ಗುಡ್ಡೆಹೊಸೂರು: ಬೊಳ್ಳುರು ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಮುಂಜಾನೆ 5 ಗಂಟೆಯಿಂದ 6ಗಂಟೆಯ ತನಕ ಈ ಕಾರ್ಯಕ್ರಮ ನಡೆಯಿತು. ಗ್ರಾಮದ ಅಧಿಕ ಮಂದಿ ಮಹಿಳೆಯರು ಮತ್ತು ಶಾಲಾ ಮಕ್ಕಳು ಭಾಗವಹಿಸಿದ್ದರು. ಯೋಗ ತರಬೇತಿಯನ್ನು ಗ್ರಾಮದ ನಿವಾಸಿ ಎ.ಎ. ಪಾರ್ವತಿ ನಡೆಸಿಕೊಟ್ಟರು. ಪಾರ್ವತಿ ಮಡಿಕೇರಿಯಲ್ಲಿ ಆರೋಗ್ಯ ಇಲಾಖಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ತಮ್ಮ ಮನೆಯಲ್ಲಿ ಪ್ರತಿನಿತ್ಯ ಹಲವಾರು ಮಂದಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ.ಟಿ. ಶೆಟ್ಟಿಗೇರಿ: ಟಿ. ಶೆಟ್ಟಿಗೇರಿ ಕೊಡವ ಸಮಾಜ ಸಭಾಂಗಣದಲ್ಲಿ ಆರ್ಟ್ ಆಫ್ ಲಿವಿಂಗ್, ಆಯುಷ್ ಇಲಾಖೆ ಹಾಗೂ ಟಿ. ಶೆಟ್ಟಿಗೇರಿ ರೂಟ್ಸ್ ಆಂಗ್ಲ ಮಾಧ್ಯಮ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಕಳೆದ 20 ದಿನಗಳಿಂದ ನಡೆಯುತ್ತಿದ್ದ ಯೋಗ ಶಿಬಿರದ ಸಮಾರೋಪ ಹಾಗೂ ವಿಶ್ವ ಯೋಗ ದಿನಾಚರಣೆ ನಡೆಯಿತು.

ಅತಿಥಿಗಳಾಗಿ ಭಾಗವಹಿಸಿದ್ದ ಯೋಗ ಗುರು ಚಂಗುಲಂಡ ಸತೀಶ್, ಪತ್ರಕರ್ತ ರವಿ ಸುಬ್ಬಯ್ಯ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾವಳಗೇರಿ ಮೂಂದ್‍ನಾಡ್ ಕೊಡವ ಸಮಾಜದ ಅಧ್ಯಕ್ಷ ಕೋಟ್ರಮಾಡ ಅರುಣ್ ಅಪ್ಪಣ್ಣ, 5 ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿರುವ ಯೋಗಾಭ್ಯಾಸದಿಂದ ಮಾನಸಿಕ ಸ್ಥೈರ್ಯ ಹೆಚ್ಚುವದಲ್ಲದೇ ಪ್ರಾಮಾಣಿಕತೆ ಸತ್ಯ, ನಿಷ್ಠುರತೆ ಅಭಿವೃದ್ಧಿಯಾಗುತ್ತದೆ ಎಂದರು. ಆರ್ಟ್ ಆಫ್ ಲಿವಿಂಗ್‍ನ ಯೋಗ ಗುರು ಅಣ್ಣಳಮಾಡ ಶಾಂಭವಿ ಗಣಪತಿ, ರೂಟ್ಸ್ ವಿದ್ಯಾಸಂಸ್ಥೆಯ ಶಿಕ್ಷಕಿ ಕೇಚೆಟ್ಟಿರ ಮಮತಾ ಮಾತನಾಡಿದರು. ಈ ಸಂದರ್ಭ ರೂಟ್ಸ್ ವಿದ್ಯಾಸಂಸ್ಥೆಯ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಯೋಗ ಪ್ರದರ್ಶನ ಮಾಡಿದರು.ಚೆಟ್ಟಳ್ಳಿ: ಚೆಟ್ಟಳ್ಳಿ ಪ್ರೌಢಶಾಲೆಯಲ್ಲಿ ವಿಶ್ವ ಯೋಗ ದಿನವನ್ನು ಆಚರಿಸಲಾಯಿತು. ಪೂವಾಹ್ನ 10.45ಕ್ಕೆ ಶಾಲಾ ವಿದ್ಯಾರ್ಥಿಗಳು ವಿಶ್ವ ಯೋಗ ದಿನದ ಸಲುವಾಗಿ ಶಾಲೆಯಿಂದ ಮಂಗಳ ಸಭಾಂಗಣದವರೆಗೆ ಜಾಥಾ ತೆರಳಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಮುಳ್ಳಂಡ ರತ್ತು ಚಂಗಪ್ಪ, ಮುಖ್ಯೋಪಾಧ್ಯಾಯಿನಿ ತಿಲಕ, ನ್ಯೂಸ್ ಲಾಂಚರ್ ಪುತ್ತರಿರ ಕರುಣ್ ಕಾಳಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸಾಮೂಹಿಕವಾಗಿ ಶ್ಲೋಕವನ್ನು ಉಚ್ಚರಿಸಿದರು. ದಿನದ ವಿಶೇಷತೆಯ ಬಗ್ಗೆ ದೈಹಿಕ ಶಿಕ್ಷಕ ಪೂಳಂಡ ಎಸ್. ಮಾಚಯ್ಯ ಮಾತನಾಡಿದರು. ಸ್ಥಳೀಯ ವರದಿಗಾರ ಲೂಹಿಸ್, ಶಾಲಾ ಶಿಕ್ಷಕ ವೃಂದ, ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.ಮಾದಾಪುರ: ಇಲ್ಲಿನ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ವಿಶ್ವ ಯೋಗ ದಿನಾಚರಣೆಯನ್ನು ಆಚರಿಸಿದರು. ಸೋಮವಾರಪೇಟೆ ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ವೆಂಕಟೇಶ್, ಎಸ್.ಡಿ.ಎಂ.ಸಿ. ಅಧ್ಯಕ್ಷ ಹಸೈನಾರ್, ಕುಂಬೂರು ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರಾಜಣ್ಣ ಹಾಗೂ ಅಡುಗೆ ಸಿಬ್ಬಂದಿಗಳು ಸಾಮೂಹಿಕವಾಗಿ ಯೋಗಾಸನ ಮಾಡುವದರೊಂದಿಗೆ ಕಾರ್ಯಕ್ರಮ ನೆರವೇರಿಸಿದರು.ಸಾಯಿ ಸಂಸ್ಥೆ: ಸ್ಪೋಟ್ಸ್ ಅಥಾರಿಟಿ ಆಫ್ ಇಂಡಿಯಾ ಹಾಗೂ ವಾಂಡರರ್ಸ್ ಸ್ಪೋಟ್ರ್ಸ್ ಕ್ಲಬ್ ವತಿಯಿಂದ ಅಂತರ್‍ರಾಷ್ಟ್ರೀಯ ಯೋಗ ದಿನವನ್ನು ನಗರದಲ್ಲಿ ಆಚರಿಸಲಾಯಿತು. ಸಾಯಿ ಕೇಂದ್ರದ ಸಭಾಂಗಣದಲ್ಲಿ ಕ್ರೀಡಾ ನಿಲಯದ ವಿದ್ಯಾರ್ಥಿನಿಯರಿಗೆ ಯೋಗ ಶಿಕ್ಷಕ ಎಸ್.ಟಿ. ವೆಂಕಟೇಶ್ ಯೋಗದ ಮಹತ್ವದ ಬಗ್ಗೆ ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಯಿ ಕೇಂದ್ರದ ಸಹಾಯಕ ನಿರ್ದೇಶಕ ರವಿ, ಅಥ್ಲೆಟಿಕ್ಸ್ ತರಬೇತುದಾರ ಉಮೇಶ್, ಹಾಕಿ ತರಬೇತುದಾರ ವಿವೇಕ್ ಚತುರ್ವೇದಿ, ಸಾಹಿರಾಭಾನು, ವಾಂಡರರ್ಸ್ ಕ್ಲಬ್‍ನ ಮುಖ್ಯಸ್ಥ ಬಾಬು ಸೋಮಯ್ಯ, ಶ್ಯಾಂ ಪೂಣಚ್ಚ, ಕೋಟೇರ ಮುದ್ದಯ್ಯ, ಕಿಶನ್ ಪೂವಯ್ಯ ಹಾಗೂ ತಿಲಕ್ ಉಪಸ್ಥಿತರಿದ್ದರು.ಪೊನ್ನಂಪೇಟೆ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಪೊನ್ನಂಪೇಟೆಯ ಎ.ಪಿ.ಸಿ.ಎಂ.ಎಸ್. ಸಭಾಂಗಣದಲ್ಲಿ ಪದ್ಮಶ್ರೀ ಯೋಗ ತರಬೇತಿ ಕೇಂದ್ರದ ವತಿಯಿಂದ ಯೋಗ ದಿನಾಚರಣೆಯನ್ನು ಆಚರಿಸಲಾಯಿತು.

ರಾಮಕೃಷ್ಣ ಸೇವಾ ಆಸ್ಪತ್ರೆಯ ಪ್ರಾಕೃತಿಕ ಚಿಕಿತ್ಸಾ ವಿಭಾಗದ ವೈದ್ಯೆ ಡಾ. ಮಾನಸ ಉದ್ಘಾಟಿಸಿದರು. ಪ್ರತಿನಿತ್ಯ ಯೋಗ ಅಭ್ಯಾಸ ಮಾಡುವದರಿಂದ ರೋಗ ಮುಕ್ತ ಜೀವನ ನಡೆಸಲು ಸಾಧ್ಯ ಎಂದರು.

ಮುಖ್ಯ ಅತಿಥಿಗಳಾಗಿ ಗ್ರಾ.ಪಂ. ಸದಸ್ಯೆ ಹಾಗೂ ಎ.ಪಿ.ಸಿ.ಎಂ.ಎಸ್. ನಿರ್ದೇಶಕಿ ದರ್ಶಿನಿ ದೇಚಮ್ಮ, ಕೊಡಗು ಪತ್ರಕರ್ತರ ವೇದಿಕೆಯ ಅಧ್ಯಕ್ಷ ಶ್ರೀಧರ್ ನೆಲ್ಲಿತ್ತಾಯ ಉಪಸ್ಥಿತರಿದ್ದು, ಯೋಗದ ಮಹತ್ವದ ಕುರಿತು ಮಾತನಾಡಿದರು. ಪದ್ಮನಾಭ ಯೋಗ ನಡೆಸಿಕೊಟ್ಟರು.