ಕೂಡಿಗೆ, ಜೂ. 23 : ಒಳಚರಂಡಿ ಮತ್ತು ನೀರು ಸರಬರಾಜು ಮಂಡಳಿ ವತಿಯಿಂದ ಹೆಬ್ಬಾಲೆ, ತೊರೆನೂರು, ಶಿರಂಗಾಲ, ಮುಳ್ಳುಸೋಗೆವರೆಗೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೆ ಈ ವ್ಯಾಪ್ತಿಗಳಲ್ಲಿ ನೀರು ಸರಬರಾಜು ಮಾಡುವ ನೀರುಗಂಟಿಗಳಿಗೆ (ವಾಟರ್ ಮ್ಯಾನ್) ಒಂಭತ್ತು ತಿಂಗಳಿಂದ ಸಂಬಳ ನೀಡದ ಹಿನ್ನೆಲೆಯಲ್ಲಿ ನೀರುಗಂಟಿಗಳು ಈ ವ್ಯಾಪ್ತಿಯ ಗ್ರಾಮಗಳಿಗೆ ನೀರು ಸರಬರಾಜು ಮಾಡುವದನ್ನು ಸ್ಥಗಿತಗೊಳಿಸಿದರು. ಹೆಬ್ಬಾಲೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳಿಂದ ನೀರನ್ನು ಸರಬರಾಜು ಮಾಡದ ಹಿನ್ನೆಲೆಯಲ್ಲಿ ಗ್ರಾಮದ ನೂರಾರು ಮಹಿಳೆಯರು ಮತ್ತು ಪುರುಷರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪಂಚಾಯಿತಿಯಲ್ಲಿ ನಡೆಯುತ್ತಿದ್ದ ತುರ್ತು ಸಭೆಯ ಸಭಾಂಗಣದಲ್ಲೇ ಖಾಲಿ ಬಿಂದಿಗೆಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ನೀರು ಸ್ಥಗಿತಗೊಂಡಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಿದ ಅಧ್ಯಕ್ಷರು, ಸದಸ್ಯರುಗಳು ನೀರು ಸರಬರಾಜು ಮಾಡಲು ಪಿಡಿಓಗೆ ಸೂಚನೆ ನೀಡಿದರು. ಅದರಂತೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿ ಕ್ರಮಕೈಗೊಳ್ಳುವದಾಗಿ ತಿಳಿಸಿದರು.

ಒಳಚರಂಡಿ ಮಂಡಳಿ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ ಅವರಿಗೆ ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ದೂರವಾಣಿ ಮೂಲಕ ಈ ವಿಚಾರವನ್ನು ತಿಳಿಸಿದ ಹಿನ್ನೆಲೆಯಲ್ಲಿ ಚಂದ್ರಕಲಾ ಅವರು ಮಂಡಳಿಯ ಕಾರ್ಯನಿರ್ವಹಣಾಧಿಕಾರಿಗೆ ಸೂಚನೆ ನೀಡಿದರು. ಕಾರ್ಯನಿರ್ವಹಣಾಧಿಕಾರಿ ನೀರುಗಂಟಿಗಳಿಗೆ ಸಂಬಳ ನೀಡುವದಾಗಿ ಭರವಸೆ ನೀಡಿದ ನಂತರ ನೀರುಗಂಟಿಗಳು ಆಯಾ ವಾರ್ಡಿನ ವ್ಯಾಪ್ತಿಗಳಿಗೆ ನೀರನ್ನು ಸರಬರಾಜು ಮಾಡಿದರು.