ಸಿದ್ದಾಪುರ, ಜೂ. 23: ಪೊಲೀಸ್ ಇಲಾಖೆಯ ವತಿಯಿಂದ ನಗದು ರಹಿತ ವ್ಯವಹಾರಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಿದ್ದಾಪುರ ಠಾಣಾಧಿಕಾರಿ ಜಿ.ಕೆ ಸುಬ್ರಮಣ್ಯ ಅಧ್ಯಕ್ಷತೆಯಲ್ಲಿ ಸಿದ್ದಾಪುರ ಪಂಚಾಯಿತಿ ಸಭಾಂಗಣದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಠಾಣಾಧಿಕಾರಿ ಸುಬ್ರಮಣ್ಯ ಯಾರೂ ಕೂಡ ಮನೆಯಲ್ಲಿ ದೊಡ್ಡ ಮೊತ್ತದ ನಗದು ಹಣವನ್ನು ಇಡದಂತೆ ಮನವಿ ಮಾಡಿದರು. ಅಲ್ಲದೆ ಹೆಚ್ಚಿನ ವ್ಯವಹಾರಗಳಿಗೆ ನಗದು ರಹಿತ ಬ್ಯಾಂಕ್‍ನ ಮೂಲಕ ವ್ಯವಹಾರ ನಡೆಸುವಂತೆ ಕಿವಿ ಮಾತು ಹೇಳಿದರು. ಹಲವರು ದೂರವಾಣಿ ಸಂದೇಶಗಳಿಗೆ ಸಿಲುಕಿ ಹಣ ಕಳೆದುಕೊಂಡಿರುವ ಘಟನೆಗಳು ನಡೆದಿರುವ ಹಿನ್ನಲೆಯಲ್ಲಿ ಇಂಥಹ ತಪ್ಪು ಸಂದೇಶಗಳ ಬಗ್ಗೆ ಎಚ್ಚರವಹಿಸಬೇಕೆಂದು ಕರೆ ನೀಡಿದರು. ಯಾರಿಗೂ ಎ.ಟಿ.ಎಂ. ಕಾರ್ಡಿನ ಹಾಗೂ ಬ್ಯಾಂಕ್ ಖಾತೆಯ ಸಂಖ್ಯೆಗಳನ್ನು ತಿಳಿಸಬಾರದು ಗೌಪ್ಯವಾಗಿಡಬೇಕೆಂದರು.

ನೆಲ್ಯಹುದಿಕೇರಿ ಗ್ರಾಮದ ಕಾರ್ಪೋರೇಷನ್ ಬ್ಯಾಂಕ್ ವ್ಯವಸ್ಥಾಪಕÀ ಶ್ರೀನಿವಾಸರೆಡ್ಡಿ ಮಾತನಾಡಿ ಬ್ಯಾಂಕಿನ ಎಲ್ಲ್ಲಾ ಖಾತೆದಾರರು ತಮ್ಮ ಖಾತೆಗಳಿಗೆ ಆಧಾರ್ ಲಿಂಕ್ ಮಾಡುವಂತೆ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು ,ಈಗಾಗಲೇ ನಗದು ರಹಿತ ವ್ಯವಹಾರ ಜಾರಿಗೆ ಬಂದಿದ್ದು ಇಂಟರ್ ನೆಟ್ ವ್ಯವಸ್ಥೆಯ ಮೂಲಕ ಬ್ಯಾಂಕ್ ವ್ಯವಹಾರ ನಡೆಸಬಹುದು ಎಂದು ತಿಳಿಸಿದರು.

ಸಿದ್ದಾಪುರ ವಿಜಯ ಬ್ಯಾಂಕ್ ವ್ಯವಸ್ಥಾಪಕ ಪ್ರಶಾಂತ್ ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಎಸ್.ಎಸ್ ನಾಗರಾಜ್ ಸಭೆಯಲ್ಲಿ ಮಾಹಿತಿ ನೀಡಿದರು.

ಸಿದ್ದಾಪುರ ಚೇಂಬರ್ ಆಫ್ ಕಾಮರ್ಸ್‍ನ ಪದಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷದ ಪದಾಧಿಕಾರಿಗಳು, ವರ್ತಕರು ಹಾಜರಿದ್ದರು.