ಗೋಣಿಕೊಪ್ಪಲು, ಜೂ. 23 : ಒಲಂಪಿಕ್ ದಿನಾಚರಣೆಯನ್ನು ಅಶ್ವಿನಿ ಸ್ಪೋಟ್ರ್ಸ್ ಫೌಂಡೇಷನ್ ವತಿಯಿಂದ ಕಾಲ್ಸ್ ಶಾಲೆಯಲ್ಲಿ ಒಲಂಪಿಕ್ ಡೇ ರನ್ ಮೂಲಕ ಆಚರಿಸಲಾಯಿತು.

ಕಾಲ್ಸ್ ಶಾಲೆಯ ಅಥ್ಲೆಟಿಕ್ಸ್ ಎರೇನದಿಂದ ಪೊನ್ನಂಪೇಟೆವರೆಗೆ ವಿದ್ಯಾರ್ಥಿಗಳೊಂದಿಗೆ ಸಾರ್ವಜನಿಕರು ರಸ್ತೆ ಓಟದಲ್ಲಿ ಪಾಲ್ಗೊಂಡಿದ್ದರು. ಹಿರಿಯರ ವಿಭಾಗಕ್ಕೆ ಪೊನ್ನಂಪೇಟೆ ಬಸ್ ನಿಲ್ದಾಣ ಹಾಗೂ ಕಿರಿಯರ ವಿಭಾಗಕ್ಕೆ ಗೋಣಿಕೊಪ್ಪ ಬಸ್ ನಿಲ್ದಾಣದವರೆಗೆ ಓಡುವ ಅವಕಾಶ ನೀಡಲಾಯಿತು. ಕಾಲ್ಸ್ ಶಾಲೆಯ ವಿದ್ಯಾರ್ಥಿಗಳೊಂದಿಗೆ ಲಯನ್ಸ್ ಶಾಲೆ, ಸಾಯಿಶಂಕರ್ ಶಾಲೆ ಸೇರಿದಂತೆ ಸುತ್ತಮುತ್ತಲಿನ ಶಾಲೆಗಳ ಸುಮಾರು 200 ವಿದ್ಯಾರ್ಥಿಗಳು ಪಾಲ್ಗೊಂಡರು. ಅಂತರ್ರಾಷ್ಟ್ರೀಯ ಹಿರಿಯ ಓಟಗಾರ ಪೆಮ್ಮಂಡ ಅಪ್ಪಯ್ಯ ಉತ್ಸಾಹದಿಂದ ಪಾಲ್ಗೊಂಡು ವಿದ್ಯಾಥಿಗಳಲ್ಲಿ ಉತ್ಸಾಹ ತುಂಬಿದರು. ಓಟದಲ್ಲಿ ಪಾಲ್ಗೊಂಡ ವರಿಗೆ ಪ್ರಶಸ್ತಿ ಪತ್ರ ವಿತರಿಸಲಾಯಿತು.

ವೃತ್ತ ನಿರೀಕ್ಷಕ ಪಿ. ಕೆ. ರಾಜು ಧ್ವಜ ಹಾರಿಸುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭ ಕಾಲ್ಸ್ ಶಾಲೆ ಪ್ರಾಂಶುಪಾಲೆ ಗೌರಮ್ಮ, ದೈಹಿಕ ತರಬೇತುದಾರರುಗಳಾದ ಚೇತನ್, ದೀಪಕ್ ಕುಮಾರ್ ಉಪಸ್ಥಿತರಿದ್ದರು.