ಸೋಮವಾರಪೇಟೆ, ಜೂ. 23: ದುಶ್ಚಟಮುಕ್ತ ಸಮಾಜದಿಂದ ಮಾತ್ರ ಸದೃಢ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಕಿರಿಕೊಡ್ಲಿ ಮಠದ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ಅಭಿಪ್ರಾಯಿಸಿದರು.

ಅಬ್ಬೂರುಕಟ್ಟೆ ಚaರ್ಚ್ ಹಾಲ್‍ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಮತ್ತು ಸೋಮವಾರಪೇಟೆ ನವಜೀವನ ಸಮಿತಿಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ನವಜೀವನ ಸಮಿತಿ ಸದಸ್ಯರ ವಾರ್ಷಿಕೋತ್ಸವ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ವಹಿಸಿ ಅವರು ಆಶೀರ್ವಚನ ನೀಡಿದರು.

ಕುಡಿತ ಎಂಬದು ತನ್ನ ಆರೋಗ್ಯವನ್ನು ಹಾಳು ಮಾಡುವದಲ್ಲದೆ, ಕುಟುಂಬವನ್ನೇ ಬೀದಿಪಾಲಾಗಿಸುತ್ತದೆ. ಇದನ್ನೆಲ್ಲ ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರು, ಸಾವಿರಕ್ಕೂ ಅಧಿಕ ಮದ್ಯವರ್ಜನ ಶಿಬಿರಗಳನ್ನು ಆಯ್ದ ಭಾಗಗಳಲ್ಲಿ ಆಯೋಜಿಸಿ, ಹಂತ ಹಂತವಾಗಿ ಯಶಸ್ಸು ಕಾಣುತ್ತಿರುವದು ಶ್ಲಾಘನೀಯ ಕಾರ್ಯ ಎಂದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿಲ್ಲಾ ಜನಜಾಗೃತಿ ಸಮಿತಿ ಸ್ಥಾಪಕಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಗಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್, ಸಮಾರಂಭವನ್ನು ಉದ್ಘಾಟಿಸಿದ ಎಸ್.ಎಂ. ಡಿಸಿಲ್ವಾ, ಸಿಂಥಿಯಾ ಡಿಸಿಲ್ವಾ, ಅಧ್ಯಕ್ಷತೆ ವಹಿಸಿದ್ದ ನೇರುಗಳಲೆ ಗ್ರಾ.ಪಂ. ಅಧ್ಯಕ್ಷ ತಿಮ್ಮಯ್ಯ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಅರುಣ್ ಕುಮಾರ್ ಬಾಣಂಗಳ, ಅಬ್ಬೂರುಕಟ್ಟೆ ಚರ್ಚ್‍ನ ಧರ್ಮಗುರು ಫಾ. ಜೋಸೆಫ್ ಅಲೆಕ್ಸಾಂಡರ್, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗಿರೀಶ್ ಅವರುಗಳು ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.

ವೇದಿಕೆಯಲ್ಲಿ ಪ್ರಗತಿಪರ ಕೃಷಿಕ ಜಗನ್ನಾಥ್, ಯೋಜನೆಯ ಮೇಲ್ವಿಚಾರಕ ರಮೇಶ್, ಸೇವಾ ಪ್ರತಿನಿಧಿಗಳಾದ ಶೈಲಾ, ತಾರಾಮಣಿ, ಚೈತ್ರಾ ಇದ್ದರು.

ಸಮಾರಂಭಕ್ಕೆ ಮುನ್ನ ಅಬ್ಬೂರುಕಟ್ಟೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಿತು. ಸಮಾರಂಭದಲ್ಲಿ ಯೋಜನೆಯ ವಿವಿಧ ಒಕ್ಕೂಟಗಳ ಪದಾಧಿಕಾರಿಗಳು, ಯೋಜನೆಯ ಸದಸ್ಯರುಗಳು, ಸೇವಾನಿರತರು, ವಿವಿಧ ನವಜೀವನ ಸಮಿತಿಗಳ ಸದಸ್ಯರುಗಳು ಹಾಗೂ ಗ್ರಾಮಸ್ಥರುಗಳು ಪಾಲ್ಗೊಂಡಿದ್ದರು.