ಮಡಿಕೇರಿ, ಜೂ. 24: ವ್ಯಕ್ತಿಯೋರ್ವರನ್ನು ದುಷ್ಕರ್ಮಿಗಳು ಹತ್ಯೆಗೈದು ಮೃತದೇಹಕ್ಕೆ ಕಲ್ಲುಕಟ್ಟಿ ಕೃಷಿ ಹೊಂಡಕ್ಕೆ ಹಾಕಿದ್ದ ಪ್ರಕರಣ ಇಂದು ಪತ್ತೆಯಾಗಿದ್ದು, ಮೃತ ವ್ಯಕ್ತಿ ಯಾರೆಂಬದು ತಿಳಿದುಬಂದಿಲ್ಲ. ಮಕ್ಕಂದೂರು- ಸಿಂಕೋನ ರಸ್ತೆ ನಡುವೆ ಇರುವ ಕೆ. ಮಂದಣ್ಣ ಎಂಬವರಿಗೆ ಸೇರಿದ ತೋಟದ ಕೃಷಿ ಹೊಂಡದಲ್ಲಿ ಶವ ಪತ್ತೆಯಾಗಿದ್ದು, ತಲೆ ಹಾಗೂ ಕೈಯನ್ನು ಕತ್ತರಿಸಲಾಗಿದೆ. ಮೃತದೇಹವನ್ನು ಸ್ಥಳೀಯರ ಸಹಕಾರದೊಂದಿಗೆ ಪೊಲೀಸರು ಮೇಲೆತ್ತಿದ್ದಾರೆ. ತೋಟದ ಕೆಲಸದಾತ ಹೊಂಡದ ಬಳಿ ತೆರಳಿದ್ದಾಗ ಹೊಂಡದ ಬದಿ ವ್ಯಕ್ತಿಯ ಕಾಲು ಪತ್ತೆಯಾಗಿದ್ದು, ಆತ ತೋಟದ ವ್ಯವಸ್ಥಾಪಕರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಹೊಂಡದ ಬಳಿ ತೆರಳಿ ನೋಡಿದಾಗ, ದೇಹ ಪತ್ತೆಯಾಗಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ಪ್ರಸಾದ್, ವೃತ್ತ ನಿರೀಕ್ಷಕ ಪ್ರದೀಪ್, ಎ.ಎಸ್.ಐ. ಸೋಮಯ್ಯ ಭೇಟಿ ನೀಡಿ ಪರಿಶೀಲನೆ ನಡೆಸಿದರು.