್‍ನ ಅವಶ್ಯಕತೆ ಬಹು ಮುಖ್ಯವಾಗಿತ್ತು. ಈ ಮೈದಾನ ನಿರ್ಮಾಣಕ್ಕೆ ಇಲಾಖೆಯ ವತಿಯಿಂದ ಸ್ಥಳ ಹಾಗೂ ವ್ಯವಸ್ಥಿತ ಕಾಮಗಾರಿಯು ನಡೆಯಲು ಅನುಕೂಲ ಮಾಡಿಕೊಡ ಲಾಗಿದ್ದರೂ ಸಹ ಸಂಬಂಧಪಟ್ಟ ಇಲಾಖೆಯ ವತಿಯಿಂದ ಹಣ ಬಿಡುಗಡೆಯಾಗದೆ ಟೆಂಡರ್‍ದಾರರಿಗೆ ಹಣ ಬಾರದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಂಡಿರುವದು ಕಂಡು ಬರುತ್ತಿದೆ.

ಸಂಬಂಧಪಟ್ಟವರು ತುರ್ತಾಗಿ ಸ್ಪಂದಿಸಿ ಕಾಮಗಾರಿಯನ್ನು ಪೂರ್ಣಗೊಳಿಸಿ ವಿದ್ಯಾರ್ಥಿಗಳ ಉಪಯೋಗಕ್ಕೆ ಅನುವು ಮಾಡಿಕೊಡಬೇಕೆಂದು ವಿದ್ಯಾರ್ಥಿಗಳ ಪೋಷಕರು ಮತ್ತು ಸಾರ್ವಜನಿಕರು ಆಗ್ರಹಿಸಿದ್ದಾರೆ.