ಗೋಣಿಕೊಪ್ಪಲು, ಜೂ. 23: ಪಟ್ಟಣದಲ್ಲಿರುವ ಕೆಲವು ಕೋಳಿ ಮಾಂಸ ಅಂಗಡಿಗಳಲ್ಲಿ ಕೊಳೆತ ಮಾಂಸ ಮಾರುತ್ತಿದ್ದು, ಮಾಂಸ ಪ್ರಿಯರಿಗಿದು ವಿಷವಾಗುತ್ತಿದೆ ಎಂಬ ಆಕ್ಷೇಪ ಕೇಳಿ ಬಂದಿದೆ.

ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು ಹದಿನಾರಕ್ಕೂ ಹೆಚ್ಚು ಕೋಳಿ ಮಾಂಸ ಮಳಿಗೆಗಳಿವೆ. ಆದರೆ ಕೆಲವು ಮಾಂಸ ಅಂಗಡಿಗಳಲ್ಲಿ ಕೊಳೆತ ಹಾಗೂ ಎರಡು-ಮೂರು ದಿನಗಳಿಂದ ಸಂಗ್ರಹಿಸಿಟ್ಟ ಮಾಂಸ ಮಾರಾಟ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪವಿದೆ.

ಪೊನ್ನಂಪೇಟೆ ರಸ್ತೆ ತಿರುವಿನ ಎಡಬದಿಯಲ್ಲಿರುವ ಮಾಂಸದ ಅಂಗಡಿಯಲ್ಲಿ ಕೊಳೆತ ಮಾಂಸ ಮತ್ತು ಮೂರು ದಿನ ಸಂಗ್ರಹಿಸಿಟ್ಟ ಮಾಂಸವನ್ನು ಗ್ರಾಹಕರಿಗೆ ನೀಡಿ ವಂಚಿಸುತ್ತಿದ್ದಾರೆ. ಕೊಳೆತ ಮಾಂಸ ನೀಡುತ್ತಿರುವ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಸಾರ್ವಜನಿಕರ ಮೇಲೆಯೇ ಹರಿಹಾಯುತ್ತಾನೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದರೆ ಮಾಧ್ಯಮದವರ ಮೇಲೆಯೂ ಗರಂಆಗಿಯೇ ಪೊಲೀಸರಿಗೆ ದೂರು ನೀಡುವದಾಗಿ ತಪ್ಪನ್ನು ಮುಚ್ಚಲು ಪ್ರಯತ್ನಿಸಲಾಗಿದೆ.

ಅಲ್ಲದೆ ಕೋಳಿ ಶುದ್ಧೀಕರಿಸಿದ ತ್ಯಾಜ್ಯಗಳನ್ನು ಚರಂಡಿ ಹಾಗೂ ಸಮೀಪದ ಕೀರೆ ಹೊಳೆಗೆ ಸುರಿದು ಮಾಲಿನ್ಯಗೊಳಿಸುತ್ತಿರುವದು ಕಂಡು ಬಂದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಗ್ರಾ.ಪಂ. ನಿರ್ಲಕ್ಷ್ಯ ವಹಿಸಿರುವದು ಸಾರ್ವಜನಿಕ ವಲಯದಲ್ಲಿ ಅನುಮಾನಕ್ಕೆ ಕಾರಣವಾಗಿದೆ.

ಪಟ್ಟಣದಲ್ಲಿರುವ 16 ಅಂಗಡಿಗಳಲ್ಲಿ ಕೆಲವು ಮಾಂಸ ಅಂಗಡಿಗಳು ಪಂಚಾಯಿತಿಯಿಂದ ಪರವಾನಗಿ ಹೊಂದದೆ ಮತ್ತು ನವೀಕರಣಗೊಳಿಸದೆ ಅನಧಿಕೃತವಾಗಿ ವಹಿವಾಟು ನಡೆಸುತ್ತಿವೆ. ನಿಯಮ ಪ್ರಕಾರ ಕೋಳಿ ಅಂಗಡಿಗಳಲ್ಲಿ ಮಾರಾಟ ಮಾಡುವ ಮಾಂಸವನ್ನು ಪ್ರತಿನಿತ್ಯ ಪಂಚಾಯಿತಿ ಪರೀಕ್ಷೆ ಗೊಳಪಡಿಸಿ, ಮಾರಾಟಕ್ಕೆ ಅನುವು ಮಾಡಿಕೊಡಬೇಕು. ಆದರೆ ಪಂಚಾಯಿತಿ ಕನಿಷ್ಟ ವರ್ಷಕ್ಕೆ ಒಮ್ಮೆಯೂ ಮಾಂಸದ ಅಂಗಡಿ ಶುಚಿತ್ವದ ಬಗ್ಗೆ ಗಮನ ಹರಿಸುತ್ತಿಲ್ಲ.

ಹದಿನಾರು ಮಾಂಸದ ಅಂಗಡಿಗಳಲ್ಲಿ ಹದಿನಾರು ರೀತಿಯ ಬೆಲೆ ನಿಗದಿಪಡಿಸಿ ಮಾರಾಟ ಮಾಡಲಾಗುತ್ತಿದೆ. ಮಾರುಕಟ್ಟೆ ವ್ಯಾಪ್ತಿಯಲ್ಲಿರುವ ಕೋಳಿ ಮಾಂಸ ಮಳಿಗೆಯಲ್ಲೂ ಶುಚಿತ್ವದ ಕೊರತೆ ಎದುರಾಗಿದೆ. ಪ್ರತಿ ಮಾಂಸದ ಮಳಿಗೆಗಳು ನೊಣಗಳ ವಾಸಸ್ಥಾನವಾಗಿದೆ. ಈ ಬಗ್ಗೆ ಕೂಡಲೆ ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಪಂಚಾಯಿತಿ ಎದುರು ಪ್ರತಿಭಟನೆ ನಡೆಸುತ್ತೇವೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

- ಎನ್.ಎನ್. ದಿನೇಶ್